ಲಾಕ್ ಡೌನ್ ಇದೆ, ಮಾವು ಖರೀದಿ ಹೇಗೆ ಎಂಬ ಚಿಂತೆ ಬೇಡ, ಬುಕ್ ಮಾಡಿದ್ರೆ ಮನೆ ಬಾಗಿಲಿಗೇ 'ಹಣ್ಣುಗಳ ರಾಜ'!

ಕೊರೋನಾ ವೈರಸ್ ನಿಂದಾಗಿ ಈ ಬಾರಿ ಮಾವಿನ ಸೀಸನ್ ಕಳೆಗುಂದಿದೆಯಾದರೂ, ಮಾವನ್ನು ಮಾವು ಪ್ರಿಯರಿಗೆ ತಲುಪಿಸಲು ಅಂಚೆ ಇಲಾಖೆ ಕೈ ಜೋಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಈ ಬಾರಿ ಮಾವಿನ ಸೀಸನ್ ಕಳೆಗುಂದಿದೆಯಾದರೂ, ಮಾವನ್ನು ಮಾವು ಪ್ರಿಯರಿಗೆ ತಲುಪಿಸಲು ಅಂಚೆ ಇಲಾಖೆ ಕೈ ಜೋಡಿಸಿದೆ.

ಹೌದು.. ಹಣ್ಣುಗಳ ರಾಜ ಮಾವಿಗೆ ಮನಸೋಲದವರಿಲ್ಲ. ಪ್ರತೀ ವರ್ಷ ಮಾವಿನ ಸೀಸನ್ ಬಂದಾಗ ಕೆಜಿ ಗಟ್ಟಲೆ ಹಣ್ಣು ಖರೀದಿ ಮಾಡಿ ಸವಿಯುತ್ತಿದ್ದ ಮಂದಿಗೆ ಈ ಬಾರಿ ಮಾರಕ ಕೊರೋನಾ ವೈರಸ್ ಅಡ್ಡಿಯಾಗಿತ್ತು. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಜನ ಮನೆ ಬಿಟ್ಟು ಹೊರಗೆ  ಬಂದು ಮಾವು ಖರೀದಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದೀಗ ಮಾವು ಪ್ರಿಯರಿಗೆ ಅಂಚೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಅಂಚೆ ಮೂಲಕ ಮನೆ ಬಾಗಿಲಿಗೇ ನೀವು ನಿಮ್ಮ ಇಷ್ಟದ ಮಾವಿನ ಹಣ್ಣನ್ನು ಪಡೆಯಬಹುದು.

ಅಂಚೆ ಇಲಾಖೆ ಬೆಂಗಳೂರು ನಗರದಲ್ಲಿ ಏಪ್ರಿಲ್ 17ರಿಂದ ಮಾವಿನ ಹಣ್ಣನ್ನು ಜನರಿಗೆ ಪೂರೈಕೆ ಮಾಡಲಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ (ಕೆಎಸ್‌ಎಂಡಿಎಂಸಿ) ಅಂಚೆ ಇಲಾಖೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಜನರಿಗೆ ಮಾವಿನ ಹಣ್ಣುಗಳನ್ನು  ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಮಾವಿನ ಹಣ್ಣು ಬೇಕಾದ ಜನರು ವೆಬ್ ಸೈಟ್‌ (https://karsirimangoes.karnataka.gov.in/) ಮೂಲಕ ಬೇಡಿಕೆ ಸಲ್ಲಿಸಬಹುದು. 

