ಕೊರೋನಾ ಭೀತಿ: ಸೋಂಕು ಇಲ್ಲದಿದ್ದರೂ ರೋಗಿ ತಪಾಸಣೆಗೆ ವೈದ್ಯರ ಹಿಂದೇಟು, ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೊನೆಗೂ ಕಣ್ಮುಚ್ಚಿದ ಮಹಿಳೆ!

ಅತೀವ್ರ ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯಲ್ಲಿ ಕೊರೋನಾ ವೈರಸ್ ಇಲ್ಲದಿದ್ದರೂ ರೋಗಿಯನ್ನು ತಪಾಸಣೆ ನಡೆಸಲು ನಗರದ ವಿವಿಧ ವೈದ್ಯರು ಹಿಂದೇಟು ಹಾಕಿದ ಪರಿಣಾಮ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. 
ಕೊರೋನಾ ಭೀತಿ: ಸೋಂಕು ಇಲ್ಲದಿದ್ದರೂ ರೋಗಿ ತಪಾಸಣೆಗೆ ವೈದ್ಯರ ಹಿಂದೇಟು, ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೊನೆಗೂ ಕಣ್ಮುಚ್ಚಿದ ಮಹಿಳೆ!
ಕೊರೋನಾ ಭೀತಿ: ಸೋಂಕು ಇಲ್ಲದಿದ್ದರೂ ರೋಗಿ ತಪಾಸಣೆಗೆ ವೈದ್ಯರ ಹಿಂದೇಟು, ಸಕಾಲಕ್ಕೆ ಚಿಕಿತ್ಸೆ ಸಿಗದೆ ಕೊನೆಗೂ ಕಣ್ಮುಚ್ಚಿದ ಮಹಿಳೆ!

ಬೆಂಗಳೂರು: ಅತೀವ್ರ ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯಲ್ಲಿ ಕೊರೋನಾ ವೈರಸ್ ಇಲ್ಲದಿದ್ದರೂ ರೋಗಿಯನ್ನು ತಪಾಸಣೆ ನಡೆಸಲು ನಗರದ ವಿವಿಧ ವೈದ್ಯರು ಹಿಂದೇಟು ಹಾಕಿದ ಪರಿಣಾಮ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಹಿಳೆ ಸಾವನ್ನಪ್ಪಿರುವ ಘಟನೆ ನಡೆದಿದೆ. 

ಶಾಲಿನಿ ಎನ್.ಸಿ (36) ಮೃತಪಟ್ಟ ಮಹಿಳೆಯಾಗಿದ್ದಾರೆ. ಎರಡು ವಾರಗಳಿಂದಲೂ ಮಹಿಳೆ ಅತೀವ್ರ ಜ್ವರ ಹಾಗೂ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಬಳಿಕ ಕುಟುಂಬಸ್ಥರು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಹಿಳೆಯಲ್ಲಿ ಕೊರೋನಾ ವೈರಸ್ ಲಕ್ಷಣಗಳಾದ ಉಸಿರಾಟ ಸಮಸ್ಯೆ ಹಾಗೂ ಜ್ವರ ಇದ್ದ ಕಾರಣ ವೈದ್ಯರು ತಪಾಸಣೆ ನಡೆಸಲು ನಿರಾಕರಿಸಿದ್ದಾರೆ. 

ಮೊದಲಿಗೆ ಶಾಲಿನಿಯನ್ನು ಸ್ಥಳೀಯ ಆಸ್ಪತ್ರೆ ವಿಕೇರ್'ಗೆ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯರು ಮುಟ್ಟಲೂ ಕೂಡ ಹಿಂದೇಟು ಹಾಕಿದರು ಎಂದು ಶಾಲಿನಿ ಕುಟುಂಬ ಸದಸ್ಯರಲ್ಲಿ ಒಬ್ಬರಾಗಿರುವ ಕಮಲ್ ಸಿಂಗ್ ಅವರು ಹೇಳಿದ್ದಾರೆ. 

