ರೋಗ ಲಕ್ಷಣಗಳೇ ಇಲ್ಲ, ಆದರೂ ಟೆಸ್ಟ್ ಪಾಸಿಟಿವ್: ಅಚ್ಚರಿ ತಂದ ಮಂಡ್ಯ ಕೊರೋನಾ ಸೋಂಕು ಪ್ರಕರಣ

ದೆಹಲಿಯ ತಬ್ಲಿಘಿ ನಂಟಿನ ಬಳಿಕ ಇದೀಗ ನಂಜನಗೂಡು ಕಾರ್ಖಾನೆಯ ನಂಟು ಕೂಡ ಮಂಡ್ಯಕ್ಕೆ ವಕ್ಕರಿಸಿಕೊಂಡಿದೆ. ನಗರದ ಸ್ವರ್ಣ ಸಂದ್ರ ಬಡಾವಣೆಯ ಯುವಕನೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  ಐದಕ್ಕೇರಿದಂತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ದೆಹಲಿಯ ತಬ್ಲಿಘಿ ನಂಟಿನ ಬಳಿಕ ಇದೀಗ ನಂಜನಗೂಡು ಕಾರ್ಖಾನೆಯ ನಂಟು ಕೂಡ ಮಂಡ್ಯಕ್ಕೆ ವಕ್ಕರಿಸಿಕೊಂಡಿದೆ. ನಗರದ ಸ್ವರ್ಣ ಸಂದ್ರ ಬಡಾವಣೆಯ ಯುವಕನೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ  ಐದಕ್ಕೇರಿದಂತಾಗಿದೆ.

ಈ ಸಂಬಂಧ ಮಾದ್ಯಮದವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮಂಡ್ಯದಲ್ಲಿ ಹೋಂಕ್ವಾರಂಟೈನ್ ನಲ್ಲಿದ್ದ ೩೨  ವರ್ಷದ ಪಿ.೧೮೫ ಸಂಖ್ಯೆಯ ಯುವಕನಿಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ತಿಳಿಸಿದರು. ಈತ ಮಂಡ್ಯ ನಗರದ ಸ್ವರ್ಣಸಂದ್ರ  ಬಡಾವಣೆಯ ನಿವಾಸಿಯಾಗಿದ್ದು ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ೨೦೧೦ ರಿಂದ ಮೈಕ್ರೋ ಬಯಾಲಿಸ್ಟ್ ಆಗಿ ಕ್ವಾಲಿಟಿ ಕಂಟ್ರೋಲ್ ರೂಂ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಈತನಿಗೆ ಅದೇ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಹ ಉದ್ಯೋಗಿಯ ಪ್ರಯಾಣಿಕ  ಪಿ.೭೮ ಸಂಖ್ಯೆ ಯುವಕನಿಂದ ಈತನಿಗೂ ಸೋಂಕು ಹರಡಿದೆ ಎಂದು ತಿಳಿಸಿದರು.

ಮಾರ್ಚ್ ೨೪ ಮತ್ತು ೨೫ ರಂದು ಕಾರ್ಖಾನೆಯಲ್ಲಿ ಕೊರೊನಾ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಈತನನ್ನು ಸಹ ಫ್ರೈಮರಿ ಕಾಂಟೆಕ್ಟ್ ಎಂದು ಗುರುತಿಸಿ ಕೈ ಮೇಲೆ ಸೀಲ್ ಹಾಕಿ ಕಳುಹಿಸಲಾಗಿತ್ತು. ಮಾರ್ಚ್ ೨೬ರಂದು ಈತ ಮಂಡ್ಯಕ್ಕೆ ದ್ವಿ ಚಕ್ರ ವಾಹನದಲ್ಲಿ ವಾಪಸ್ ಆಗಿದ್ದು,  ಮಾ.೨೬ರಿಂದ ೩೦ ರವರೆಗೆ ಹೋಂ ಕ್ವಾರೆಂಟೈನ್ನಲ್ಲಿದ್ದ, ಮತ್ತೆ ಈತನನ್ನು ಪಬ್ಲಿಕ್ ಕ್ವಾರೆಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಏಪ್ರಿಲ್ ೭ ರಂದು ಲ್ಯಾಬ್ ಗೆ ಈತನ ಕಫ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಕೋವಿಡ್ ೧೯ ಪತ್ತೆಯಾಗಿದೆ. ಸದ್ಯ ಈತನಿಗೆ ಮಂಡ್ಯ  ಮಿಮ್ಸ್ ನ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದರು.

