ಲಾಕ್ ಡೌನ್: ಜನ ಮನೆಯಿಂದ ಹೊರಬರದಂತೆ ತಡೆಯಲು ಚಾಮರಾಜನಗರ ಡಿಸಿ ಮಾಸ್ಟರ್ ಪ್ಲಾನ್, ಮನೆ ಬಾಗಿಲಿಗೇ ಮೆಡಿಸಿನ್!

ಕೊರೋನಾ ವೈರಸ್ ಲಾಕ್ ಡೌನ್ ನಿಂದ ಜನತೆ ಮನೆಯಿಂದ ಹೊರಗೆ ಬರುವುದನ್ನು ತಡೆಯಲು ಚಾಮರಾಜನಗರ ಡಿಸಿ ಎಂ.ಆರ್. ರವಿ ವಿನೂತನ ಔಷಧಿ ಮಿತ್ರ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅನ್ವಯ ಜಿಲ್ಲೆಯ ಜನರ ಮನೆ ಬಾಗಿಲಿಗೇ ಔಷಧಿ ತಂದು  ನೀಡಲಾಗುತ್ತದೆ.
ಬೈಕ್ ಆ್ಯಂಬುಲೆನ್ಸ್ (ಸಂಗ್ರಹ ಚಿತ್ರ)
ಬೈಕ್ ಆ್ಯಂಬುಲೆನ್ಸ್ (ಸಂಗ್ರಹ ಚಿತ್ರ)

ಚಾಮರಾಜನಗರ: ಕೊರೋನಾ ವೈರಸ್ ಲಾಕ್ ಡೌನ್ ನಿಂದ ಜನತೆ ಮನೆಯಿಂದ ಹೊರಗೆ ಬರುವುದನ್ನು ತಡೆಯಲು ಚಾಮರಾಜನಗರ ಡಿಸಿ ಎಂ.ಆರ್. ರವಿ ವಿನೂತನ ಔಷಧಿ ಮಿತ್ರ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಅನ್ವಯ ಜಿಲ್ಲೆಯ ಜನರ ಮನೆ ಬಾಗಿಲಿಗೇ ಔಷಧಿ ತಂದು  ನೀಡಲಾಗುತ್ತದೆ.

ಮಾರಕ ಕೊರೋನಾ ವೈರಸ್ ಗೆ ಕರ್ನಾಟಕ ರಾಜ್ಯ ತತ್ತರಿಸಿ ಹೋಗಿದ್ದು, ಇದೇ ಕಾರಣಕ್ಕೆ ರಾಜ್ಯಾದ್ಯಂತ ಲಾಕ್ ಡೌನ್ ಹೇರಲಾಗಿದೆ. ಇದಾಗ್ಯೂ ಜನ ತಮ್ಮ ಅವಶ್ಯಕ ವಸ್ತುಗಳಿಗಾಗಿ ಪದೇ ಪದೇ ಮನೆ ಬಿಟ್ಟು ಹೊರಗೆ ಬರುತ್ತಿದ್ದಾರೆ. ಹೀಗಾಗಿ ಜನರನ್ನು ನಿಯಂತ್ರಿಸಲು ಡಿಸಿ ರವಿ ಮನೆ  ಬಾಗಿಲಿಗೇ ಔಷಧಿಗಳನ್ನು ರವಾನಿಸುವ ಯೋಜನೆ ರೂಪಿಸಿದ್ದಾರೆ. ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಹಾಗು ಹನೂರು ಪಟ್ಟಣಗಳಲ್ಲಿ ಮನೆಮನೆಗೆ ಔಷಧಿ ತಲುಪಿಸಲು ಜಿಲ್ಲಾಡಳಿತದ ವತಿಯಿಂದ ಫಾರ್ಮಸಿಸ್ಟ್​ಗಳನ್ನು ನಿಯೋಜಿಸಲಾಗಿದೆ.  ಇವರಿಗೆ ಬೈಕ್  ಆಂಬುಲೆನ್ಸ್ ನೀಡಲಾಗಿದ್ದು ಔಷಧಿಯ ವಿವರಗಳನ್ನು (ಡಾಕ್ಟರ್ ನೀಡಿರುವ ಔಷಧಿ ಚೀಟಿ) ವಾಟ್ಸಪ್ ಮಾಡಿದರೆ ಸಾಕು ಫಾರ್ಮಸಿಸ್ಟ್​ಗಳು ಮೆಡಿಕಲ್ ಶಾಪ್ ಹೋಗಿ ವಾಟ್ಸಪ್​ನಲ್ಲಿ ನೀವು ತಿಳಿಸಿರುವ ಔಷಧಿಗಳನ್ನು ತಂದು ಮನೆ ಬಾಗಿಲಿಗೆ ರಶೀದಿ ಸಮೇತ ತಲುಪಿಸುತ್ತಾರೆ, ಔಷಧಿ  ತಲುಪಿದ ಮೇಲೆ ಔಷಧಿಗೆ ನಿಗದಿಯಾಗಿರುವ ಹಣ ನೀಡಿದರೆ ಸಾಕು. ಯಾವುದೇ ಸರ್ವೀಸ್ ಚಾರ್ಜ್ ಅಥವಾ ಡೆಲಿವರಿ ಚಾರ್ಜ್ ನೀಡಬೇಕಾಗಿಲ್ಲ.