ಬಳಿಕ ಆಕೆಯನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ವೈದ್ಯರು ಆಕೆಯನ್ನು ಕೊರೋನಾ ವೈರಸ್ ತಪಾಸಣೆ ನಡೆಸಿದ್ದರು. ವೈದ್ಯಕೀಯ ವರದಿಯಲ್ಲಿ ವೈರಸ್ ಇಲ್ಲ ಎಂದು ತಿಳಿಸಲಾಗಿತ್ತು. ಬಳಿಕ ಚಿಕಿತ್ಸೆ ನೀಡಿದ್ದ ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಆದರೆ, ಮತ್ತೆ ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಆಕೆಯನ್ನು ಶಿಫಾ ಆಸ್ಪತ್ರೆ, ಸಂತೋಷ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರು ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದರು. ಪ್ರತೀ ಬಾರಿ ಜ್ವರ ಹಾಗೂ ಶ್ವಾಸಕೋಶ ಸೋಂಕಿದೆ ಎಂದೇ ಹೇಳುತ್ತಿದ್ದರು. ಆಸ್ಪತ್ರೆಯಲ್ಲಿ ನಮ್ಮನ್ನು ಅಸ್ಪೃಶ್ಯರಂತೆ ನೋಡಲಾಗುತ್ತಿತ್ತು. ಅತೀವ್ರ ಜ್ವರದಿಂದ ಬಳಲುತ್ತಿದ್ದರೂ ಆಕೆಯನ್ನು ತಪಾಸಣೆ ನಡೆಸಲು ಯಾವುದೇ ವೈದ್ಯರೂ ಬರುತ್ತಿರಲಿಲ್ಲ. ವಿಕ್ಟೋರಿಯಾ ಆಸ್ಪತ್ರೆಯಲ್ಲಂತೂ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನೇ ಎದುರಿಸುವಂತಾಗಿತ್ತು. 

ಅಂತಿಮವಾಗಿ ಆಕೆಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಆಕೆಯನ್ನು ದಾಖಲು ಮಾಡಲಾಗಿತ್ತು. ಆದರೆ, ರಾತ್ರಿ 8 ಗಂಟೆಯವರೆಗೂ ಯಾವುದೇ ವೈದ್ಯರೂ ಕೂಡ ಚಿಕಿತ್ಸೆ ನೀಡಲು ಮುಂದಕ್ಕೆ ಬರಲಿಲ್ಲ. ವೈದ್ಯರು ಕೊರೋನಾ ವೈರಸ್ ವರದಿಯನ್ನೇ ಕೇಳುತ್ತಿದ್ದರು. ಚಿಕಿತ್ಸೆ ನೀಡುವಂತೆ ಬೇಡಿಕೊಂಡರೂ ಯಾರೂ ಮುಂದಕ್ಕೆ ಬರಲಿಲ್ಲ ಎಂದು ಕಮಲ್ ಸಿಂಗ್ ತಿಳಿಸಿದ್ದಾರೆ. 

ಪ್ರಕರಣ ಸಂಬಂಧ ಕೆಸಿ.ಜನರಲ್ ಆಸ್ಪತ್ರೆಯ ಅಧಿಕಾರಿಗಳು ಮಾತನಾಡಿ, ಕೊರೋನಾ ವೈರಸ್ ಟೆಸ್ಟ್ ಮಾಡಿಸುವುದು  ಕಡ್ಡಾಯ ಎಂದು ನಮಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. 

ನಿಯಮ ಉಲ್ಲಂಘಿಸಿದ್ದೇ ಆದರೆ, ನಾವು ಆಸ್ಪತ್ರೆಯನ್ನು ಮುಚ್ಚಬೇಕಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿಗಳು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ವ್ಯತ್ಯಾಸಗಳಾಗುತ್ತವೆ ಎಂದಿದ್ದಾರೆ. 

ಜ್ವರ ಹಾಗೂ ಉಸಿರಾಟ ಸಮಸ್ಯೆ ಇರುವ ಪ್ರತೀಯೊಬ್ಬರನ್ನೂ ಇದೀಗ ವೈರಸ್ ಶಂಕೆಯಿಂದಲೇ ನೋಡಲಾಗುತ್ತಿದೆ. ಹೀಗಾಗಿಯೇ ಇಂತಹ ವರ್ತನೆಗಳು ಕಂಡು ಬರುತ್ತಿವೆ ಎಂದು ಹೇಳಿದ್ದಾರೆ. 

ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಆಸ್ಪತ್ರೆಯ ವಿರುದ್ಧ ಗ್ರಾಹಕ ವೇದಿಕೆ ಮೆಟ್ಟಿಲು ಹತ್ತಬೇಕು ಎಂದು ಸುಪ್ರೀಂಕೋರ್ಟ್ ವಕೀಲ ರಣವೀರ್ ಸಿಂಗ್ ಹೇಳಿದ್ದಾರೆ.
 
ಘಟನೆ ನಿಜಕ್ಕೂ ದುರಾದೃಷ್ಟಕರ ಹಾಗೂ ಅಮಾನವೀಯವಾದದ್ದು. ರೋಗಿಗಳ ಜೀವ ಉಳಿಸುವ ಪ್ರಮಾಣ ತೆಗೆದುಕೊಂಡಿರುತ್ತೇವೆ. ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com