ಅಲ್ಪಸಂಖ್ಯಾತರ ವಿರುದ್ಧ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸುವವವರ ವಿರುದ್ಧ ಕ್ರಮ ಕೈಗೊಳ್ಳಿ: ಎಚ್‌.ಡಿ.ದೇವೇಗೌಡ

ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಕೆಟ್ಟದಾಗಿ ಬಿಂಬಿಸುತ್ತಿರುವುದು ತುಂಬಾ ದುರದೃಷ್ಟಕರ. ಸಮುದಾಯದ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇಡೀ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಕೆಟ್ಟದಾಗಿ ಬಿಂಬಿಸುತ್ತಿರುವವರ ವಿರುದ್ಧ ತಕ್ಷಣ ಕಾನೂನು ಕ್

Published: 06th April 2020 02:05 PM  |   Last Updated: 06th April 2020 02:05 PM   |  A+A-


Posted By : Sumana Upadhyaya
Source : UNI

ಬೆಂಗಳೂರು: ಕೊರೋನಾ ಸೋಂಕು ಹರಡಲು ಇಡೀ ಸಮುದಾಯವೇ ಕಾರಣವೆಂಬಂತೆ ಗುರಿ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಕೆಟ್ಟದಾಗಿ ಬಿಂಬಿಸುತ್ತಿರುವುದು ತುಂಬಾ ದುರದೃಷ್ಟಕರ. ಸಮುದಾಯದ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇಡೀ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಕೆಟ್ಟದಾಗಿ ಬಿಂಬಿಸುತ್ತಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಕೊರೋನಾ ಮಹಾಮಾರಿಯಿಂದ ಜನರನ್ನು ರಕ್ಷಿಸಲು ಮತ್ತು ರಾಜ್ಯದಲ್ಲಿನ ಇತರ ಪ್ರದೇಶಗಳಿಗೆ ಹರಡದಂತೆ ತಡೆಗಟ್ಟಲು ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಜಾರಿಗೊಳಿಸುತ್ತಿರುವ ಲಾಕ್‌ಡೌನ್‌ಗೆ ನಮ್ಮ ಪಕ್ಷದ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚೆಗೆ ದಿಲ್ಲಿಯ ಧಾರ್ಮಿಕ ಸಮಾವೇಶದಲ್ಲಿ ಭಾಗಿಯಾಗಿ ರಾಜ್ಯಕ್ಕೆ ವಾಪಾಸಾಗಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರನ್ನು ಗುರುತಿಸಲು ಅವರನ್ನು ತಪಾಸಣೆಗೆ ಒಳಪಡಿಸಲು ಮತ್ತು ಅಗತ್ಯವಿರುವ ಚಿಕಿತ್ಸೆಯನ್ನು ನೀಡಿ ಅವರನ್ನು ಕ್ವಾರಂಟೈನ್‌ ಮಾಡಲು ಜರಗಿಸಿರುವ ಅತ್ಯವಶ್ಯ ಕ್ರಮಗಳಿಗೆ ಸರ್ಕಾರವನ್ನು ಅಭಿನಂದಿಸುತ್ತೇನೆ. ಆದರೆ ಈ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೆಲವು ಕೃತ್ಯಗಳಿಂದ ಕೊರೋನಾ ಸೋಂಕು ಹರಡಲು ಇಡೀ ಸಮುದಾಯವೇ ಕಾರಣವೆಂಬಂತೆ ಗುರಿ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟದಾಗಿ ಬಿಂಬಿಸುತ್ತಿರುವುದು ದುರದೃಷ್ಟಕರ. ಸಮುದಾಯದ ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕೊರೋನಾ ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡುತ್ತಿರುವ ವೈದ್ಯರು, ದಾದಿಯರು, ನೈರ್ಮಲ್ಯ ಕಾರ್ಮಿಕರು ಆಶಾ ಕಾರ್ಯಕರ್ತೆಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಯವರ ಸೇವೆ ತುಂಬಾ ಶ್ಲಾಘನೀಯ. ಅವರು ನೀಡುತ್ತಿರುವ ವೈದ್ಯಕೀಯ ಸೇವೆ ಅನನ್ಯ. ಇಂತಹ ತ್ಯಾಗಮಯಿ ತಂಡದ ಮೇಲೆ ರಾಜ್ಯದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಹಲ್ಲೆಗಳು ವೈದ್ಯರನ್ನು ಮತ್ತು ಆರೋಗ್ಯ ಕಾರ್ಯಕರ್ತರನ್ನು ಧೃತಿಗೆಡಿಸಿವೆ. ಆದ್ದರಿಂದ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಈ ಕಾರ್ಯಕರ್ತರಿಗೆ ಅಗತ್ಯವಿರುವ ಎಲ್ಲಾ ರೀತಿಯ ರಕ್ಷಣೆಯನ್ನು ಸರ್ಕಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಮಾಡಿರುವ ಸಂಪೂರ್ಣ ಲಾಕ್‌ಡೌನ್‌ನಿಂದ ಕೆಲವೊಂದು ಶೋಷಿತ ವರ್ಗಕ್ಕೆ ಸೇರಿದ ವಲಸೆ ಕಾರ್ಮಿಕರು ಅಪಾರ ರೀತಿಯಲ್ಲಿ ಬಳಲಿದ್ದಾರೆ. ರಾಜ್ಯದ ರಾಜಧಾನಿ ಬೆಂಗಳೂರು ಒಳಗೊಂಡಂತೆ ಇತರ ನಗರ ಪ್ರದೇಶಗಳಿಗೆ ಕಲಬುರಗಿ, ರಾಯಚೂರು ಮತ್ತು ವಿಜಯಪುರ ಮುಂತಾದ ಪ್ರದೇಶಗಳಿಂದ ಉದ್ಯೋಗ ಅರಸಿ ಲಕ್ಷಾಂತರ ಕಾರ್ಮಿಕರು ಈ ನಗರಗಳಿಗೆ ಬಂದಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಸರಪಳಿ ತಪ್ಪಿಸಲು 21 ದಿನಗಳ ದೇಶಾದ್ಯಂತ ಘೋಷಿತವಾಗಿರುವ ಲಾಕ್‌ಡೌನ್‌ನಿಂದ ಉದ್ಯೋಗ ಅರಸಿ ವಲಸೆ ಬಂದಿರುವ ಈ ಕಾರ್ಮಿಕರು ಉದ್ಯೋಗ ದೊರಕದೆ ಅನಿಶ್ಚಿತೆ ಹಿನ್ನೆಲೆಯಲ್ಲಿ ತವರೂರುಗಳತ್ತ ಹೊರಟಿದ್ದಾರೆ. ಆದರೆ ಏಕಾಏಕಿ ಹೇರಲಾದ ಲಾಕ್‌ಡೌನ್‌ನಿಂದಾಗಿ ದೊರೆಯದಿರುವ ರಾಜ್ಯ ಸರ್ಕಾರದ ಸಾರಿಗೆ ಸಂಪರ್ಕದಿಂದ ಸರ್ಕಾರದ ಮನವಿಗೆ ಕಿವಿಗೊಡದೆ ಈ ಕಾರ್ಮಿಕರು ಕಾಲ್ನಡಿಗೆ, ಸೈಕಲ್, ಬೈಕ್, ಲಾರಿ, ಟ್ರ್ಯಾಕ್ಟರ್ ಮೂಲಕ ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಸರ್ಕಾರವು ರಾಜ್ಯದ ಗಡಿಗಳನ್ನು ಬಂದ್ ಮಾಡಿದ್ದು, ಈ ಕಾರ್ಮಿಕರು ತ್ರಿಶಂಕುವಿನ ಪರಿಸ್ಥಿತಿಯಲ್ಲಿದ್ದಾರೆ ಎಂದು ದೇವೇಗೌಡ ಪತ್ರದಲ್ಲಿ ವಿವರಿಸಿದ್ದಾರೆ.

