ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್

ಪಾದರಾಯನಪುರ ಗಲಭೆ: ಆಗಬಾರದ್ದು ಆಗಿ ಹೋಗಿದೆ, ಇನ್ನು ಮುಂದೆ ಆಗದಂತೆ ನೋಡಿಕೊಳ್ಳುತ್ತೇನೆ - ಶಾಸಕ ಜಮೀರ್ ಅಹ್ಮದ್

ಪಾದರಾಯನಪುರ ವಾರ್ಡ್‌ನಲ್ಲಿ ಸಂಭವಿಸಿದ ಅಹಿತಕರ ಘಟನೆ ನನ್ನ ಕ್ಷೇತ್ರದ ಬೇರೆಡೆ ಮರುಕಳಿಸದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದು. ಇಂತಹ ಘಟನೆಗಳು ಬರೀ ನನ್ನ ಕ್ಷೇತ್ರವಲ್ಲ ಎಲ್ಲಿಯೂ ನಡೆಯಬಾರದು.

ಬೆಂಗಳೂರು: ಪಾದರಾಯನಪುರ ವಾರ್ಡ್‌ನಲ್ಲಿ ಸಂಭವಿಸಿದ ಅಹಿತಕರ ಘಟನೆ ನನ್ನ ಕ್ಷೇತ್ರದ ಬೇರೆಡೆ ಮರುಕಳಿಸದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನನ್ನದು. ಇಂತಹ ಘಟನೆಗಳು ಬರೀ ನನ್ನ ಕ್ಷೇತ್ರವಲ್ಲ ಎಲ್ಲಿಯೂ ನಡೆಯಬಾರದು. ಜನರು ಸಂಮಯದಿಂದ ವರ್ತಿಸಿ, ವೈದ್ಯಕೀಯ ಸಿಬ್ಬಂದಿಗಳಿಗೆ ಸಹಕರಿಸಿ. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ರೋಗವನ್ನು ತೊಲಗಿಸೋಣ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಮನವಿ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾಕ್ಕೆ‌ ಬಲಿಯಾದ ಮಹಿಳೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದ ನನ್ನಿಂದ ದೂರ ಇರಿ ಎಂದು ಬಿಜೆಪಿಯ ಶಾಸಕರೊಬ್ಬರು ಹೇಳಿದ್ದಾರಂತೆ. ಈ ರೀತಿ ಯಾರಾದರೂ ಅವರ ಕ್ಷೇತ್ರದಲ್ಲಿ ಸತ್ತು ಅಂತ್ಯಕ್ರಿಯೆಗೆ ಯಾರೂ ದಿಕ್ಕಿಲ್ಲ ಎಂದಾದರೆ ಅಲ್ಲಿಗೂ ಹೋಗುತ್ತೇನೆ. ನನಗೆ ನನ್ನ ಜೀವ ಮುಖ್ಯ‌ ಅಲ್ಲ, ಮಾನವೀಯತೆ ಮುಖ್ಯ ಎಂದು ತಿರುಗೇಟು ನೀಡಿದ್ದಾರೆ.

ಪಾದರಾಯನಪುರದಲ್ಲಿ ನಡೆದ ಘಟನೆಗೆ ತಪ್ಪು‌ಮಾಹಿತಿ ಕೂಡಾ ಒಂದು‌ ಕಾರಣ. ಅಲ್ಲಿನ ಜನರನ್ನು ತಪಾಸಣೆಗೆ ಒಳಪಡಿಸಲು ಬಿಬಿಎಂಪಿ ಸಿಬ್ಬಂದಿ ರಾತ್ರಿ ಹೋಗಿದ್ದ ಕಾರಣ ಜನ ಗೊಂದಲಕ್ಕೀಡಾಗಿ ವ್ಯಗ್ರರಾಗಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಇನ್ನೂ ಸ್ವಲ್ಪ ಜಾಗರೂಕತೆಯಿಂದ ನಿರ್ವಹಿಸಬಹುದಿತ್ತು ಎಂದು ಹೇಳಿಕೆ ನೀಡಿದ್ದೇನೆ. ಇಂದಿನ ನನ್ನ ಹೇಳಿಕೆಗೆ ಬೇರೆಯದೆ ಅರ್ಥ ಕಲ್ಪಿಸುವುದು ಬೇಡ. ಹಗಲಿನ ವೇಳೆಯಾಗಿದ್ದರೆ ಗೊಂದಲಗಳಿಗೆ ಎಡೆಮಾಡಿಕೊಡದೆ, ಜನರನ್ನು ಸುಲಭದಲ್ಲಿ ಮನವೊಲಿಸಿ ಕ್ವಾರೆಂಟೈನ್‌ಗೆ ಒಳಪಡಿಸಬಹುದಿತ್ತು ಎಂಬುದಷ್ಟೇ ನನ್ನ ಉದ್ದೇಶ. ಅಹಿತಕರ ಘಟನೆ ನಡೆದಾಗ ಯಾವ ಮುಂಜಾಗ್ರತೆ ಕೈಗೊಳ್ಳಬಹುದಿತ್ತು ಎಂಬ ಯೋಚನೆ ಬರುವುದು ಸಹಜ, ಅದನ್ನೇ ನಾನು ಹೇಳಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ.

ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆ ಹಿಂದೆ ನನ್ನ ಹೆಸರು ಕೆಡಿಸುವ ರಾಜಕೀಯ ಪಿತೂರಿ ಇರಬಹುದೆಂಬ ಸಂಶಯ ನನಗಿದೆ. ಈ ಬಗ್ಗೆ ನಾನೂ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅವೆಲ್ಲವನ್ನೂ ನಾನು ಸರ್ಕಾರದ ಗಮನಕ್ಕೆ ತರುತ್ತೇನೆ ಎಂದು ಜಮೀರ್ ತಿಳಿಸಿದ್ದಾರೆ.

ಪಾದರಾಯನಪುರದಲ್ಲಿ ತಪಾಸಣೆಗೆ ರಾತ್ರಿ ಹೋಗುವುದು ಬೇಡ, ಹಗಲಿಗೆ ಹೋಗೋಣ ಎಂದು ಬಿಬಿಎಂಪಿ ಆಯುಕ್ತರಿಗೆ ತಿಳಿಸಿ ಭಾನುವಾರ ಇಡೀ ದಿನ ಕಾದಿದ್ದೆ. ಬಿಬಿಎಂಪಿ ಸಿಬ್ಬಂದಿ ನನ್ನನ್ನು ಸಂಪರ್ಕಿಸದೆ ನೇರವಾಗಿ ಅಲ್ಲಿಗೆ ಹೋಗಿದ್ದರಿಂದ ಸ್ವಲ್ಪ‌ ಎಡವಟ್ಟಾಯಿತು ಎಂದು ಬೆಳಗ್ಗೆ ಟ್ವೀಟ್ ಮಾಡಿದ್ದರು.

ಪಾದರಾಯನಪುರದ ನಿವಾಸಿಗಳಲ್ಲಿ ಹೆಚ್ಚಿನವರು ಕಾರ್ಮಿಕ ವರ್ಗದವರು, ಬಡವರು ಮತ್ತು ಅಶಿಕ್ಷಿತರು. ಅವರು ಕೊರೊನಾ ಪರೀಕ್ಷೆಗೆ ಆಸ್ಪತ್ರೆಗೆ ಬರುವುದಿಲ್ಲ, ಇಲ್ಲಿಯೇ ಮಾಡಿ‌ ಎಂದು ಹಟ ಮಾಡಿದ್ದಾರೆ. ಅವರಿಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟು ಕೊರೊನಾ ತಪಾಸಣೆಗೆ ಒಳಪಡಿಸಬೇಕಿತ್ತು ಎಂದು ಜಮೀರ್ ಟ್ವೀಟ್ ಮಾಡಿದ್ದಾರೆ.

ಕೊರೋನಾ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಉಚಿತ ಚಿಕಿತ್ಸೆ ನೀಡಬೇಕು. ಸರ್ಕಾರವು ಕೊರೋನಾ ತಪಾಸಣೆ ಕಿಟ್, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಜಿ.ಎಸ್.ಟಿ ಮುಕ್ತ ಮಾಡಿ ಜನರ ಕೈಗೆಟುಕುವಂತೆ ಮಾಡಬೇಕು. ಕೊರೊನಾ ಬಡ ಜನರಿಗೆ ಹೊರೆಯಾಗಿ ತಮ್ಮವರ ಜೀವದ ಜೊತೆಗೆ ಕುಟುಂಬದವರ ಬದುಕು ಕಸಿಯದಿರಲಿ ಎಂದು ಜಮೀರ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com