ಫ್ಯಾನ್, ಕೂಲರ್ ಕೆಟ್ಟು ಸೆಖೆಗೆ ಬೆಂದು ಹೋಗುತ್ತಿರುವ ಜನ, ಕಲಬುರಗಿಯಲ್ಲಿ ಖಾಲಿ ಕುಳಿತಿರುವ ಎಲೆಕ್ಟ್ರಿಷಿಯನ್!

ಕೋವಿಡ್-19 ಸಾಂಕ್ರಾಮಿಕ ಪಿಡುಗನ್ನು ಮಟ್ಟಹಾಕಲು ಲಾಕ್ ಡೌನ್ ಘೋಷಣೆಯಾದ ನಂತರ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಲಬುರಗಿ: ಕೋವಿಡ್-19 ಸಾಂಕ್ರಾಮಿಕ ಪಿಡುಗನ್ನು ಮಟ್ಟಹಾಕಲು ಲಾಕ್ ಡೌನ್ ಘೋಷಣೆಯಾದ ನಂತರ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ ಎಂಬುದು ಜನಜನಿತ ಮಾತು.

ಭಾರತದಲ್ಲಿ ಮೊದಲ ಕೊರೋನಾ ಸಾವು ಪ್ರಕರಣ ವರದಿಯಾದ ಕರ್ನಾಟಕದ ಕಲಬುರಗಿಯಲ್ಲಿ ತಿಂಗಳ ಹಿಂದೆಯವರೆಗೂ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಹೇಳಿಕೇಳಿ ಕಲಬುರಗಿ ಬಿಸಿಲಿನ ನಾಡು. ಬೇಸಿಗೆಯಲ್ಲಿ ಇಲ್ಲಿ ಕರೆಂಟ್, ಫ್ಯಾನ್ ಇಲ್ಲದೆ ಜನರು ಮನೆಯೊಳಗೆ ಇರಲು ಸಾಧ್ಯವಾಗದ ಪರಿಸ್ಥಿತಿ. ಸ್ಥಿತಿವಂತರ ಮನೆಯಲ್ಲಿ ಹವಾನಿಯಂತ್ರಿತ ಕೂಲರ್, ಏರ್ ಕಂಡೀಷನರ್ ವ್ಯವಸ್ಥೆಯಿರುತ್ತದೆ. ಇವುಗಳು ಹಾಳಾದರೆ ಕೂಡಲೇ ಎಲೆಕ್ಟ್ರಿಷಿಯನ್ ಗೆ ಕರೆ, ಬಂದು ರಿಪೇರಿ ಮಾಡಿಕೊಡಿ ಎಂದು.ಅವರು ಬಂದು ದುರಸ್ತಿಗೊಳಿಸಿ ಹೋಗುತ್ತಿದ್ದರು.

ಆದರೆ ಈ ಬೇಸಿಗೆಯಲ್ಲಿ ಲಾಕ್ ಡೌನ್ ನಿಂದಾಗಿ ಫ್ಯಾನ್, ಕರೆಂಟ್, ಕೂಲರ್, ಏರ್ ಕಂಡೀಷನಲ್ ಕೈಕೊಟ್ಟರೆ ಎಲೆಕ್ಟ್ರಿಷಿಯನ್ ಎಲ್ಲಿ ಸಿಗುತ್ತಾರೆ, ಜನರು ತಮ್ಮ ಪರಿಸ್ಥಿತಿಗೆ ಹಲುಬುತ್ತಾ ದಿನಕಳೆಯಬೇಕಾದ ಪರಿಸ್ಥಿತಿ.ಇಲ್ಲಿ ಬೇಸಿಗೆಯಲ್ಲಿ 40 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಉಷ್ಣತೆಯಿರುತ್ತದೆ.