 ರಾಜ್ಯದಲ್ಲಿರುವ 14 ಜಿಲ್ಲಾ ಹಾಲಿನ ಒಕ್ಕೂಟಗಳಲ್ಲಿ ಪ್ರತಿದಿನ ಸುಮಾರು 8.84 ಲಕ್ಷ ಲೀಟರ್‌ಗಳಷ್ಟು ಹಾಲು ಹೆಚ್ಚುವರಿಯಾಗಿ ಉಳಿಯುತ್ತಿದ್ದು, ದೇಶಾದ್ಯಂತ ಲಾಕ್‌ಡೌನ್‌ ವೇಳೆಯಿಂದ ಈ ಹೆಚ್ಚುವರಿ ಹಾಲನ್ನು ವ್ಯವಸ್ಥಿತ ರೀತಿಯಲ್ಲಿ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಹೆಚ್ಚುವರಿ ಹಾಲನ್ನು ಆಯಾ ಹಾಲಿನ ಒಕ್ಕೂಟಗಳ ವ್ಯಾಪ್ತಿಯಲ್ಲಿರುವ ನಿರಾಶ್ರಿತರು, ಕೊಳಚೆ ಪ್ರದೇಶದ ನಿವಾಸಿಗಳು ಮತ್ತು ಕೂಲಿ ಕಾರ್ಮಿಕರಿಗೆ ಪ್ರತಿದಿನ ಒಂದು ಲೀಟರ್‌ನಂತೆ ಉಚಿತವಾಗಿ ವಿತರಿಸಲು ಆದೇಶಿಸಿರುವುದು ಸ್ವಾಗತಾರ್ಹ. ಈ ಸೌಲಭ್ಯವನ್ನು ಇತರ ವರ್ಗದ ದಿನಗೂಲಿ ಆಧಾರದಲ್ಲಿ ಬದುಕು ನಡೆಸುತ್ತಿರುವ ಬಡ ಕುಟುಂಬಗಳಿಗೂ ವಿಸ್ತರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಾಜ್ಯದ ರೈತ ಕಳೆದ ವರ್ಷ ಸಂಭವಿಸಿದ ನೆರೆ ಹಾವಳಿಯಿಂದ ಮತ್ತು ಕೊರೋನಾ ಸೋಂಕು ತಡೆಗಟ್ಟು ವಿಧಿಸಿರುವ ಲಾಕ್‌ಡೌನ್‌ನಿಂದ ತತ್ತರಿಸಿ ಹೋಗಿದ್ದಾನೆ. ಇಂತಹ ಸಂದರ್ಭದಲ್ಲಿಯೂ ಸಹ ಗ್ರಾಮೀಣ ರೈತರು ಹೈನುಗಾರಿಕೆಯಿಂದ ತಮ್ಮ ಜೀವನ ನಡೆಸಲು ಸಾಧ್ಯವಾಗಿದ್ದು, ಈ ಕ್ಷೇತ್ರವನ್ನು ಹೆಚ್ಚು ಬಲಪಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ರೈತರಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸುವ ವ್ಯವಸ್ಥೆಯನ್ನು ಮಾಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಇದು ಸುಲಭ ಸಾಧ್ಯ ಕೆಲಸವಲ್ಲ. ನೂರಾರು ಮೈಲು ದೂರದಲ್ಲಿರುವ ರೈತನಿಂದ ಪ್ರತಿನಿತ್ಯ ಸ್ಥಳದಲ್ಲಿಯೇ ಹಣ್ಣು ಹಂಪಲು ಮತ್ತು ತರಕಾರಿ ಸಂಗ್ರಹಣೆ, ಮಾರಾಟ ಮಾಡುವ ವ್ಯವಸ್ಥೆ ಇಲ್ಲ. ಕೇರಳದಲ್ಲಿ ಇರುವಂತೆ ಸರ್ಕಾರವೇ ರೈತನ ಹತ್ತಿರ ಹೋಗಿ ಸ್ಥಳದಲ್ಲಿಯೇ ನಗದು ಹಣ ನೀಡಿ, ನ್ಯಾಯಬೆಲೆ ಆಧಾರದ ಮೇಲೆ ಹಣ್ಣು ತರಕಾರಿಕೊಳ್ಳಲು ರಾಜ್ಯದಲ್ಲಿ ನೀತಿ ಮೂಲಭೂತ ವ್ಯವಸ್ಥೆಯ ಕೊರತೆಯಿದೆ ಎಂದು ದೇವೇಗೌಡ ಹೇಳಿದ್ದಾರೆ.

