ಕೊರೋನಾ ತಂದ ಆರ್ಥಿಕ ಬಿಕ್ಕಟ್ಟು: ತವರಿನತ್ತ ಮುಖ ಮಾಡಿರುವ ಗಲ್ಫ್ ರಾಷ್ಟ್ರದಲ್ಲಿರುವ ಲಕ್ಷ ಲಕ್ಷ ಭಾರತೀಯರು!

ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಮತ್ತು ವೇತನ ಕಡಿತದ ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಕೊರೋನಾ ತಂದ ಆರ್ಥಿಕ ಬಿಕ್ಕಟ್ಟು: ತವರಿನತ್ತ ಮುಖ ಮಾಡಿರುವ ಗಲ್ಫ್ ರಾಷ್ಟ್ರದಲ್ಲಿರುವ ಲಕ್ಷ ಲಕ್ಷ ಭಾರತೀಯರು!

ಬೆಂಗಳೂರು: ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಮತ್ತು ವೇತನ ಕಡಿತದ ಅನಿಶ್ಚಿತ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಇಂಧನ ಸಂಪದ್ಭರಿತವಾಗಿ ಸಿಗುವ ಪೆಟ್ರೋಲಿಯಂ ರಫ್ತು ಮಾಡುವ ಸಂಘಟನೆ(ಒಪಿಇಸಿ) ದೇಶಗಳು ಹಿಂದೆಂದೂ ಕಾಣದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಕೋವಿಡ್-19 ಲಾಕ್ ಡೌನ್ ನಿಂದಾಗಿ ಇಂಧನಗಳ ಬೇಡಿಕೆ ಮತ್ತು ಬೆಲೆ ವಿಪರೀತವಾಗಿ ಇಳಿಕೆಯಾಗಿದ್ದು, ತೈಲ ಕಂಪೆನಿಗಳು ಉತ್ಪಾದನೆ ಮತ್ತು ವಿತರಣೆಯನ್ನು ಕಡಿಮೆ ಮಾಡುತ್ತಿವೆ. ಇದರಿಂದ ತೈಲ ಕಂಪೆನಿಗಳು ಮತ್ತು ಅವುಗಳಿಗೆ ಸಂಬಂಧಿಸಿರುವ ಎಲ್ಲಾ ಕಂಪನಿಗಳ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಅಲ್ಲಿ ಉದ್ಯೋಗದಲ್ಲಿರುವ ಭಾರತೀಯರು ವೇತನರಹಿತ ರಜೆ ಅಥವಾ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇದರಿಂದ ಹಲವು ಭಾರತೀಯರು ಇದೀಗ ತವರಿನತ್ತ ಮುಖಮಾಡುತ್ತಿದ್ದಾರೆ.

ಗಲ್ಫ್ ರಾಷ್ಟ್ರಗಳಲ್ಲಿರುವ ಭಾರತೀಯರಲ್ಲಿ ಬಹುತೇಕರು ಕೇರಳ, ತಮಿಳು ನಾಡು ಮತ್ತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯವರು. ಇತ್ತೀಚೆಗೆ ಯುನೈಟೆಡ್ ಎಮಿರೇಟ್ಸ್ ನಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗ ಅಕೌಂಟೆಂಟ್ ಗೆ ತನ್ನ ಮೇಲಾಧಿಕಾರಿಯಿಂದ ನಿಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಸಂದೇಶ ಬಂದಿತ್ತಂತೆ. ಇದೀಗ ಅಲ್ಲಿರಲಾರದೆ, ಭಾರತಕ್ಕೂ ಬರಲಾಗದೆ ಇರುವಂತಹ ಪರಿಸ್ಥಿತಿ ಅವರದ್ದು. ಇಡೀ ಕುಟುಂಬ ಇವರ ಆದಾಯದ ಮೇಲೆಯೇ ನಿಂತಿದೆ.

ಕೌಶಲ್ಯ ಹೊಂದಿರುವ ನೌಕರರು ಭಾರತದಲ್ಲಿರುವ ಅವರ ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳಲು ಅಲ್ಲಿಯೇ ಉಳಿದುಕೊಳ್ಳುವ ಮನಸ್ಸು ಮಾಡಿದ್ದರೆ, ಕಡಿಮೆ ಕೌಶಲ್ಯದ ಕೆಲಸಗಾರರು ಭಾರತಕ್ಕೆ ವಾಪಸ್ಸಾಗಲು ನೋಡುತ್ತಿದ್ದಾರೆ.

ವಿದೇಶಾಂಗ ಇಲಾಖೆಯ ಅಂಕಿಅಂಶ ಪ್ರಕಾರ ಗಲ್ಫ್ ರಾಷ್ಟ್ರಗಳಲ್ಲಿ 85.46 ಲಕ್ಷ ಭಾರತೀಯರಿದ್ದಾರೆ. ದಾಖಲೆಗಳಿಲ್ಲದ ಭಾರತೀಯ ಕಾರ್ಮಿಕರನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ ಎಂದು ತಿರುವನಂತಪುರದ ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಪ್ರೊ.ಎಸ್ ಇರುದಾಯ ರಾಜನ್ ತಿಳಿಸಿದ್ದಾರೆ. ಗಲ್ಫ್ ದೇಶವೊಂದರಲ್ಲಿಯೇ ಸುಮಾರು 10 ಲಕ್ಷ ದಾಖಲೆಗಳಿಲ್ಲದ ಕಾರ್ಮಿಕರು ಇರಬಹುದು ಎನ್ನುತ್ತಾರೆ. ಇದೀಗ ಸುಮಾರು 3 ಲಕ್ಷ ಕೇರಳಿಗರೇ ದೇಶಕ್ಕೆ ವಾಪಸ್ಸಾಗಲು ನೋಡುತ್ತಿದ್ದಾರೆ. ಗಲ್ಫ್ ದೇಶಗಳಲ್ಲಿ ಉದ್ಯೋಗ ಕಳೆದುಕೊಂಡ ಸುಮಾರು 15 ಲಕ್ಷ ಭಾರತೀಯರು ಹಂತ ಹಂತವಾಗಿ ಸೆಪ್ಟೆಂಬರ್ ವೇಳೆಗೆ ಭಾರತಕ್ಕೆ ಬರಬಹುದು ಎಂದು ಅಂದಾಜಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com