ಚಾಮರಾಜನಗರಕ್ಕೆ ಮೂರು, ಕೊಳ್ಳೇಗಾಲಕ್ಕೆ ಮೂರು, ಗುಂಡ್ಲುಪೇಟೆಗೆ ಇಬ್ಬರು, ಹನೂರು ಹಾಗು ಯಳಂದೂರು ಪಟ್ಟಣಗಳಿಗೆ ತಲಾ ಒಬ್ಬರಂತೆ ಆರೋಗ್ಯ ಇಲಾಖೆಯ ಫಾರ್ಮಸಿಸ್ಟ್​ಗಳನ್ನು ನಿಯೋಜಿಸಲಾಗಿದೆ. 

ಮೆಡಿಸಿನ್ ಡೆಲಿವರಿಗೆ ಬೈಕ್ ಆ್ಯಂಬುಲೆನ್ಸ್
ಮೆಡಿಸಿನ್ ಡೆಲಿವರಿಗೆ ಬೈಕ್ ಆ್ಯಂಬುಲೆನ್ಸ್ ನೀಡಲಾಗುತ್ತಿದ್ದು, ಇದಕ್ಕಾಗಿ ಮೈಸೂರಿನಿಂದ 10 ಬೈಕ್ ಆ್ಯಂಬುಲೆನ್ಸ್​ಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಈ ಹೊಸ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಸದ್ಯದ ಮಟ್ಟಿಗೆ ಚಾಮರಾಜನಗರ ಕೊರೋನಾ ಮುಕ್ತವಾಗಿದೆಯಾದರೂ,  ಸೋಂಕಿನ ಭೀತಿ ಇನ್ನೂ ಹಾಗೆಯೇ ಇದೆ. ಮೈಸೂರು, ಮಂಡ್ಯ, ಕೇರಳ, ತಮಿಳುನಾಡು ಹೀಗೆ ಕೊರೋನಾ ವೈರಸ್ ಹಾಟ್​ಸ್ಪಾಟ್ ಪ್ರದೇಶ​ಗಳಿಂದಲೇ ಜಿಲ್ಲೆ ಸುತ್ತುವರಿದಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ. ಜನರ ಅನಗತ್ಯ ಓಡಾಟ, ಗುಂಪುಸೇರುವಿಕೆಯಿಂದ ಅಪಾಯ  ಎದುರಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಚಾಮರಾಜನಗರ ಜಿಲ್ಲೆಗೆ ಕೊರೊನಾ ಸೋಂಕು ತಗುಲಬಾರದು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದು ಇದರ ಒಂದು ಭಾಗವಾಗಿ ಔಷಧಿಮಿತ್ರ ಯೋಜನೆ ಜಾರಿಗೆ  ತಂದಿದ್ದಾರೆ.