ಆದ್ದರಿಂದ ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಸಂಚರಿಸಿ, ಕೇರಳ ರಾಜ್ಯದಲ್ಲಿ ಇರುವ ರೀತಿಯಲ್ಲಿ ಪ್ರತಿನಿತ್ಯ ಸ್ಥಳದಲ್ಲಿ ನಗದು ಹಣ ಪಾವತಿಸಿ ರೈತ ಬೆಳೆದಿರುವ ಹಣ್ಣು ಹಂಪಲು ಮತ್ತು ತರಕಾರಿ ಕೊಳ್ಳಲು ಜಿಲ್ಲಾ ಆಡಳಿತ ಮುಖೇನ ವ್ಯವಸ್ಥೆ ಮಾಡಬೇಕು. ಒಂದು ವೇಳೆ ರೈತ ಬೆಳೆದ ಹಣ್ಣು, ತರಕಾರಿ ಫಸಲಿಗೆ ಬೆಲೆ ಮತ್ತು ಬೇಡಿಕೆ ಇಲ್ಲದೆ ರೈತ ಕೊಯ್ಲು ಮಾಡಲು ವಿಫಲವಾದಲ್ಲಿ, ಅಂತಹ ರೈತನಿಗೆ ನ್ಯಾಯಯುತವಾದ ಮತ್ತು ರೈತನು ಆ ತರಕಾರಿ ಮತ್ತು ಹಣ್ಣನ್ನು ಬೆಳೆಯಲು ತಗುಲಿರುವ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ಆ ರೈತನಿಗೆ ಸೂಕ್ತ ಪರಿಹಾರ ನೀಡಬೇಕು. ಇಂತಹ ಒಂದು ವಿನೂತನ ಕ್ರಮದಿಂದ ರೈತ ಸಮುದಾಯವನ್ನು ತಾವು ಅವನತಿ ಅಂಚಿನಿಂದ ಹೊರತಂದಂತಾಗುತ್ತದೆ ಮತ್ತು ನಿಮಗೆ ಮತ್ತು ನಿಮ್ಮ ಸರ್ಕಾರಕ್ಕೆ ಕೀರ್ತಿ ಬರುತ್ತದೆ, ಈ ದಿಶೆಯಲ್ಲಿ ತಾವು ಅಗತ್ಯ ಕ್ರಮ ಕೈಗೊಳ್ಳುತ್ತೀರಿ ಎಂದು ನಂಬುತ್ತೇನೆ ಎಂದು ಪತ್ರದಲ್ಲಿ ದೇವೇಗೌಡ ತಿಳಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp