ಕ್ವಾರಂಟೇನ್ ಗೆ ಒಳಪಡಿಸುವಂತೆ ಸೂಚಿಸಲು ಬಿಜೆಪಿ ನಾಯಕರೇನು ತಜ್ಞ ವೈದ್ಯರಲ್ಲ: ರಾಮಲಿಂಗಾ ರೆಡ್ಡಿ

ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ನಿರ್ದಿಷ್ಟವಾಗಿ ಇಂತಿಂತಹವರನ್ನೇ ಕ್ವಾರಂಟೇನ್ ಗೆ ಒಳಪಡಿಸಬೇಕು ಎಂದು ಬಹಿರಂಗವಾಗಿ ಸೂಚನೆ ನೀಡಲು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಬಿಜೆಪಿ ನಾಯಕರೇನು ಆರೋಗ್ಯ ತಜ್ಞರಲ್ಲ ಎಂದು ಗೃಹ ಖಾತೆ ಮಾಜಿ ಸಚಿವ ಹಾಗೂ ಬಿಟಿಎಂ ಬಡಾವಣೆ ಶಾಸಕ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ

ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ನಿರ್ದಿಷ್ಟವಾಗಿ ಇಂತಿಂತಹವರನ್ನೇ ಕ್ವಾರಂಟೇನ್ ಗೆ ಒಳಪಡಿಸಬೇಕು ಎಂದು ಬಹಿರಂಗವಾಗಿ ಸೂಚನೆ ನೀಡಲು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಬಿಜೆಪಿ ನಾಯಕರೇನು ಆರೋಗ್ಯ ತಜ್ಞರಲ್ಲ ಎಂದು ಗೃಹ ಖಾತೆ ಮಾಜಿ ಸಚಿವ ಹಾಗೂ ಬಿಟಿಎಂ ಬಡಾವಣೆ ಶಾಸಕ ರಾಮಲಿಂಗಾ ರೆಡ್ಡಿ ತಿರುಗೇಟು ನೀಡಿದ್ದಾರೆ.

ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಆಹಾರ ಒದಗಿಸಲು ತಮ್ಮ ಕ್ಷೇತ್ರದಲ್ಲಿ ಕಳೆದೊಂದು ತಿಂಗಳಿಂದ ನಡೆಸುತ್ತಿರುವ ಅನ್ನ ದಾಸೋಹ ಕೇಂದ್ರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ಕೊರೋನಾ ವೈರಸ್ ಸೋಂಕಿತರೊಂದಿಗೆ ಸಂಪರ್ಕ ಹೊಂದಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಯಾರನ್ನು ಕ್ವಾರಂಟೇನ್ ಮಾಡಬಹುದು ಎನ್ನುವ ಕುರಿತು ಸೂಚನೆ ನೀಡಲು ಬಿಜೆಪಿ ನಾಯಕರೇನು ತಜ್ಞರೇ? ತಜ್ಞ ವೈದ್ಯರು, ಪರಿಣಿತರು ಮಾತ್ರ ಈ ಕುರಿತು ಸೂಚನೆ ನೀಡಬೇಕೆ ಹೊರತು ಬಿಜೆಪಿ ನಾಯರಲ್ಲ ಎಂದರು. 

ಬಿಜೆಪಿಯವರು ಪ್ರತಿಯೊಂದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟುವ ಆಟ ಆಡುತ್ತಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯಲ್ಲಿ ನಾಲ್ಕೈದು ಜನ ಇದ್ದು ಅವರೇ ಸಮಾಜದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದರು. ಶಾಸಕರಾದ ಜಮೀರ್ ಅಹಮದ್ ಖಾನ್, ಸಿ.ಎಂ.ಇಬ್ರಾಹಿಂ ದೇಶ ದ್ರೋಹಿಗಳು ಎಂದು ಬಿಜೆಪಿ ನಾಯಕರು ಮಾಡಿರುವ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಾಮಲಿಂಗಾ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಅವರಂತಹವರ ಬಾಯಿಗೆ ಬೀಗ ಹಾಕಲು ಸಾಧ್ಯವಿಲ್ಲ. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದವರು ಇವರ ಸುದ್ದಿ ಪ್ರಸಾರ ಮತ್ತು ಮುದ್ರಣ ಮಾಡದಿದ್ದರೆ ಇಂತಹ ಪ್ರಚೋದನೆಗಳಿಗೆ ತೆರೆ ಬೀಳಲಿದೆ. ಇವರ ಬಾಯಿಗೂ ಬೀಗ ಬಿದ್ದಂತಾಗುತ್ತದೆ. ಪ್ರಚಾರ ದೊರೆಯದೇ ಇದ್ದರೆ ಇವರು ಮಾತನಾಡುವುದನ್ನೇ ನಿಲ್ಲಿಸುತ್ತಾರೆ ಎಂದರು. 

