ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಕಳ್ಳತನದ ಆರೋಪಿ ಸಾವು, ಐವರು ಪೊಲೀಸರ ಅಮಾನತು

ನಗರದ ಹೊರವಲಯದ ಹೊಸಕೋಟೆಯ ನಡುವತ್ತಿಯ ಬಾರ್‌ನಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪಿಯೊಬ್ಬ ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ದ ವೇಳೆ ಬಾವಿಗೆ...
ಮುನಿಪಿಳ್ಳಪ್ಪ
ಮುನಿಪಿಳ್ಳಪ್ಪ

ಬೆಂಗಳೂರು: ನಗರದ ಹೊರವಲಯದ ಹೊಸಕೋಟೆಯ ನಡುವತ್ತಿಯ ಬಾರ್‌ನಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪಿಯೊಬ್ಬ ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ದ ವೇಳೆ ಬಾವಿಗೆ ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಐವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಘಟನೆಯ ನಂತರ ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಇತರೆ ಐವರು ಪೊಲೀಸರು ತಲೆಮರೆಸಿಕೊಂಡಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರು ತಿಳಿಸಿದ್ದಾರೆ.

ಮೃತಪಟ್ಟ ಆರೋಪಿ ನಡುವತ್ತಿ ಗ್ರಾಮದ ಮುನಿಪಿಳ್ಳಪ್ಪ(52) ಅವರ ದೇಹದ ಮೇಲೆ ಗಾಯಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ ಎಂದು ಚೆನ್ನಣ್ಣನವರ್ ತಿಳಿಸಿದ್ದಾರೆ.

ಮುನಿಪಿಳ್ಳಪ್ಪ ನಡುವತ್ತಿಯ ಬಾರ್‌ವೊಂದರಲ್ಲಿ ಮದ್ಯ ಕಳ್ಳತನ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತಿರುಮಶೆಟ್ಟಿಹಳ್ಳಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿ ಸ್ಥಳ ಮಹಜರ್ ಮಾಡಲು ನಿನ್ನೆ ಕರೆದೊಯ್ದಿದ್ದರು.

ಆರೋಪಿ ಕಳವು ಮಾಡಿದ್ದ ಮದ್ಯವನ್ನು ಬಾವಿಯ ಬಳಿ ಬಚ್ಚಿಟ್ಟ ಹಿನ್ನೆಲೆಯಲ್ಲಿ ಅಲ್ಲಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ಆರೋಪಿಯ ಸಂಬಂಧಿಕರು ಪೊಲೀಸರು ಮದ್ಯ ಕಳ್ಳತನ ಮಾಡಿದಕ್ಕೆ ಮುನಿಪಿಳ್ಳಪ್ಪನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಅದರ ನೋವು ತಾಳಲಾರದೇ ಆತ ಸಾವನ್ನಪ್ಪಿದ್ದಾನೆ. ಅದನ್ನು ಮುಚ್ಚಿಹಾಕಲು ಪೊಲೀಸರು ಮುನಿಪಿಳ್ಳಪ್ಪ ಬಾವಿಗೆ ಬಿದ್ದು ಸಾವನಪ್ಪಿದ್ದಾನೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com