ಖಾಕಿಗೂ ಕೊರೋನಾ ಕಾಟ: ಹುಬ್ಬಳ್ಳಿಯಲ್ಲಿ ಐವರು ಪೊಲೀಸರಿಗೆ ಹೋಂ ಕ್ವಾರಂಟೈನ್!

ದೇಶಾದ್ಯಂತ ಮಾರಕವಾಗಿ ಪ್ರಸರಿಸುತ್ತಿರುವ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತಿರುವ ಕರ್ನಾಟಕ ಖಾಕಿ ಪಡೆಗೂ ಮಹಾಮಾರಿಯ ಕಾಟ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಸೋಂಕಿತನ ಸಂಪರ್ಕಕ್ಕೆ ಬಂದ ಕಾರಣ ಐವರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಹುಬ್ಬಳ್ಳಿ 5 ಪೊಲೀಸ್ ಕ್ವಾರಂಟೈನ್
ಹುಬ್ಬಳ್ಳಿ 5 ಪೊಲೀಸ್ ಕ್ವಾರಂಟೈನ್

ಹುಬ್ಬಳ್ಳಿ: ದೇಶಾದ್ಯಂತ ಮಾರಕವಾಗಿ ಪ್ರಸರಿಸುತ್ತಿರುವ ಕೊರೋನಾ ವೈರಸ್ ಸೋಂಕು ನಿಯಂತ್ರಣಕ್ಕೆ ಟೊಂಕ ಕಟ್ಟಿ ನಿಂತಿರುವ ಕರ್ನಾಟಕ ಖಾಕಿ ಪಡೆಗೂ ಮಹಾಮಾರಿಯ ಕಾಟ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ಸೋಂಕಿತನ ಸಂಪರ್ಕಕ್ಕೆ ಬಂದ ಕಾರಣ ಐವರು ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.

ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯ ಐದು ಜನ ಪೊಲೀಸರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕಮರಿಪೇಟೆ ಠಾಣಾ ವ್ಯಾಪ್ತಿಯಲ್ಲಿರೋ ಮುಲ್ಲಾ ಓಣಿಯ ಸೋಂಕಿತನ ಜೊತೆ ಪ್ರಾಥಮಿಕ ಸಂರ್ಪಕದಲ್ಲಿದ್ದ ಹಿನ್ನೆಲೆ ಐವರು ಪೊಲೀಸ್ ಸಿಬ್ಬಂದಿಗೆ ಸೋಂಕಿನ ಲಕ್ಷಣಗಳು ಕಾಣಿಸಿವೆ. ಅದರಲ್ಲಿ 3 ಜನ ವಯಸ್ಸಾದ ಸಿಬ್ಬಂದಿ, ಇಬ್ಬರು ಯುವ ಪೊಲೀಸರಾಗಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗ್ತಿದೆ. ಐದು ಜನ ಪೊಲೀಸ್ ಸಿಬ್ಬಂದಿ ಕೈಗೂ ಆರೋಗ್ಯ ಇಲಾಖೆ ಸೀಲ್‌ ಹಾಕಿ, ಹೋಂ ಕ್ವಾರಂಟೈನ್​​ನಲ್ಲಿರುವಂತೆ ಸೂಚಿಸಿದೆ.

ಶಂಕಿತ ಸೋಂಕಿತರ ಮಾಹಿತಿ ಸಂಗ್ರಹಕ್ಕೆ ತೆರಳಿದ್ದ ಸಿಬ್ಬಂದಿ
ಕೊವಿಡ್-19 ವೈರಸ್ ದೃಢಪಟ್ಟಿದ್ದ ಇಲ್ಲಿನ ಮುಲ್ಲಾ ಓಣಿಯ ವ್ಯಕ್ತಿಯ ಮಾಹಿತಿ ಸಂಗ್ರಹಿಸಲೆಂದು ಕಮರಿಪೇಟೆ ಠಾಣೆಯ ಎಸ್ ಪಿ ಮತ್ತು ಚಾಲುಕ್ಯ ವಾಹನದ ಸಿಬ್ಬಂದಿ ತೆರಳಿದ್ದರು ಈ ವೇಳೆ ಇಬ್ಬರೂ ರೋಗಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ರೋಗಿ ನೀಡಿದ್ದ ದಾಖಲೆಯನ್ನು ಯಾವುದೇ ರೀತಿಯ ಗ್ಲೌಸ್ ಹಾಕದ ಕೈಯಿಂದ ಸ್ವೀಕರಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಶಂಕಿತ ಸೋಂಕಿತನಲ್ಲಿ ವೈರಸ್ ದೃಢಪಟ್ಟಿದೆ.  ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಠಾಣೆಯ ಎಎಸ್ಐ, ಮುಖ್ಯ ಪೇದೆ ಮತ್ತು ಮೂವರು ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಆರೋಗ್ಯ ಇಲಾಖೆಯವರು ಐವರು ಸಿಬ್ಬಂದಿಗೆ ಸೀಲ್ ಹಾಕಿದ್ದಾರೆ. ಈ ಪೈಕಿ ಮೂವರು ಪೊಲೀಸ್ ಪೇದೆಗಳನ್ನು ಖಾಸಗಿ ಹೊಟೆಲ್ ರೂಂ ನಲ್ಲಿ ಇರಿಸಲಾಗಿದ್ದು, ಇಬ್ಬರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.

