ಉಡುಪಿ: ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ಸೋಮಶೇಖರ್ ಭಟ್ ರಿಗೆ ಫೋನ್ ಮಾಡಿ ವಿಚಾರಿಸಿದ ಪ್ರಧಾನಿ ಮೋದಿ

ಆಶ್ಚರ್ಯಕರ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ಸೋಮಶೇಖರ್ ಭಟ್ ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಸೋಮಶೇಖರ್ ಭಟ್
ಸೋಮಶೇಖರ್ ಭಟ್

ಉಡುಪಿ: ಆಶ್ಚರ್ಯಕರ ರೀತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ ಸೋಮಶೇಖರ್ ಭಟ್ ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೋದಿ ಹಲವು ಆರ್ ಎಸ್ ಎಸ್ ಕಾರ್ಯಕರ್ತರಿಗೆ ಪೋನ್ ಮಾಡಿ ಮಾತನಾಡಿದ್ದಾರೆ. ಶುಕ್ರವಾರ ಭಟ್ ಅವಕಾಶ ಪಡೆದುಕೊಂಡಿದ್ದು, ಪ್ರಧಾನಿ ಜೊತೆಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಸಚಿವ ದಿವಂಗತ ಡಾ. ವಿ.ಎಸ್. ಆಚಾರ್ಯ ಅವರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದನ್ನು ತಿಳಿದಿದ್ದ ಪ್ರಧಾನಿ ನರೇಂದ್ರ ಮೋದಿ, 2012ರಲ್ಲಿ 71 ವಯಸ್ಸಿನಲ್ಲಿ ಆಚಾರ್ಯ ನಿಧನ ಹೊಂದಿದದ್ದು ದೊಡ್ಡ ನಷ್ಟ ಎಂದು ಸ್ಮರಿಸಿದ್ದಾರೆ. 

1968ರಲ್ಲಿ ಉಡುಪಿ ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನ ಸಂಘ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು. ದೆಹಲಿ ಹೊರತುಪಡಿಸಿದರೆ ಉಡುಪಿಯಲ್ಲಿ  ಭಾರತೀಯ ಜನ ಸಂಘ ಅಧಿಕಾರಕ್ಕೆ ಬರುವಲ್ಲಿ ಯಶಸ್ವಿಯಾಗಿತ್ತು. ಆಗ ಡಾ. ವಿ.ಎಸ್. ಆಚಾರ್ಯ ಅಧ್ಯಕ್ಷರಾದರೆ,  ಭಟ್ ಸದಸ್ಯರಾಗಿದ್ದರು. 

1941ರಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿರಬೇಕಾದರೆ ಭಟ್ ಆರ್ ಎಸ್ ಎಸ್ ಗೆ ಸೇರ್ಪಡೆಯಾಗಿದ್ದರು. 1953ರಲ್ಲಿ ಭಾರತೀಯ ಜನ ಸಂಘ ಉಡುಪಿ ಘಟಕದ ಮೊದಲ ಸದಸ್ಯರಾಗಿದ್ದ ಭಟ್, 1975ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು. ಉಡುಪಿಯಿಂದ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. 

ಆರು ನಿಮಿಷಗಳ ಕಾಲ ಸೋಮಶೇಖರ್ ಭಟ್ ಜೊತೆಗೆ ದೂರವಾಣಿ ಸಂಭಾಷಣೆ ನಡೆಸಿದ ಮೋದಿ, ತುರ್ತು ಪರಿಸ್ಥಿತಿಯನ್ನು ಹೇರುವುದರ ವಿರುದ್ಧ ಕರ್ನಾಟಕದ ನಾಯಕರ ಹೋರಾಟವು ಗಮನಾರ್ಹವಾದುದು ಮತ್ತು ಭವಿಷ್ಯದಲ್ಲಿ ನಿರಂಕುಶಾಧಿಕಾರಿ ಅಂಶಗಳಿಂದ ಸುರಕ್ಷಿತವಾಗಿರುವ ಬಲವಾದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕೋರಲು ಅನೇಕರಿಗೆ ಪ್ರೇರಣೆ ನೀಡಿತು ಎಂದು ಹೇಳಿರುವುದು ತಿಳಿದುಬಂದಿದೆ. 

1984ರಲ್ಲಿ ಉಡುಪಿ ಪುರಸಭೆ ಅಧ್ಯಕ್ಷರಾಗಿ ತಾವೂ ಸಲ್ಲಿಸಿದ ಸೇವೆ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಅನೇಕ ನಾಯಕರು ಹಾಗೂ ಕಾರ್ಯಕರ್ತರ ಕೊಡುಗೆ ಬಗ್ಗೆ ಮೋದಿ ಮಾತನಾಡಿರುವುದಾಗಿ ಭಟ್ ತಿಳಿಸಿದರು. ರಾಜ್ಯಮಟ್ಟದಲ್ಲಿ ದೊಡ್ಡ ಸ್ವಯಂಸೇವಕನಾಗಿಲ್ಲದಿದ್ದರೂ ಮೋದಿ ಪೋನ್ ಮಾಡಿ ಮಾತನಾಡಿಸಿರುವುದು ತುಂಬಾ ಖುಷಿ ನೀಡಿದೆ ಎಂದು ಸೋಮಶೇಖರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com