ಸೋಂಕು ನಿಯಂತ್ರಿಸಲು ಮತ್ತಷ್ಟು ವಿಭಿನ್ನ ಬಗೆಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡ ಜಿಲ್ಲಾಡಾಳಿತ
ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ಇದುವರೆವಿಗೆ ಯಾವುದೇ ಕೋವಿಡ್ ಸೊಂಕಿನ ಪ್ರಕರಣಗಳು ಕಂಡು ಬಂದಿಲ್ಲ. ಆದರೆ ಜಿಲ್ಲೆಗೆ ರಾಜ್ಯದಲ್ಲಿಯೇ ಅತ್ಯಧಿಕ ಕೋವಿಡ್ ಸೊಂಕುಳ್ಳ ವ್ಯಕ್ತಿಗಳು ಮೈಸೂರು ಹಾಗೂ  ನಂಜನಗೂಡಿನಲ್ಲಿ ಕಂಡು ಬಂದಿರುವುದರಿಂದ ಈಗಾಗಲೇ ಸರ್ಕಾರವು ಮೈಸೂರು ಜಿಲ್ಲೆಯನ್ನು ರೆಡ್ ಜೋನ್ ಎಂದು ಘೋಷಿಸಿದೆ. ಜೊತೆಗೆ ಜಿಲ್ಲೆಗೆ ಪಕ್ಕದ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡು ಬೆಸೆದುಕೊಂಡಿರುವುದರಿಂದ ಮುಂದಿನ ದಿನಗಳಲ್ಲೂ ಜಿಲ್ಲೆಯಲ್ಲಿ ಕೋವಿಡ್  ಪ್ರಕರಣಗಳು ಕಂಡು ಬರದಂತೆ ತಡೆಗಟ್ಟಲು ಜಿಲ್ಲಾಡಳಿತವು ಮತ್ತಷ್ಟು ಕಟ್ಟುನಿಟ್ಟಿನ ಕೋವಿಡ್ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಚೆಕ್‌ಪೋಸ್ಟ್  ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆಯೇ  ಇಲ್ಲವೇ ಎಂಬುಂದನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಚ್.ಡಿ. ಆನಂದಕುಮಾರ್ ಜೊತೆಗೂಡಿ ಮಧ್ಯರಾತ್ರಿ ಸಮಯದಲ್ಲಿ ದಿನಂಪ್ರತಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಚಾಮರಾಜನಗರ ತಾಲೂಕಿನ ಬಾಣಹಳ್ಳಿ ಚೆಕ್‌ಪೋಸ್ಟ್, ಕೊಳ್ಳೇಗಾಲ ತಾಲೂಕಿನ ಟಗರಪುರ ಹಾಗೂ ಸತ್ತೇಗಾಲ ಚೆಕ್‌ಪೋಸ್ಟ್  ಗಳಿಗೆ ಭೇಟಿ ನೀಡಿ ನಿರ್ವಹಿಸಲಾಗುತ್ತಿರುವ ಅಧಿಕಾರಿಗಳ ಕಾರ್ಯ ಪ್ರಕ್ರಿಯೆಯನ್ನು ವೀಕ್ಷಿಸಿದರು. ಪ್ರತಿ ಚೆಕ್‌ಪೋಸ್ಟ್  ಗಳಲ್ಲಿಯೂ ಯಾವ ವಾಹನಗಳು  ಸಂಚರಿಸಿವೆ? ಯಾವ ಬಗೆಯಲ್ಲಿ ನಿಗಾ ವಹಿಸಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಚೆಕ್‌ಪೋಸ್ಟ್ ಅಧಿಕಾರಿಗಳು ಮಾಹಿತಿ ನೀಡಿದರು. ಜೊತೆಗೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅನಾವಶ್ಯಕವಾಗಿ ತಿರುಗಾಡುವ ಯಾವುದೇ ವಾಹನಕ್ಕೂ ಅವಕಾಶ ಕೊಡಬಾರದೆಂದು ಈ  ಸಂದರ್ಭದಲ್ಲಿ ಸೂಚಿಸಿದರು. ಇದೇ ಸಂದರ್ಭದಲ್ಲಿ ಚೆಕ್‌ಪೋಸ್ಟ್  ಅಧಿಕಾರಿಗಳ ವೈಯಕ್ತಿಕ ಆರೋಗ್ಯ, ಸಾಮಾಜಿಕ ಅಂತರ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸುವಂತೆ ಸಲಹೆ ಮಾಡುವ ಮೂಲಕ ಜಿಲ್ಲಾಧಿಕಾರಿಯವರು ಅಧಿಕಾರಿ, ಸಿಬ್ಬಂದಿಗೆ ಅತ್ಮಸ್ಥೈರ್ಯ ತುಂಬಿದರು. 

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಕರೆದಿದ್ದ ಸುದ್ದಿಗ್ಠೋಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕೋವಿಡ್ ಸೊಂಕಿನ ಪ್ರಕರಣಗಳು ದೃಢಪಟ್ಟಿಲ್ಲ. ಆದರೂ ಕೂಡ ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ.  ಸರ್ಕಾರದ ನಿರ್ದೇಶನದ ಮೇರೆಗೆ ಈ ತಿಂಗಳ ಅಂತ್ಯದೊಳಗೆ ಒಂದುವರೆ ಕೋಟಿರೂ ವೆಚ್ಚದಲ್ಲಿ ಪ್ರತಿನಿತ್ಯ 90 ಕೋವಿಡ್ ಸೊಂಕಿನ ವ್ಯಕ್ತಿಗಳನ್ನು ಪರೀಕ್ಷಿಸುವ ಪ್ರಯೋಗಶಾಲೆಯನ್ನು ಚಾಮರಾಜನಗರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗುವುದು. ಇದರಿಂದ ಪಕ್ಕದ  ಜಿಲ್ಲೆಯಾದ ಮೈಸೂರಿನ ವೈದ್ಯಕೀಯ ಸಂಶೋಧನಾ ಕಾಲೇಜಿನ ಪ್ರಯೋಗಶಾಲೆಗೆ ಒತ್ತಡ ಕಡಿಮೆಯಾಗಲಿದೆ ಎಂದ ಅವರು ಮೆಡಿಸಿನ್‌ನ ನೆಪದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ತಿರುಗಾಡುವುದನ್ನು ತಪ್ಪಿಸಲು ನಾಳೆ ಇಂದಲೇ ರೋಗಿಗಳು ಬಯಸುವ ಔಷಧಿಗಳನ್ನು  ಜಿಲ್ಲಾಡಳಿತವು ಸೂಚಿಸಿರುವ ಔಷಧ ಪ್ರತಿನಿಧಿಗಲು ರೋಗಿಗಳ ಮನೆ ಬಾಗಿಲಿಗೆ ಸಂಚಾರಿ ಮೊಬೈಲ್ ದ್ವಿಚಕ್ರ ವಾಹನದ ಮೂಲಕ ತಲುಪಿಸಲಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com