ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರನ್ನು ರಕ್ಷಿಸಿ: ಪ್ರಧಾನಿಗೆ ಎಚ್‌.ವಿಶ್ವನಾಥ್‌ ಪತ್ರ

ಕೊರೊನಾದಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.
ಎಚ್.ವಿಶ್ವನಾಥ್
ಎಚ್.ವಿಶ್ವನಾಥ್

ಹುಣಸೂರು: ಕೊರೊನಾದಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.

ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೆಳೆಗಾರರ ಸಂಕಷ್ಟ ಕುರಿತು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದು. ಅನಿವಾರ್ಯ ಎನಿಸಿದರೆ ಕೇಂದ್ರ ಸರಕಾರ ತಂಬಾಕು ಬೆಳೆಗೆ ರಜೆ ನೀಡಿ, ಬೆಳೆಗಾರರಿಗೆ ಪರಿಹಾರ ಘೋಷಿಸಬೇಕು. ಪರ್ಯಾಯ ಬೆಳೆಗೆ ಉತ್ತೇಜನ ನೀಡಬೇಕು,'' ಎಂದು ಹೇಳಿದರು.

''ತಂಬಾಕು ಕೃಷಿ ಆರಂಭಿಸಲು ರೈತರು ಸಸಿ ಮಾಡಿಕೊಂಡಿರುವ ಹೊತ್ತಲ್ಲಿ ಕೊರೊನಾ ಬಂದಿದೆ. ಇದರಿಂದ ಬೆಳೆಗೆ ಬೇಕಾದ ಸೂಕ್ತ ಔಷಧ, ಗೊಬ್ಬರದ ವ್ಯವಸ್ಥೆಯೂ ಆಗಿಲ್ಲ. ಈ ವರ್ಷ ತಂಬಾಕು ಬೆಳೆದರೂ ಅದನ್ನು ಯುರೋಪ್‌ ದೇಶಗಳಿಗೆ ರಫ್ತು ಮಾಡಬೇಕಿದೆ. ಆದರೆ, ಕೊರೊನಾದಿಂದ ಅಲ್ಲಿನ ಬಹುತೇಕ ದೇಶಗಳೇ ಅಸ್ತವ್ಯಸ್ತಗೊಂಡಿವೆ. ಅವು ಭಾರತದಿಂದ ಹೊಗೆಸೊಪ್ಪನ್ನು ತರಿಸಿಕೊಳ್ಳುವುದೇ ಅನಿಶ್ಚಿತವಾಗಿದೆ. 

ಕರ್ನಾಟಕದಲ್ಲಿ ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಈ ಎಲ್ಲ ಕಡೆಯೂ ನಾಲ್ವರು ಸಂಸದರು ಇದ್ದಾರೆ. ಎಲ್ಲರೂ ಸೇರಿ ವಸ್ತು ಸ್ಥಿತಿ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕಿದೆ. ತಂಬಾಕು ಬೆಳೆ ಎಂಬುದು ರಾಗಿ, ಜೋಳ ಬೆಳೆದಂತಲ್ಲ. ಯಾವುದೇ ಚುನಾಯಿತ ಪ್ರತಿನಿಧಿಗಳು ಕೂಡ ಈ ವಾಸ್ತವ ಅರಿಯದೇ, ರೈತರಿಗೆ ತಂಬಾಕು ಬೆಳೆಯಿರಿ, ನಾವಿದ್ದೇವೆ ಎಂದು ಭರವಸೆ ತುಂಬಬಾರದು. ನೂರಾರು ಕೋಟಿ ರೂ.ಗಳ ವ್ಯವಹಾರ ಇಲ್ಲಿ ಅಡಗಿದೆ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com