ಇಲ್ಲಿನ ಎಲೆಕ್ಟ್ರಿಷಿಯನ್ ಝಾಕೀರ್ ಪಟೇಲ್, ನನಗೆ ಪ್ರತಿದಿನ ಮೂರ್ನಾಲ್ಕು ಕರೆಗಳು ಗ್ರಾಹಕರಿಂದ ಬರುತ್ತವೆ. ಕರೆಂಟ್ ರಿಪೇರಿ ಮಾಡಿ ಎಂದು ಕೇಳುತ್ತಿರುತ್ತಾರೆ. ಲಾಕ್ ಡೌನ್ ನಿಂದಾಗಿ ಹೋಗಲು ಸಾಧ್ಯವಾಗದಿರುವುದರಿಂದ ಸಣ್ಣಪುಟ್ಟ ರಿಪೇರಿಗಳಾದರೆ, ಗ್ರಾಹಕರಿಂದಲೇ ಮಾಡಲು ಸಾಧ್ಯವಾಗುವುದಾದರೆ ಫೋನ್ ನಲ್ಲಿಯೇ ಈ ರೀತಿ ಮಾಡಿ ಎಂದು ಸೂಚನೆ ಕೊಡುತ್ತೇವೆ. ದೊಡ್ಡ ರಿಪೇರಿಯಾದರೆ ಸ್ವಲ್ಪ ದಿನ ಕಾಯಿರಿ ಎನ್ನುತ್ತೇವೆ, ಬೇರೆ ದಾರಿಯಿಲ್ಲ ಎಂದರು.

ಕಲಬುರಗಿ ನಗರದಲ್ಲಿ ಸುಮಾರು 1.5 ಲಕ್ಷ ಮನೆಗಳಿವೆ. ಕರೆಂಟ್ ರಿಪೇರಿಗೆಂದು ಅವರ ಮನೆಗಳಿಗೆ ಹೋಗುವುದು ನಮಗೆ ಮತ್ತು ಅವರಿಗೆ ತೊಂದರೆಯೇ. ಮೊದಲು ದಿನಕ್ಕೆ 800 ರೂಪಾಯಿ ಸಂಪಾದನೆ  ಮಾಡುತ್ತಿದ್ದ ಎಲೆಕ್ಟ್ರಿಷಿಯನ್ ಗಳು ಇಂದು ಅರೆಕಾಸಿಲ್ಲದೆ ಕಷ್ಟಪಡುತ್ತಿದ್ದಾರೆ.

ಇದೇ ಮೊದಲ ವರ್ಷ ಬೇಸಿಗೆಯಲ್ಲಿ ಎಲೆಕ್ಟ್ರಿಷಿಯನ್ ಗಳು ಕೆಲಸವಿಲ್ಲದೆ ಸುಮ್ಮನೆ ಕುಳಿತಿರುವುದು.ಪೊಲೀಸರ ಭಯದಿಂದ ಮತ್ತು ಕೊರೋನಾ ಆತಂಕದಿಂದ ಕೆಲಸವಿದ್ದರೂ, ಗ್ರಾಹಕರು ಕರೆಯುತ್ತಿದ್ದರೂ ಮನೆ ಬಿಟ್ಟು ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ. ಎಲೆಕ್ಟ್ರಿಕಲ್ ಸಾಮಗ್ರಿಗಳ ಪೂರೈಕೆ ಕೂಡ ಕಳೆದ ಹಲವು ದಿನಗಳಿಂದ ನಿಂತುಹೋಗಿದೆ ಎಂದು ಮತ್ತೊಬ್ಬ ಎಲೆಕ್ಟ್ರಿಷಿಯನ್ ಗುರುಲಿಂಗಯ್ಯ ಸ್ವಾಮಿ ಹೇಳುತ್ತಾರೆ.

ಹೀಗೆ ಕಲಬುರಗಿ ನಗರದಲ್ಲಿ ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಷಿಯನ್ ಗಳಿದ್ದಾರೆ. ಲಾಕ್ ಡೌನ್ ಅವರ ಸಂಪಾದನೆಗೆ ಮತ್ತು ಗ್ರಾಹಕರಿಗೂ ತೊಂದರೆ ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com