ಇಲಾಖೆಯ ಸಭೆಗಳಲ್ಲಿ ಹಾಜರಾಗಿದ್ದ ಸಿಬ್ಬಂದಿ
ಇನ್ನು ಶಂಕಿತ ರೋಗಿಯ ಮಾಹಿತಿ ಕಲೆಹಾಕಿದ್ದ ಸಿಬ್ಬಂದಿ, ಬಳಿಕ ಇಲಾಖೆಯ ಸಭೆಗಳಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಠಾಣೆಯಲ್ಲೂ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಕಮರಿ ಪೇಟೆ ಠಾಣಿಯಲ್ಲಿ ಇತರೆ ಸಿಬ್ಬಂದಿಗೂ ಇದೀಗ ವೈರಸ್ ಭೀತಿ ಶುರುವಾಗಿದೆ. ಇದೇ ಕಾರಣಕ್ಕೆ ಹುಬ್ಬಳ್ಳಿ ಮತ್ತು ಧಾರವಾಡ ಪೊಲೀಸ್ ಆಯುಕ್ತ ಆರ್ ದಿಲೀಪ್ ಅವರು ಅಧಿಕಾರಿಗಳಿಗೆ ಎಲ್ಲ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಭವಿಷ್ಯದಲ್ಲಿ ಯಾವುದೇ ಪೊಲೀಸರು ಶಂಕಿತ ರೋಗಿಯ ಅಥವಾ ರೋಗಿಯ ಮನೆಗೆ ತೆರಳುವ ಮುನ್ನ ಕಡ್ಡಾಯವಾಗಿ ಸೂಕ್ತ ಮುಂಜಾಗ್ರತೆ ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಭೇಟಿ ವೇಳೆ ಅಗತ್ಯ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ಸಿಬ್ಬಂದಿ ಧರಿಸಬೇಕು. ದಾಖಲೆ ಸ್ವೀಕರಿಸಿದ ಬಳಿಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ದಾಖಲೆಗಳ ಫೋಟೋ ಕಾಪಿ ತೆಗೆದು ಅದನ್ನು ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಠಾಣೆಯಲ್ಲಿ ಎಲ್ಲ ಸಿಬ್ಬಂದಿಗಳೂ ಕಡ್ಡಾಯವಾಗಿ ಸ್ಯಾನಿಟೈಸರ್ ಬಳಕೆ ಮಾಡಬೇಕು. ಕೈಗಳನ್ನು ಆಗಾಗ ಸ್ವಚ್ಛಗೊಳಿಸಬೇಕು, ಠಾಣೆಯಲ್ಲಿ ಮಾಸ್ಕ್ ಮತ್ತು ಗ್ಲೌಸ್ ಕಡ್ಡಾಯ ಎಂದು ಹೇಳಿದ್ದಾರೆ.

ಇನ್ನು ಪೇಷೆಂಟ್ ನಂಬರ್ 194 ಕಮರೀಪೇಟೆ ಸಮೀಪದ ಮುಲ್ಲಾ ಓಣಿ ನಿವಾಸಿಯಾಗಿದ್ದು, ಈತ ಮತ್ತು ಇವನ ಸಹೋದರರು ಇತ್ತೀಚೆಗೆ ಹೈದರಾಬಾದ್, ದೆಹಲಿ, ಆಗ್ರಾ ಮತ್ತು ಮುಂಬೈ ತೆರಳಿ, ಮಾರ್ಚ್ 20ರಂದು ವಾಪಸ್ ಆಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com