ಪೋಲೀಸರು, ಮಾಧ್ಯಮ, ಪೌರಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ: ಯಡಿಯೂರಪ್ಪಗೆ ಎಚ್.ಕೆ. ಪಾಟೀಲ್ ಪತ್ರ

ಕೊರೋನಾ ವಿರುದ್ಧ ರಾಜ್ಯದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ರಕ್ಷಣಾ ವ್ಯವಸ್ಥೆಯಲ್ಲಿರುವ ಪೊಲೀಸರು, ಮಾಧ್ಯಮದವರು, ಸ್ವಚ್ಛತಾ ವ್ಯವಸ್ಥೆಯಲ್ಲಿರುವ ಪೌರ ಕಾರ್ಮಿಕರಿಗೆಲ್ಲ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.
ಎಚ್.ಕೆ ಪಾಟೀಲ್
ಎಚ್.ಕೆ ಪಾಟೀಲ್

ಬೆಂಗಳೂರು: ಕೊರೋನಾ ವಿರುದ್ಧ ರಾಜ್ಯದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ರಕ್ಷಣಾ ವ್ಯವಸ್ಥೆಯಲ್ಲಿರುವ ಪೊಲೀಸರು, ಮಾಧ್ಯಮದವರು, ಸ್ವಚ್ಛತಾ ವ್ಯವಸ್ಥೆಯಲ್ಲಿರುವ ಪೌರ ಕಾರ್ಮಿಕರಿಗೆಲ್ಲ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರೆ ಬರೆದಿರುವ ಅವರು, ಕೊರೋನಾ ಮಹಾಮಾರಿ ವಿರುದ್ಧ ದೇಶದಲ್ಲಿ ಲಕ್ಷಾಂತರ ಜನ ಹೋರಾಟ ಮಾಡುತ್ತಿದ್ದು, ಕೆಲವರು ದಾನದ ಮುಖಾಂತರ, ಕೆಲವರು ಸೇವೆ ಮುಖಾಂತರ, ಕೆಲವರು ತಮ್ಮ ಪ್ರಾಣಾಪಾಯವನ್ನೂ ಲೆಕ್ಕಿಸದೇ ಹೋರಾಟದ ಕಾರ್ಯ ಮಾಡುತ್ತಿದ್ದಾರೆ. ಕೋವಿಡ್-19 ವಿರುದ್ಧ ಯೋಧರಂತೆ ಹೋರಾಟ ಮಾಡುತ್ತಿರುವ ವೈದ್ಯರು ಆರೋಗ್ಯ ಕಾರ್ಯಕರ್ತರು, ಪೋಲೀಸರು, ಮಾಧ್ಯಮ, ಪೌರಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಇವರೆಲ್ಲ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದು ತಮ್ಮ ದೇಶಪ್ರೇಮ , ಧೈರ್ಯ , ಪರೋಪಕಾರ , ತ್ಯಾಗ ಎಲ್ಲವನ್ನೂ ತಮ್ಮ ಕೆಲಸ ಕಾರ್ಯ ಸೇವೆಗಳಿಂದ ಅಭಿವ್ಯಕ್ತಿಗೊಳಿಸುತ್ತಿದ್ದಾರೆ . ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದ ವೈದ್ಯರು , ನರ್ಸ್‌ಗಳು , ಆರೋಗ್ಯ ಕಾರ್ಯಕರ್ತರು , ಮಾಧ್ಯಮದವರ ಸೇವೆ ಶ್ಲಾಘನೀಯ. ಇವರೆಲ್ಲರೂ ಪ್ರಾಣಕ್ಕೆ ಅಂಜದೇ ಬರಲಿರುವ ತೊಂದರೆ ಬಗ್ಗೆ ಎಲ್ಲವನ್ನೂ ತಿಳಿದಿದ್ದರೂ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ‌.

ತಮ್ಮ ಪ್ರಾಣಾಪಾಯವನ್ನೂ ಲೆಕ್ಕಿಸದೆ ಮಹಾಮಾರಿ ಕೋವಿಡ್- 19ರ ಜೊತೆ ಸಂಘರ್ಷದಲ್ಲಿರುವ ಸಹೋದರ ಸಹೋದರಿಯರಿಗೆ ಸೂಕ್ತ ಮನ್ನಣೆ ನೀಡಬೇಕಾದದ್ದು ನಮ್ಮ ಕರ್ತವ್ಯ. ಕೇವಲ ಚಪ್ಪಾಳೆ ಹೊಡೆದರೆ ಸಾಲದು , ಕೋವಿಡ್ - 19ರಿಂದ ತೊಂದರೆಯಾಗುವವರಿಗೆ ವಿಶೇಷ ರೀತಿಯ ಗೌರವ ನೀಡಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಗಡಿಯಲ್ಲಿ ನಡೆಯುವ ಯುದ್ಧಗಳಲ್ಲಿ ಪ್ರಾಣ ಪಣಕ್ಕಿಡುವ ಸೈನಿಕರಿಗೆ ಸಿಗುವ ಎಲ್ಲಾ ಗೌರವ ಮನ್ನಣೆಗಳೆಲ್ಲವೂ ಈ ಜೈವಿಕ ಯುದ್ಧದ ಯೋಧರಿಗೆ ಸಿಗಬೇಕು. ಪ್ರಾಣಾರ್ಪಣೆ ಮಾಡುವವರಿಗೆ ಹುತಾತ್ಮರೆಂದು ಗೌರವಿಸಿ , ಹುತಾತ್ಮರಿಗೆ ಸಿಗುವ ಸೌಲಭ್ಯಗಳನ್ನೆಲ್ಲ ನೀಡಬೇಕು. ಹೋರಾಟದಲ್ಲಿ ಅವರಿಗೆ , ಅವರ ಕುಟುಂಬದವರಿಗೆ ಹಾನಿ ಉಂಟಾದರೆ ಅವರ ನಿವೃತ್ತಿ ಅವಧಿವರೆಗೆ ಅವರಿಗೆ ಸಂಬಳ ನಿರಂತರವಾಗಿ ಪಾವತಿಯಾಗುತ್ತಿರಬೇಕು. ಇಂತಹ ಹಲವು ಗೌರವ ಮತ್ತು ಸವಲತ್ತುಗಳನ್ನು ಒಡಿಸ್ಸಾ ಸರ್ಕಾರ ಈಗಾಗಲೇ ಘೋಷಿಸಿದೆ. ಅದರಂತೆ‌ ಕರ್ನಾಟಕ ಸರ್ಕಾರವು ಮುಂದಾಗಬೇಕೆಂದು ಎಚ್.ಕೆ.ಪಾಟೀಲ್ ಪತ್ರ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಮ್ಮನ್ನೆಲ್ಲ ರಕ್ಷಿಸಲು ಹಗಲಿರುಳು ಶ್ರಮಿಸುತ್ತಿರುವ ಸರ್ಕಾರಿ ವೈದ್ಯರು, ಖಾಸಗಿ ವೈದ್ಯರು, ವೈದ್ಯಕೀಯ ಮತ್ತು ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಮಾಧ್ಯಮದವರು, ಸ್ವಚ್ಛತಾ ವ್ಯವಸ್ಥೆಯಲ್ಲಿರುವ ಪೌರ ಕಾರ್ಮಿಕರು ಇವರೆಲ್ಲರ ವೈಯಕ್ತಿಕ ಸುರಕ್ಷತೆ ಕಾಪಾಡುವುದು ನಮ್ಮ ಕರ್ತವ್ಯ. ಆದ್ದರಿಂದ ಈ ಕೆಲಸದಲ್ಲಿ ನಿರತರಾಗಿರುವ ಎಲ್ಲಾ ವ್ಯಕ್ತಿಗಳಿಗೂ ವಿಮಾ ಸೌಲಭ್ಯವನ್ನು ವಿಸ್ತರಿಸಿ ಈಗಿರುವ 50 ಲಕ್ಷ ರೂ.ಗಳಿಂದ 1 ಕೋಟಿ ರೂ.ಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಾಣತ್ಯಾಗಕ್ಕೂ ಸಿದ್ಧರಾಗಿ ಹೋರಾಡುತ್ತಿರುವ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ರಕ್ಷಣಾ ವ್ಯವಸ್ಥೆಯಲ್ಲಿರುವ ಪೊಲೀಸರು, ಮಾಧ್ಯಮದವರು, ಸ್ವಚ್ಛತಾ ವ್ಯವಸ್ಥೆಯಲ್ಲಿರುವ ಪೌರ ಕಾರ್ಮಿಕರು ಇವರಿಗೆಲ್ಲ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com