ಕಾರಿನಲ್ಲಿ ಸಾಗಿಸುತ್ತಿದ್ದ ಕರು ರಕ್ಷಣೆ: ’ಭೀಮ’ನಿಗೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲೇ ಆರೈಕೆ!

ಸದಾ ಕಿಡಿಗೇಡಿಗಳನ್ನು ನಿಯಂತ್ರಿಸುವ ಕೆಲಸದಲ್ಲೆ ಮಗ್ನರಾಗಿರುವ ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ಓರ್ವ ವಿಶೇಷ ಅತಿಥಿ ದೊರೆತಿದ್ದಾರೆ. 
ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ 'ಭೀಮ'
ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ 'ಭೀಮ'

ಬೆಂಗಳೂರು: ಸದಾ ಕಿಡಿಗೇಡಿಗಳನ್ನು ನಿಯಂತ್ರಿಸುವ ಕೆಲಸದಲ್ಲೆ ಮಗ್ನರಾಗಿರುವ ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ಓರ್ವ ವಿಶೇಷ ಅತಿಥಿ ದೊರೆತಿದ್ದಾರೆ. 

ಆತನ ಹೆಸರು ಭೀಮ, ಈ ನಾಮಕರಣ ಮಾಡಿದ್ದೂ ಸಹ ಬೈಯ್ಯಪ್ಪನಹಳ್ಳಿ ಪೊಲೀಸರೇ. ಮೇ.30  ರಂದು ರಾತ್ರಿ ಸಬ್ ಇನ್ಸ್ ಪೆಕ್ಟರ್ ನಾಗರಾಜ್ ಹಾಗೂ ಪೊಲೀಸ್ ಪೇದೆ ಗುರ್ಕಿ ಪೊಲೀಸ್ ಠಾಣೆಯ ಬಳಿಯೇ ಬೈಯ್ಯಪ್ಪನಹಳ್ಳಿ ಚೆಕ್ ಪೋಸ್ಟ್ ಬಳಿ ಕಾರ್ಯನಿರ್ವಹಿಸುತ್ತಿದ್ದಾಗ, ವೇಗವಾಗಿ ಚಲಿಸುತ್ತಿದ್ದ ಕಾರನ್ನು ತಡೆದರು. ಲಾಕ್ ಡೌನ್ ಇದ್ದರೂ ಹೊರಬಂದಿರುವ ಕಾರಣ ತಿಳಿಸಲಾಗದ ಕಾರಿನ ಚಾಲಕನನ್ನು ಕಂಡು ಅನುಮಾನಗೊಂಡ ಪೊಲೀಸರು ಕಾರನ್ನು ತಪಾಸಣೆ ಮಾಡಿದಾಗ ಪ್ಲಾಸ್ಟಿಕ್ ಶೀಟ್ ನ ಕೆಳಭಾಗದಲ್ಲಿ ಮುದ್ದಾದ ಕರುವೊಂದು ಇರುವುದು ಕಂಡುಬಂದಿತು. ಕಾರಿನಿಂದ ಅದನ್ನು ಹೊರತೆಗೆಯುತ್ತಿದ್ದಂತೆಯೇ ಕಾರಿನ ಚಾಲಕ ಪರಾರಿಯಾದ. ಬೇರೆ ದಾರಿ ಕಾಣದಾದ ಪೊಲೀಸರು ಅದನ್ನು ಪೊಲೀಸ್ ಠಾಣೆಗೇ ಕರೆದೊಯ್ದರು. 

"ದುರ್ಬಲಗೊಂಡಿದ್ದ ಕರುವನ್ನು ಕಂಡೊಡನೆಯೇ ನಾನು ಭೀಮ ಎಂಬ ಹೆಸರಿಡಲು ನಿರ್ಧರಿಸಿದೆ, ಮಹಾಭಾರತದಲ್ಲಿ ಭೀಮ ಅತ್ಯಂತ ಬಲಿಷ್ಠ, ನಮ್ಮ ಕರು ಕೂಡ ಭೀಮನಷ್ಟೇ ಶಕ್ತಿಶಾಲಿಯಾಗಬೇಕೆಂದು ಈ ಹೆಸರಿಡಲು ನಿರ್ಧರಿಸಿದೆ" ಎನ್ನುತ್ತಾರೆ ಠಾಣೆಯ ಇನ್ಸ್ ಪೆಕ್ಟಾರ್ ಮೊಹಮ್ಮದ್ ರಫಿ 

"ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಸೇರಿದ 70 ಪೊಲೀಸ್ ಸಿಬ್ಬಂದಿಗಳು ಭೀಮನ ಆರೈಕೆ ಮಾಡುತ್ತಿದ್ದಾರೆ. ಅದರ ಪೋಷಣೆಗಾಗಿ ಪ್ರತಿ ದಿನ 15 ಲೀಟರ್ ಹಾಲು ಅಥವಾ ಬೆಲ್ಲ, ಹುರುಳಿಗಳನ್ನು ನೀಡುವುದಕ್ಕೆ ಅಲ್ಲಿನ ಸಿಬ್ಬಂದಿಗಳೇ ಹಣ ಹಾಕಿ ವ್ಯವಸ್ಥೆ ಮಾಡಿದ್ದಾರೆ. ಕೆಲವೊಮ್ಮೆ ಪೊಲೀಸ್ ಠಾಣೆಗೆ ಬರುವವರೂ ಸಹ ಭೀಮನಿಗೆ ಆಹಾರ ತಂದುಕೊಡುತ್ತಾರೆ".

ಭೀಮನ ಆರೋಗ್ಯ ತಪಾಸಣೆಗಾಗಿ ಪಶುವೈದ್ಯರನ್ನೂ ನೇಮಕ ಮಾಡಲಾಗಿದ್ದು, ಅದರ ಬರುವಿಕೆಯಿಂದ ವಾತಾವರಣ ಬದಲಾಗಿ, ಸಂತಸ ಮೂಡಿದೆ ಎನ್ನುತ್ತಾರೆ ಮೊಹಮ್ಮದ್ ರಫಿ. ಕರ್ತವ್ಯಕ್ಕೆ ಹಾಜರಾಗುವುದಕ್ಕೂ ಮುನ್ನ ಪ್ರತಿಯೊಬ್ಬ ಸಿಬ್ಬಂದಿಯೂ ಸಹ ಭೀಮನ ಜೊತೆ ಕೆಲವು ನಿಮಿಷಗಳು ಕಳೆಯುತ್ತಾರೆ. ಆ ನಂತರ ಕೆಲಸಕ್ಕೆ ಹಾಜರಾಗುತ್ತದೆ ಎನ್ನುವ ಇನ್ಸ್ ಪೆಕ್ಟರ್ ರಫಿ ಭೀಮನನ್ನು ಬೇರೆಡೆಗೆ ಸ್ಥಳಾಂತರಿಸುತ್ತೀರಾ ಎಂಬ ಪ್ರಶ್ನೆಗೆ ಸಾಧ್ಯವೇ ಇಲ್ಲ, ಅದು ನಮ್ಮದು ನಾವೇ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com