ಕೊರೋನಾ ವೈರಸ್ ಲಾಕ್ ಡೌನ್: ಗರ್ಭಿಣಿ ಮಗಳನ್ನು ನೋಡಲು ಪೊಲೀಸರ ಕಣ್ತಪ್ಪಿಸಿ ಹೋಗಿದ್ದ ತಂದೆ ಜಲ ಸಮಾಧಿ

ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಆಸ್ಪತ್ರೆಗೆ ದಾಖಲಿಸಿದ್ದ ಗರ್ಭಿಣಿ ಮಗಳನ್ನು ನೋಡಲು ಹೋದ ತಂದೆ ಜಲ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ:‌ ಆಸ್ಪತ್ರೆಗೆ ದಾಖಲಿಸಿದ ಗರ್ಭಿಣಿ ಮಗಳನ್ನು ನೋಡಲು ಹೋದ ತಂದೆ ಜಲ ಸಮಾಧಿಯಾಗಿರುವ ಹೃದಯವಿದ್ರಾವಕ ಘಟನೆ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ನಡೆದಿದೆ.

ಪೆರುಮಾಳ್ (60 ವರ್ಷ) ಮೃತ ವ್ಯಕ್ತಿ. ತಮಿಳುನಾಡಿನ ಈರೋಡ್ ಜಿಲ್ಲೆಯ ಪಳ್ಳಿಪಾಲ್ಯದಲ್ಲಿ ವಾಸವಿದ್ದ ಪೆರುಮಾಳ್, ತನ್ನ ಮಗಳು ಸುಮತಿಯನ್ನು ಹನೂರು ತಾಲೂಕಿನ‌ ಗೋಪಿನಾಥಂ ಸಮೀಪದ ಪುದೂರು ಗ್ರಾಮಕ್ಕೆ ಮದುವೆ ಮಾಡಿಕೊಟ್ಟಿದ್ದರು. ಮಗಳು ಗರ್ಭಿಣಿಯಾಗಿದ್ದು, ಶನಿವಾರ  ಮೆಟ್ಟೂರು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಮಗಳನ್ನು ಕಾಣಬೇಕೆಂಬ ಹಂಬಲದಿಂದ ಚೆಕ್ ಪೋಸ್ಟ್ ಪೊಲೀಸರ ಕಣ್ತಪ್ಪಿಸಿ ಮೆಟ್ಟೂರನ್ನು ತಲುಪಲು ಪಾಲಾರ್ ಹಳ್ಳಕ್ಕೆ ಇಳಿದ ವೇಳೆ ಮಾರ್ಗ ಮಧ್ಯೆ ಈಜಲಾಗದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೈಸೂರು- ಮೆಟ್ಟೂರು ಮುಖ್ಯ ರಸ್ತೆಯ 200 ಮೀ.ನಲ್ಲೇ ಹಳ್ಳ  ಹರಿಯುತ್ತಿದ್ದು, ಒಂದು ಗಂಟೆ ಈಜಿದರೆ ತಮಿಳುನಾಡಿನ ಕಾರೇಕಾಡು ಸಿಗಲಿದೆ. ಕಾರೇಕಾಡಿನ‌ ಮೂಲಕ ಪರಿಚಯಸ್ಥರ ಬೈಕ್ ಹಿಡಿದು ಮೆಟ್ಟೂರು ತಲುಪಿ ಮಗಳ ನೋಡಬೇಕೆಂಬ ಹಂಬಲವೇ ತಂದೆಗೆ ಮುಳುವಾಗಿದೆ. ಇಂದು ಸಂಜೆ ತಮಿಳುನಾಡಿನ ಬರಗೂರು ಠಾಣಾ ವ್ಯಾಪ್ತಿಯಲ್ಲಿ  ಮೃತದೇಹ ಸಿಕ್ಕಿದ್ದು, ಪ್ರಕರಣ ದಾಖಲಾಗಿದೆ.

ವರದಿ: ಗುಳಿಪುರ ನಂದೀಶ ಎಂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com