ರಾಜ್ಯದಲ್ಲೇ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಅತ್ಯಾಧುನಿಕ ಸ್ಯಾನಿಟೈಸರ್ ಯಂತ್ರ ಬಳಕೆ

ಕೊರೋನಾ ತಡೆಗಟ್ಟುವಿಕೆಯಲ್ಲಿ ಪರಿಣಾಮಕಾರಿ ಕೆಲಸ ಬಾಗಲಕೋಟೆಯಲ್ಲಿ ನಡೆಯುತ್ತಿದೆ. ನಗರದ ಸ್ವಚ್ಚತೆ ಕಾಪಾಡುವುದಕ್ಕಾಗಿ ಹಳೆಯ ಪದ್ದತಿ ಜತೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.
ಸ್ಯಾನಿಟೈಸರ್ ಯಂತ್ರ
ಸ್ಯಾನಿಟೈಸರ್ ಯಂತ್ರ

ಬಾಗಲಕೋಟೆ: ಕೊರೋನಾ ತಡೆಗಟ್ಟುವಿಕೆಯಲ್ಲಿ ಪರಿಣಾಮಕಾರಿ ಕೆಲಸ ಬಾಗಲಕೋಟೆಯಲ್ಲಿ ನಡೆಯುತ್ತಿದೆ. ನಗರದ ಸ್ವಚ್ಚತೆ ಕಾಪಾಡುವುದಕ್ಕಾಗಿ ಹಳೆಯ ಪದ್ದತಿ ಜತೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.
ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಅದರಲ್ಲೂ ಇಕ್ಕಟ್ಟಾದ ರಸ್ತೆಗಳಲ್ಲೂ ಸ್ವಚ್ಛತೆ ಕಾಪಾಡಲು, ಸ್ಯಾನಿಟೈಸ್ ಮಾಡಲು ಅತ್ಯಾಧುನಿಕ ಸ್ಯಾನಿಟೈಸರ್ ಯಂತ್ರ ಬಳಕೆಯನ್ನು ನಗರಸಭೆ ಆರಂಭಿಸಿದೆ.

ಬಾಗಲಕೋಟೆ ನಗರವನ್ನು ಆದಷ್ಟು ಬೇಗ ರೆಡ್‌ಝೋನ್ ಪ್ರದೇಶ ವ್ಯಾಪ್ತಿಯಿಂದ ಹೊರ ತರಲು ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಸ್ಥಳೀಯ ಶಾಸಕ ವೀರಣ್ಣ ಚರಂತಿಮಠ ಅವರು ಕೊರೋನಾ ಗುಮ್ಮ ಬಾಗಲಕೋಟೆ ನಗರಕ್ಕೆ ಒಕ್ಕರಿಸಿಕೊಂಡಾಗಿನಿಂದಲೂ ಅಧಿಕಾರಿಗಳೊಗೂಡಿ ಅದನ್ನು ಓಡಿಸಲು ಇನ್ನಿಲ್ಲದ ಹೋರಾಟ ನಡೆಸಿದ್ದಾರೆ. ನಗರದಲ್ಲಿ ವ್ಯಾಪಕ ಬಂದೋ ಬಸ್ತ್ ವ್ಯವಸ್ಥೆಯಿಂದ ಹಿಡಿದು ಸ್ವಚ್ಛತೆ ಕಾಪಾಡುವ ವಿಷಯದಲ್ಲಿ ನಿತ್ಯ ಸ್ವತಃ ಪರಿಶೀಲನೆ ನಡೆಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಥತೆ ಕಾಪಾಡಿಕೊಳ್ಳುವ ಮೂಲಕ ಕೊರೋನಾ ಹೊಡೆದೊಡಿಸಲು ಸಾಧ್ಯ ಎನ್ನುವುದನ್ನು ಅರಿತುಕೊಂಡಿರುವ ಅವರು ನಗರ ಸ್ವಚ್ಚತೆಗೆ ಪ್ರಥಮ ಆದ್ಯತೆ ನೀಡಿದ್ದಾರೆ.

ನಗರಸಭೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕ ನಗರ ಸ್ವಚ್ಛತಾ ಕಾರ್ಯದ ಕಡೆಗಂತೂ ಇನ್ನಿಲ್ಲದ ಗಮನ ಹರಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಬಾಗಲಕೋಟೆ ಹಳೆ ಪಟ್ಟಣ, ವಿದ್ಯಾಗಿರಿ ಮತ್ತು ನವನಗರದಲ್ಲಿ ನಿತ್ಯವೂ ಸ್ವಚ್ಛತಾ ಕಾರ್ಯ ಹಾಗೂ ಸ್ಯಾನಿಟೈಸರ್ ಕೆಲಸ ನಡೆಯಲೇ ಬೇಕು ಎನ್ನವ ಕಟ್ಟಪ್ಪಣೆ ಮಾಡಿದ್ದಾರೆ. ನಗರದ ಎಲ್ಲ ಕಡೆಗಳಲ್ಲೂ ನಿತ್ಯ ಸ್ವಚ್ಚತೆ ಮತ್ತು ಸೆನೆಟೈಸರಿಂಗ್ ಕೆಲಸ ನಡೆಯುತ್ತಿದೆ. ಇದರಿಂದಾಗಿ ನಗರಾದ್ಯಂತ ಕೊರೋನಾ ತೀವ್ರತೆ ಕಡಿಮೆ ಇದೆ. ಕೊರೋನಾ ಪ್ರಕರಣಗಳು ಪತ್ತೆ ಆಗಿರುವ ಪ್ರದೇಶದಲ್ಲೂ ತೀವ್ರ ನಿಗಾ ಜತೆ ಸ್ವಚ್ಛತೆ ಅಭಿಯಾನ ನಿರಂತರವಾಗಿ ನಡೆದಿರುವುದರಿಂದ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಜಿಲ್ಲಾಡಳಿತ ಕೂಡ ಅಲ್ಲಿನ ಜನರ ಸಹಕಾರ ಮುಂದುವರಿದಲ್ಲಿ ನಿರ್ಬಂದವನ್ನು ಕಡಿಮೆ ಮಾಡುವ ಯೋಚನೆಯಲ್ಲಿದೆ. ನಗರ ಸ್ವಚ್ಚತೆ ಮತ್ತು ಸ್ಯಾನಿಟೈಸರ್ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿರುವಾಗಲೇ ರಾಜ್ಯದಲ್ಲೇ ಮೊದಲ ಬಾರಿಗೆ ವಿದೇಶಿ ತಂತ್ರಜ್ಞಾನದ ರಸಾಯನಿಕ ಸಿಂಪಡಿಸುವ ನೂತನ ಅತ್ಯಾಧುನಿಕ ಯಂತ್ರ ಬಳಕೆ ಮಾಡಿಕೊಂಡು ಸ್ಯಾನಿಟೈಸರ್ ಕಾರ್ಯ ನಡೆದಿದೆ. ಭಾರತದ ಕೃಷಿ ಸಂಬಂಧಿಸಿದ ರಾಸಾಯನಿಕ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಯುಪಿಎಲ್ ಕಂಪನಿಯು ಜಿಲ್ಲಾಡಳಿತಕ್ಕೆ ಯಂತ್ರವನ್ನು ನೀಡಿದೆ. ಈ ಯಂತ್ರದ ಮೂಲಕ ಕಡಿಮೆ ಮಾನವ ಸಂಪನ್ಮೂಲದಿಂದ ನಗರಾದ್ಯಂತ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಮಾಡಲು ಸಾಧ್ಯವಾಗಿದೆ.

ಒಬ್ಬ ವ್ಯಕ್ತಿ ಮಾತ್ರ ಈ ಯಂತ್ರವನ್ನು ನಿರ್ವಹಣೆ ಮಾಡಬಹುದಾಗಿದೆ. ಅಗಲವಾದ ರಸ್ತೆಗಳಲ್ಲಷ್ಟೆ ಅಲ್ಲದೆ ಇಕ್ಕಟ್ಟಾದ ರಸ್ತೆಗಳಲ್ಲೂ ಸೆನೆಟೈಸ್ ಮಾಡಬಹುದಾಗಿದೆ. ರಾಸಾಯನಿಕ ಸಿಂಪಡಣೆ ಕೂಡಾ ಪರಿಣಾಮಕಾರಿ ಆಗಿದೆ. ಇಕ್ಕಟ್ಟಾದ ಪ್ರದೇಶಗಳಲ್ಲೂ ನಗರಸಭೆ ಸ್ಯಾನಿಟೈಸರ್ ಕೆಲಸ ಆರಂಭಿಸಿರುವುದು ನಗರದ ಜನತೆಗೆಯ ಮೆಚ್ಚುಗೆಗಳಿಸುವಲ್ಲಿ ಯಶಸ್ಸು ಕಂಡಿದೆ. ೧೩ ಲಕ್ಷ ರೂ. ಗಳ ಬೆಲೆ ಬಾಳುವ ಈ ಅತ್ಯಾಧುನಿಕ ಯಂತ್ರ ಬಳಕೆ ಕಂಡು ಇತರರರೂ ಇದರ ಪ್ರಯೋಜನ ಪಡೆದುಕೊಳ್ಳುವ ಚಿಂತನೆ ಆರಂಭಿಸಿದ್ದಾರೆ.

ಈ ಯಂತ್ರದಿಂದ ರೆಡ್ ಝೋನ್, ಬಫರ್ ಝೋನ್ ಸೇರಿದಂತೆ ಇತರೆ ಸ್ಥಳಗಳಲ್ಲಿ ರಸಾಯನ ಸಿಂಪಡಿಸುವ ಮೂಲಕ ಕೊರೊನಾ ವೈರಸ್ ಹೊರದೋಡಿಸುವ ಕೆಲಸ ವೇಗವಾಗಿ ನಡೆಯಬೇಕು ಎನ್ನುವುದು ತಮ್ಮ ಉದ್ದೇಶವಾಗಿದೆ ಎನ್ನುವ ಆಶಯವನ್ನು ಶಾಸಕ ವೀರಣ್ಣ ಚರಂತಿಮಠ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ಸ್ಯಾನಿಟೈಸರ್ ಮಾಡುವ ಮೂಲಕ ಅತ್ಯಾಧುನಿಕ ಯಂತ್ರ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಈ ಯಂತ್ರದ ಪ್ರಯೋಜನ ಕೇವಲ ಬಾಗಲಕೋಟೆಗೆ ಸೀಮಿತವಾಗದೇ ರಾಜ್ಯದ ಎಲ್ಲ ಗ್ರಾಮ, ಪಟ್ಟಣ, ನಗರ ಪ್ರದೇಶಕ್ಕೆ ಸಿಗುವಂತಾಗಬೇಕು.

ಕಡಿಮೆ ಮಾನವ ಸಂಪನ್ಮೂಲ, ಕಡಿಮೆ ಆವಧಿ, ಇಕ್ಕಟ್ಟಾದ ಪ್ರದೇಶಗಳಲ್ಲೂ ವ್ಯವಸ್ಥಿತವಾಗಿ ಸ್ಯಾನಿಟೈಸರ್ ಮಾಡಲು ಸಹಾಯಕವಾಗುವ ಈ ಯಂತ್ರದ ಸೇವೆ ಲಭ್ಯವಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎನ್ನುವುದು ನಗರಸಭೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com