ಈತನಿಗೂ ಸಹ ಕೊರೊನಾಗೆ ಪೂರಕವಾದ ರೋಗ ಲಕ್ಷಣ ಇರಲಿಲ್ಲ,ಈತನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಮತ್ತೆ ಈತನ ಗಂಟಲು ದ್ರವ ಮತ್ತು ರಕ್ತವನ್ನು ಪರೀಕ್ಷೆಗೆ ಒಳಪಡಿಸಿದಾಗ  ಕೊರೋನಾ ಸೋಂಕು ಪತ್ತೆಯಾಗಿದೆ. ಸುಮಾರು ೧೨ ದಿನಗಳ ಬಳಿಕ  ಈತನಿಗೆ ಕೊರೊನಾ ಸೋಂಕು ಪತ್ತೆಯಾಗಿರುವುದು ವಿಶೇಷವಾಗಿದೆ. ಕೊರೊನಾ ಸೋಂಕಿತ ಈ ಯುವಕ ಮಾ.೨೫ ರ ಹಿಂದಿನ ದಿನಗಳಲ್ಲಿ ಪ್ರತಿನಿತ್ಯ ಮನೆಯಿಂದ ಮಂಡ್ಯ ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಸಾರಿಗೆ ಬಸ್ ಮೂಲಕ ಮೈಸೂರು ಬಸ್ ನಿಲ್ದಾಣಕ್ಕೆ ಹೋಗಿ, ಕಂಪನಿ ಬಸ್ನಲ್ಲಿಯೇ ಕಾರ್ಖಾನೆಗೆ ಹೋಗಿ ಅದೇ ಮಾದರಿಯಲ್ಲಿ ವಾಪಸ್ ಆಗುತ್ತಿದ್ದ ಎಂದು ಅವರು ತಿಳಿಸಿದರು.

 ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ತಂದೆ, ತಾಯಿ, ತಂಗಿ, ತಂಗಿ ಮಗಳನ್ನು ಹೋಂ ಕ್ವಾರೆಂಟೈನ್ ಮಾಡಲಾಗಿದೆ.ಮಂಡ್ಯ ಸಿಟಿಯ ಸ್ವರ್ಣ ಸಂದ್ರದಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ಮಂಡ್ಯನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು  ಆತ ವಾಸವಿದ್ದ  ಸ್ವರ್ಣಸಂದ್ರ ಬಡಾವಣೆಯ ಕೆಲ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ಯುವಕನಿಗೆ ಪ್ರತಿ ಹಂತದಲ್ಲೂ ಕೂಲಂಕುಶವಾಗಿ ಪರಿಶೀಲನೆ ನಡೆಸಲಾಗುತ್ತಿತ್ತು, ಆದರೆ ಯಾವುದೇ ಲಕ್ಷಣಗಳು ಪತ್ತೆಯಾಗುತ್ತಿರಲಿಲ್ಲ,ಅಂತಿಮವಾಗಿ ಅಂತದ ಪರೀಕ್ಷೆಯಲ್ಲಿ ಈ ಪ್ರಕರಣ ಬಯಲಿಗೆ ಬಂದಿದೆ,ಈ ಹಿಂದೆ ಪತ್ತೆಯಾದ ಮಳವಳ್ಳಿಯ ನಾಲ್ಕೂ ಪ್ರಕರಣಗಳಲ್ಲಿಯೂ ಸಹ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ಸೋಂಕು ದೃಢಪಟ್ಟಿದೆ ಎಂದು ಅವರು ತಿಳಿಸಿದರು.

ಇದೀಗ ಸೋಂಕು ದೃಢಪಟ್ಟಿರುವ ೫ ಮಂದಿಯನ್ನು ಮಿಮ್ಸ್ನ ಐಸೋಲೇಷನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ,ಜಿಲ್ಲಾಡಳಿತ ಎಲ್ಲಾ ರೀತಿ ಮುಂಜಾಗೃತಾ ಕ್ರಮಗಳನ್ನು ಅನುಸರಿಸುತ್ತಿದೆ,ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ,ಎಂದಿನAತೆಯೇ ಸಾರ್ವಜನಿಕರು ಸಾಮಾಜಿಕ  ಅಂತರ ಕಾಯ್ದುಕೊಳ್ಳಬೇಕು,ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದರು.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com