ಪಾದರಾಯನಪುರ ಗಲಭೆಯಲ್ಲಿ ಜಮೀರ್ ಅಹಮದ್ ಪಾತ್ರದ ಬಗ್ಗೆ ತಮಗೆ ಗೊತ್ತಿಲ್ಲ. ಹಾಗೇನಾದರೂ ಅವರು ಪ್ರಚೋದನೆ ನೀಡಿದ್ದರೆ ಪೊಲೀಸ್ ಇಲಾಖೆ ಗಮನಹರಿಸುತ್ತದೆ. ತಮಗೆ ಈ ಕುರಿತು ಮಾಹಿತಿ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು. ಪಾದರಾಯಪುರದಲ್ಲಿ ಸೋಂಕಿತರೊಂದಿಗೆ ಸಂಪರ್ಕಹೊಂದಿದ್ದವರನ್ನು ಕ್ವಾರಂಟೇನ್ ಮಾಡುವ ಮುನ್ನ ತಮ್ಮ ಅಭಿಪ್ರಾಯವನ್ನು ಪಾಲಿಸಿಲ್ಲ ಎಂದು ಜಮೀರ್ ಅಹಮದ್ ಮಾಡಿರುವ ಆರೋಪಗಳ ಕುರಿತು ಪ್ರಶ್ನಿಸಿದಾಗ, ನನ್ನ ಕ್ಷೇತ್ರದಲ್ಲೂ ಇಂತಹ ಎರಡು ಸೋಂಕು ಪ್ರಕರಣಗಳು ಬಂದಿದ್ದವು. ಸೋಂಕು ನಿಯಂತ್ರಣ ಕುರಿತು ಸ್ಪ್ರೇ ಸೇರಿದಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ ತಾವು ಯಾವುದನ್ನೂ ಸಹ ಪ್ರಶ್ನೆ ಮಾಡಿಲ್ಲ. ಇದು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ. ಇಲ್ಲಿ ಪ್ರೋಟೋಕಾಲ್ ಬರುವುದಿಲ್ಲ ಎಂದು ಜಮೀರ್ ಅಹಮದ್ ಖಾನ್ ನಡೆಯನ್ನು ಎಚ್ಚರಿಕೆಯಿಂದ ಟೀಕಿಸಿದರು. 

ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಹಾಗೂ ನಿರಾಶ್ರಿತರು ಕೂಲಿ ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ಈವರೆಗೆ ಸುಮಾರು 48 ಸಾವಿರ ಜನರಿಗೆ ಊಟ ಒದಗಿಸಲಾಗಿದೆ. ಇದರಲ್ಲಿ ಐದು ಸಾವಿರ ಊಟವನ್ನು ಬಿಬಿಎಂಪಿ ನೀಡಿದೆ ಎಂದರು. 
ಲಾಕ್ ಡೌನ್ ನಂತರ ವಿಶೇಷವಾಗಿ ಉತ್ತರ ಕರ್ನಾಟಕ, ಉತ್ತರ ಭಾರತದವರಾದ ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್. ಬಿಹಾರ, ಉತ್ತರ ಪ್ರದೇಶದ ಜನತೆಗೆ ಊಟ ಒದಗಿಸಲಾಗಿದೆ. ಮಾಜಿ ಮಹಾಪೌರರ ಮಂಜುನಾಥ ರೆಡ್ಡಿ ಮತ್ತಿತರರು ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ಒಳ್ಳೆಯ ಅಕ್ಕಿ, ಒಳ್ಳೆಯ ಎಣ್ಣೆ ಹಾಕಿ ಗುಣಮಟ್ಟದ ಊಟ ತಯಾರು ಮಾಡುತ್ತಿದ್ದೇವೆ. 8 ವಾರ್ಡ್ ಗಳಲ್ಲಿ 93 ಕಡೆಗಳಲ್ಲಿ ಊಟ ವಿತರಣೆ ಮಾಡಲಾಗುತ್ತಿದೆ. ಪ್ರತಿದಿನ ವಾಟ್ಸ್ ಅಪ್ ನಲ್ಲಿ ಸಂದೇಶ ಹಾಕಲಾಗುತ್ತಿದ್ದು, ಒಂದು ಸಾವಿರ ಸ್ವಯಂ ಸೇವಕರು ಊಟ ನೀಡುತ್ತಿದ್ದಾರೆ. ಎಲ್ಲಿಯವರೆಗೆ ಲಾಕ್ ಡೌನ್ ಇರುತ್ತದೆಯೋ ಅಲ್ಲಿಯ ತನಕ ಊಟ ವಿತರಣೆ ಮಾಡುತ್ತೇವೆ ಎಂದರು.

ಅನ್ನ ದಾಸೋಹ ಕೇಂದ್ರಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಡುಗೆ ತಯಾರಿ ವೀಕ್ಷಿಸಿದರು. ಜಯನಗರ ಶಾಸಕಿ ಸೌಮ್ಯ ರೆಡ್ಡಿ, ಹಿರಿಯ ಕಾಂಗ್ರೆಸ್ ಮುಖಂಡ ಎಚ್ ಎಂ ರೇವಣ್ಣ ಹಾಗೂ ಪಾಲಿಕೆ ಸದಸ್ಯರುಗಳು ಮತ್ತಿತರರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com