ಈ ಬಗ್ಗೆ ಮಾತನಾಡಿರುವ ಕೆಎಸ್‌ಎಂಡಿಎಂಸಿ ವ್ಯವಸ್ಥಾಪಕ ನಿರ್ದೇಶಕ ಸಿ. ಜಿ. ನಾಗರಾಜ್, 'ಏಪ್ರಿಲ್ 17ರಿಂದ ಮಾವು ವಿತರಣೆ ಮಾಡಲು ಅಂಚೆ ಇಲಾಖೆ ಒಪ್ಪಿದೆ. ಮಾವಿನ ಕಟಾವು ಈಗ ಆರಂಭವಾಗುತ್ತಿದೆ. ಈ ಬಾರಿ ನಾವು ಶೇ 50ರಷ್ಟು ಮಾತ್ರ ಫಸಲನ್ನು ನಿರೀಕ್ಷೆ ಮಾಡುತ್ತಿದ್ದೇವೆ.  ಬೆಂಗಳೂರು ನಗರಕ್ಕೆ ಮಾವಿನ ಹಣ್ಣುಗಳನ್ನು ಪೂರೈಕೆ ಮಾಡಲು 2 ಡಜನ್‌ ನಷ್ಟು ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಂದ ನೇರವಾಗಿ ಖರೀದಿ ಮಾಡಿ ಜನರಿಗೆ ತಲುಪಿಸಲಾಗುತ್ತಿದೆ. ಜನರು ಬಾದಾಮಿ, ರಸಪೂರಿ, ಸಿಂಧೂರ ಮಾವಿನ ಹಣ್ಣುಗಳಿಗಾಗಿ ಬೇಡಿಕೆ  ಸಲ್ಲಿಸಬಹುದು. ವೆಬ್‌ಸೈಟ್‌ನಲ್ಲಿ ಹಣ್ಣು ಕೊಳ್ಳಲು ಬಯಸುವವರು 3 ಕೆಜಿಯ ಬಾಕ್ಸ್ ಪಡೆಯಬೇಕಿದೆ. ಆರ್. ಆರ್. ನಗರದ ಅಪಾರ್ಟ್‌ಮೆಂಟ್‌ ಗೆ ಕಳೆದ ವಾರ 5 ಟನ್ ಹಣ್ಣುಗಳನ್ನು ಪೂರೈಕೆ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ಗಳು 250 ಕೆಜಿಯಷ್ಟು ಮಾವಿನ ಹಣ್ಣಿಗೆ ಬೇಡಿಕೆ ಸಲ್ಲಿಸಿದರೆ  ರೈತರು ಲಾರಿಯ ಮೂಲಕ ತಲುಪಿಸಲಿದ್ದಾರೆ. ಈಗಾಗಲೇ 10 ಟನ್ ಹಣ್ಣಿಗೆ ವಿವಿಧ ಅಪಾರ್ಟ್‌ಮೆಂಟ್‌ಗಳು ಬೇಡಿಕೆ ಇಟ್ಟಿವೆ ಎಂದು ಹೇಳಿದರು.

ಮಾವು ರವಾನೆಗೆ ಸಾವಿರ ಸಿಬ್ಬಂದಿ
ಇನ್ನು ಈ ಬಗ್ಗೆ ಮಾತನಾಡಿರುವ ಬೆಂಗಳೂರು ವಿಭಾಗದ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಅವರು, ಮಾವು ಮಂಡಳಿ ಮತ್ತು ನಾವು ಇಬ್ಬರೂ ಕಳೆದ ವರ್ಷವೇ ಈ ಕಾರ್ಯಕ್ಕೆ ಚಾಲನೆ ನೀಡಿದ್ದೆವು. ಈಗ ಮಾವಿಗೆ ಡಿಮ್ಯಾಂಡ್ ಜಾಸ್ತಿ ಇದ್ದು, ಹೆಚ್ಚಿನ ಪ್ರಮಾಣದಲ್ಲಿ  ಬೇಡಿಕೆ ಬರುತ್ತಿದೆ. ಹೀಗಾಗಿ ಲಾಕ್ ಡೌನ್ ಇದ್ದರೂ ಮಾವು ಸರಬರಾಜಿಗಾಗಿಯೇ ನಾವು ಸುಮಾರು 1 ಸಾವಿರ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com