ಮೈಸೂರು ಜಿಲ್ಲೆಯಾದ್ಯಂತ ಸಮರೋಪಾದಿಯಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಸಚಿವ ಡಾ.ಸುಧಾಕರ್ ಸೂಚನೆ 

ಕೋವಿಡ್- 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು,  ಮೈಸೂರು ಜಿಲ್ಲೆಯಲ್ಲಿ ಸೋಂಕು ಹರಡದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗ ಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಕರೆ ನೀಡಿದ್ದಾರೆ
ಡಾ. ಸುಧಾಕರ್ ಮತ್ತಿತರರು
ಡಾ. ಸುಧಾಕರ್ ಮತ್ತಿತರರು

ಮೈಸೂರು: ಕೋವಿಡ್- 19 ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು,  ಮೈಸೂರು ಜಿಲ್ಲೆಯಲ್ಲಿ ಸೋಂಕು ಹರಡದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗ ಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಕರೆ ನೀಡಿದ್ದಾರೆ

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾಯಿತ ಪ್ರತಿನಿಧಿಗಳು  ಮತ್ತು  ಅಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇದು ವರೆಗೆ ಮೃತಪಟ್ಟವರೆಲ್ಲ ,55 ರಿಂದ 82 ವಯಸ್ಸಿನವರಾಗಿದ್ದು ಬೇರೆ ಬೇರೆ ರೋಗಗಳಿಗೆ ಚಿಕಿತ್ಸೆ ಪಡೆಯುತಿದ್ದವರು. ಹೀಗಾಗಿ ಹಿರಿಯರ ಯೋಗಕ್ಷೇಮಕ್ಕೆ ಮುತುವರ್ಜಿ ವಹಿಸಬೇಕಿದೆ ಎಂದು ಸೂಚಿಸಿದರು. 

ಜಿಲ್ಲೆಯಲ್ಲಿ ಸೋಂಕು ಹರಡದಂತೆ ನೋಡಿಕೊಳ್ಳುವಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡಬೇಕಿದೆ. ಸರ್ಕಾರ ಅಗತ್ಯವಿರುವ ಎಲ್ಲ ನೆರವು ಒದಗಿಸಲಿದೆ. ಕೋವಿಡ್ ವಿರುದ್ದದ ಹೋರಾಟದಲ್ಲಿ ಶ್ರಮಿಸುತ್ತಿರುವ ಮಾಧ್ಯಮ ಮಿತ್ರರು, ಪೊಲೀಸರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಅದಕ್ಕೆ ಸರ್ಕಾರ ಅಗತ್ಯ ಸೂಚನೆ ನೀಡಿದೆ ಎಂದರು. 

ಆರ್ಥಿಕ ಸಂಕಷ್ಟದ ನಡುವೆಯೂ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತಿರುವ ವೈದ್ಯರಿಗೆ 7ನೇ ವೇತನ ಆಯೋಗದ ಶ್ರೇಣಿಗೆ ಸಮಾನವಾದ ವೇತನ ಮತ್ತು ಭತ್ಯೆಯನ್ನು ನೀಡಲಾಗಿದೆ. ಈ ಕುರಿತು ಈಗಾಗಲೇ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದಕ್ಕೆ ಸಮ್ಮತಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. 

ಕೆ ಆರ್ ಆಸ್ಪತ್ರೆ ವೈದ್ಯರನ್ನು ಕೋವಿಡ್ 19 ಆಸ್ಪತ್ರೆಗೆ ನಿಯೋಜಿಸಿರುವ ಹಿನ್ನಲೆಯಲ್ಲಿ ಕೊರತೆ ವೈದ್ಯರು ಮತ್ತು ಸಿಬ್ಬಂದಿ ಬೇರೆಡೆಯಿಂದ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಎರಡನೆಯ ಹಂತದ ಸೋಂಕಿತರ ತಪಾಸಣೆ ಪೂರ್ಣಗೊಂಡಿದು ಇನ್ನು ಮುಂದೆ ಜ್ವರ, ನೆಗಡಿ ಇತ್ಯಾದಿ ಲಕ್ಷಣ ಕಾಣಿಸಿಕೊಳ್ಳುವ ಎಲ್ಲರನ್ನು ಪರೀಕ್ಷೆಗೆ ಒಳಪಡಿಸುವಂತೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು. 

