ಬೀದರ್ ಧರ್ಮಗುರು ಮೇಲೆ ಹಲ್ಲೆ: ಪೊಲೀಸ್ ಸಿಬ್ಬಂದಿ ಅಮಾನತು

ತರಕಾರಿ ಖರೀದಿಸಿ ವಾಪಸಾಗುತ್ತಿದ್ದ ಧರ್ಮಗುರು ಒಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀದರ್ : ತರಕಾರಿ ಖರೀದಿಸಿ ವಾಪಸಾಗುತ್ತಿದ್ದ ಧರ್ಮಗುರು ಒಬ್ಬರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಎಎಸ್ ಐ ಬಸವರಾಜ್ ಅವರನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ಇಲಾಖೆಯ ತನಿಖೆಗೆ ಆದೇಶಿಸಲಾಗಿದೆ ಎಂದು ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ತಿಳಿಸಿದ್ದಾರೆ.

ಇಲ್ಲಿನ ಮಸ್ಜಿದ್ ಎ ಮುರಾದ್ ನ ಧರ್ಮಗುರು ಹಫೀಝ್ ಶೈಖ್ ನಾಸಿರುದ್ದೀನ್ ಎಂಬವರು ನಿನ್ನೆ ಬೆಳಗ್ಗೆ ತರಕಾರಿ ಖರೀದಿಸಲು ಅಂಗಡಿಗೆ ತೆರಳಿದ್ದರು. ಅಂಗಡಿಯಿಂದ ಹಿಂದಿರುಗುತ್ತಿದ್ದ ವೇಳೆ ಅವರನ್ನು ತಡೆದ ಎಎಸ್ ಐ ಬಸವರಾಜ್ ಲಾಠಿಯಿಂದ ಹಲ್ಲೆ ನಡೆಸಿದ್ದು, ನಾಸಿರುದ್ದೀನ್ ಅವರ ಮೂಗಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ಗುಲ್ಬರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇಮಾಮ್ಸ್ ಕೌನ್ಸಿಲ್ ಖಂಡನೆ; 
ಬೀದರ್ ಜಿಲ್ಲೆಯ ಹುಮನಾಬಾದ್ ಎಂಬಲ್ಲಿ ಜಿಲ್ಲಾ ಆಡಳಿತ ಹೊರಗಡೆ ಹೋಗಲು ಅನುಮತಿಸಿದ ಸಮಯದಲ್ಲಿ ಮಸೀದಿ ಇಮಾಮ್ ಬೆಳಿಗ್ಗೆ ಎಂಟು ಗಂಟೆಗೆ ತರಕಾರಿ ತರಲು ಹೊರಗಡೆ ಹೋದಾಗ ಪೋಲಿಸರು ಜಾತಿ ಧರ್ಮ ನಿಂದನೆ ಮಾಡಿ ನಿಮ್ಮಂತಹ ಮೌಲಾನಾಗಳೇ ಕೊರೋನ ಹರಡುವುದು ಎಂದು ಹೇಳುತ್ತಾ ಲಾಠಿಯಿಂದ ಗಂಭೀರವಾಗಿ ಹಲ್ಲೆ ನಡೆಸಿದ ಕಾರಣ ಜಿಲ್ಲಾ ಆಸ್ಪತ್ರೆಗೆ ದಾಖಲು ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ತೀವ್ರವಾಗಿ ಖಂಡಿಸಿದೆ.


ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಮೌಲಾನಾ ಅತೀಕುರಹಮಾನ್ ಅಶ್ರಫೀ, ಕೊರೋನಾ ಲಾಕ್ ಡೌನ್ ಹೆಸರಿನಲ್ಲಿ ಮುಸ್ಲಿಮ್ ಸಮುದಾಯದವರನ್ನು ಗುರಿಪಡಿಸಿ ನಡೆಸುವ ಅನ್ಯಾಯವನ್ನು ಅಪಪ್ರಚಾರಗಳನ್ನು ಸಹಿಸುವುದಿಲ್ಲ ಎಂದು ಎರಡು ದಿನ ಮುಂಚೆ ಮುಖ್ಯಮಂತ್ರಿಗಳು ಮಾಧ್ಯಮದವರ ಮುಂದೆ ಹೇಳಿದ್ದಾರೆ
.
ಆದರೂ ಬೆರಳೆಣಿಕೆಯ ಪೋಲಿಸರು ಉದ್ದೇಶ ಪೂರ್ವಕವಾಗಿ ಮುಸ್ಲಿಮರನ್ನೇ ಗುರಿಯಾಗಿಸಿ ಧರ್ಮ ನಿಂದನೆ ಮಾಡಿ ಹಲ್ಲೆ ನಡೆಸುವ ಮೂಲಕ ಇಡೀ ಪೋಲಿಸ್ ಇಲಾಖೆಗೆ ಕೆಟ್ಟ ಹೆಸರು ತರುತ್ತಾರೆ ಮತ್ತು ಪೊಲೀಸರಲ್ಲಿ ವಿಶ್ವಾಸ ಕಳೆದು ಕೊಳ್ಳುವಂತೆ ಮಾಡುತ್ತಾರೆ. ಹುಮನಾಬಾದ್ ನಲ್ಲಿ ಕೂಡಾ ಮೌಲಾನಾರ ಮುಂದೆ ನಡೆದು ಕೊಂಡು ಹೋಗುತ್ತಿದ್ದ ಬೇರೆ ಜನರನ್ನು ಏನೂ ಪ್ರಶ್ನೆ ಮಾಡದೇ ಹಾಗೆ ಬಿಟ್ಟು ಮೌಲಾನಾರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಕೆಲವು ಪೋಲಿಸರು ಉದ್ದೇಶ ಪೂರ್ವಕವಾಗಿ ಮುಸ್ಲಿಮರೊಂದಿಗೆ ಈ ರೀತಿಯಲ್ಲಿ ಕೆಟ್ಟದಾಗಿ ವರ್ತಿಸುವುದು ರಾಜ್ಯದ ಬೇರೆ ಕಡೆಗಳಲ್ಲೂ ನಡೆದಿದೆ. ಸರಕಾರ ಮತ್ತು ಪೋಲಿಸ್ ಇಲಾಖೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com