ಬೆಂಗಳೂರು: ಮಹಿಳೆಯ ಕೊಲೆಗೆ ಯತ್ನ; ಆರೋಪಿ ಬಂಧನ

ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಿಳೆಯೊಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಉತ್ತರಹಳ್ಳಿಯ ಶಿವಕುಮಾರ್ (40) ಬಂಧಿತ ಆರೋಪಿ. ಏ.1 ರಂದು ಆರೋಪಿಯು ಮಹಿಳೆಯನ್ನು ಉಸಿರಗಟ್ಟಿಸಿ ಕೊಲೆಗೆಯತ್ನಿಸಿ ಪರಾರಿಯಾಗಿದ್ದು ಅಸ್ವಸ್ಥರಾಗಿದ್ದ ಮಹಿಳೆಯನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚೆನ್ನಸಂದ್ರ  ಮುಖ್ಯರಸ್ತೆಯಲ್ಲಿ ಗ್ರಾನೈಟ್ ವ್ಯವಹಾರ ನಡೆಸುತ್ತಿದ್ದ ಶಿವಕುಮಾರ್‌ಗೆ ವಿವಾಹವಾಗಿದ್ದು, ಓರ್ವ ಪುತ್ರನಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 3 ವರ್ಷಗಳ ಹಿಂದೆ ಪತಿ ತೊರೆದಿದ್ದ ಸಂತ್ರಸ್ತ ಮಹಿಳೆಯು ಪುತ್ರಿ ಜತೆ ಬಿಇಎಲ್ ಬಡಾವಣೆಯಲ್ಲಿ ವಾಸಿಸುತ್ತಿದ್ದರು.

ಇತ್ತೀಚೆಗೆ ಗ್ರಾನೈಟ್ ಖರೀದಿಗೆ ಮಹಿಳೆ ಹೋದಾಗ ಶಿವಕುಮಾರ್ ಅವರ ಪರಿಚಯವಾಗಿ ನಂತರ ಅವರ ನಡುವೆ ಸಲುಗೆ ಉಂಟಾಗಿತ್ತು. ಈ ವಿಷಯ ಶಿವಕುಮಾರ್ ಪತ್ನಿಗೆ ತಿಳಿದು ಮನೆಯಲ್ಲಿ ಜಗಳ ಉಂಟಾಗಿತ್ತು. ಮಹಿಳೆ ಜತೆಗಿನ ಸ್ನೇಹ ತೊರೆಯುವಂತೆ ಶಿವಕುಮಾರ್ ಪತ್ನಿ  ಒತ್ತಾಯಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು. ಕಳೆದ ಏ. 1 ರಂದು ಮಹಿಳೆ ಮನೆಗೆ ಹೋಗಿದ್ದ ಶಿವಕುಮಾರ್, ತನ್ನ ಪತ್ನಿಯ ಜತೆಗಿನ ಜಗಳದ ವಿಚಾರವನ್ನು ಹೇಳಿಕೊಂಡಿದ್ದ. ನಮ್ಮಿಬ್ಬರ ಸ್ನೇಹವನ್ನು ಇಲ್ಲಿಗೆ ನಿಲ್ಲಿಸೋಣ, ಮುಂದೆ ಸಂಬಂಧ ಮುಂದುವರೆಸುವುದು  ಬೇಡ ಎಂದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದಾಗ ಶಿವಕುಮಾರ್ ಮಹಿಳೆ ಮುಖವನ್ನು ದಿಂಬಿನಿಂದ ಒತ್ತಿ ಉಸಿರುಗಟ್ಟಿಸಿದ್ದಾನೆ. 

ಆಕೆ ಅಸ್ವಸ್ಥಗೊಂಡಿದ್ದನ್ನು ಕಂಡು ಹೆದರಿ ಪರಾರಿಯಾಗಿದ್ದು, ಕುಟುಂಬದವರು ಮಹಿಳೆಗೆ ಫೋನ್ ಮಾಡಿದಾಗ ಸ್ವೀಕರಿಸದಿದ್ದಾಗ ಆತಂಕಗೊಂಡು ಮನೆಗೆ ಬಂದು ನೋಡಿದಾಗ ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ  ರಾಜರಾಜೇಶ್ವರಿ ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com