ಸಾರ್ವಜನಿಕರಿಗೆ ಕೋವಿಡ್ 19 ಕುರಿತು ಅಗತ್ಯ ಮಾಹಿತಿ ನೀಡಲು “ಆಪ್ತಮಿತ್ರ“  ಬುಧವಾರ ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯೆಡ್ಡಿಯೂರಪ್ಪನವರು ಚಾಲನೆ ನೀಡಲಿದ್ದಾರೆ. ಯಾವುದೇ ಸಮಸ್ಯೆ ಕುರಿತು ಪ್ರಶ್ನೆಗಳನ್ನು ಸಹಾಯವಾಣಿ ಸಂಖ್ಯೆ 14410 ಗೆ ಕರೆ ಮಾಡಿ ಸಾರ್ವಜನಿಕರು ಪರಿಹಾರ ಪಡೆದುಕೊಳ್ಳಬಹುದು ಎಂದರು. 

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಅಪ್ಲಿಕೇಶನ್‌ ಎಲ್ಲರೂ ಡೌನಲೋಡ್ ಮಾಡಿಕೊಂಡು ಬಳಸುವ ಮೂಲಕ ಸೋಂಕಿತರಿಂದ ರಕ್ಷಿಸಿಕೊಳ್ಳಬಹುದು. ಈ ಕುರಿತು ಎಲ್ಲರಿಗೂ ಮಾಹಿತಿ ನೀಡಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು. 

ಈಗಾಗಲೇ ಸೋಂಕು ಪೀಡಿತರಿಗೆ ತಂತ್ರಜ್ಞಾನ ಮತ್ತು ತಜ್ಞರನ್ನು ಒಳಗೊಂಡ ಏಕರೂಪದ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕಾಗಿ ಟೆಲಿ ಐ.ಸಿ.ಯು ಸೇವೆ ನೀಡಲಾಗುತ್ತಿದೆ. ವೈದ್ಯರು , ದಾದಿಯರು ಮತ್ತು ಇತರೆ ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ನಿಮ್ಹಾನ್ಸ್ ಮೂಲಕ ಆನ್ ಲೈನ್ ತರಬೇತಿ ನೀಡಲಾಗಿದೆ. ಇದುವರೆಗೂ 57,564 ಮಂದಿಗೆ ಚಿಕಿತ್ಸೆಗೆ ಸಂಬಂಧಿಸಿದ ತರಬೇತಿ ನೀಡಲಾಗಿದೆ ಎಂದು ಸಚಿವ ಡಾ.ಸುಧಾಕರ್ ರವರು ವಿವರಿಸಿದರು.

ಹೆರಿಗೆ ಆಸ್ಪತ್ರೆಗಳಲ್ಲಿ ಕೋವಿಡ್-19 ಕುರಿತು ತರಬೇತಿ ನೀಡಲಾಗಿದೆ. ರಾಜ್ಯದ ಎಲ್ಲಾ ಎನ್.ಎಸ್.ಎಸ್ ಸಂಯೋಜಕರಿಗೂ ತರಬೇತಿ ನೀಡಲಾಗಿದೆ.ಇದುವರೆಗೂ ರಾಜ್ಯಾದ್ಯಂತ 17 ಪ್ರಯೋಗಾಲಯಗಳಿಂದ 25,843 ಪರೀಕ್ಷೆಗಳನ್ನು ಮಾಡಲಾಗಿದೆ.
ದೇಶದಲ್ಲಿ ಅತೀ ಹೆಚ್ಚು " ಟೆಸ್ಟ್ ರೇಟ್" ನಮ್ಮ ರಾಜ್ಯದ್ದಾಗಿದೆ. ಒಂದು ವೇಳೆ ಸೋಂಕು ಉಲ್ಬಣಗೊಂಡಲ್ಲಿ ಚಿಕಿತ್ಸೆಗೆ ನೆರವಾಗುವಾಗುವಂತೆ 54,396 ಹಾಸಿಗೆಗಳನ್ನು ನಾನಾ ಆಸ್ಪತ್ರೆಗಳಲ್ಲಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.

ಇದುವರೆಗೆ ಒಟ್ಟು 418 ಸೋಂಕಿತರಾಗಿದ್ದು 17 ಮಂದಿ ಮೃತರಾಗಿದ್ದಾರೆ‌ ಗಮನಾರ್ಹ ಅಂಶ ಎಂದರೆ ಗುಣಮುಖರಾಗುತ್ತಿರುವ ಸಂಖ್ಯೆ ಕೂಡ ಸಮಾಧಾನ ತಂದಿದ್ದು ಮನೆಗೆ ತೆರೆಳಿದ್ದಾರೆ. ಇಂದು ಒಂದೇ ದಿನ 17 ಮಂದಿ ಗುಣಮುಖರಾಗಿದ್ದಾರೆ, ವೆಂಟಿಲೇಟರ್ ನಲ್ಲಿ ಕೇವಲ ಇಬ್ಬರಿದ್ದು ಅವರಿಗೂ ಉನ್ನತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com