ಮನೆ ಕಸದ ಜೊತೆ ಮಾಸ್ಕ್ ಇದ್ದರೆ ಭಾರಿ ದಂಡ: ಬಿಬಿಎಂಪಿ ಎಚ್ಚರಿಕೆ

ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಪೌರ ಕಾರ್ಮಿಕರ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿರುವ ಬಿಬಿಎಂಪಿ ಮನೆ ಕಸದ ಜೊತೆ ಮಾಸ್ಕ್ ಇದ್ದರೆ ಭಾರಿ ದಂಡ ಹಾಕಲಾಗುತ್ತದೆ ಎಂದು ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿರುವಂತೆಯೇ ಪೌರ ಕಾರ್ಮಿಕರ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿರುವ ಬಿಬಿಎಂಪಿ ಮನೆ ಕಸದ ಜೊತೆ ಮಾಸ್ಕ್ ಇದ್ದರೆ ಭಾರಿ ದಂಡ ಹಾಕಲಾಗುತ್ತದೆ ಎಂದು ಬೆಂಗಳೂರಿಗರಿಗೆ ಎಚ್ಚರಿಕೆ ನೀಡಿದೆ.

ಲಾಕ್​ಡೌನ್ ನಿಯಮಗಳ ಕಟ್ಟುನಿಟ್ಟು ಅನುಷ್ಠಾನ ಆಗುತ್ತಿರುವಂತೆಯೇ ಬಹುತೇಕ ಮಂದಿಯ ಬಳಿ ಈಗ ಮಾಸ್ಕ್ ಬಂದಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ, ಸಾಕಷ್ಟು ಸಂಖ್ಯೆಯಲ್ಲಿ ಮಾಸ್ಕ್​ಗಳಿವೆ. ಈಗ ಈ ಮಾಸ್ಕ್​ಗಳಿಂದಲೇ  ಪೌರಕಾರ್ಮಿಕರಿಗೆ ಹೊಸ ಸಮಸ್ಯೆ ಎದುರಾಗಿದ್ದು, ಜನರು ಮಾಸ್ಕ್​ಗಳನ್ನ ಕಸದೊಂದಿಗೆ ಬೆರೆಸಿ ಎಸೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂಥ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಮಾಸ್ಕ್​ಗಳಲ್ಲಿ ಕೊರೋನಾ ವೈರಸ್ ಇದ್ದರೆ ಬಹಳ ಬೇಗ ಹರಡುವ ಸಾಧ್ಯತೆ ಇದೆ. ಅಂತೆಯೇ  ಪೌರಕಾರ್ಮಿಕರಿಗೂ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ಬಿಬಿಎಂಪಿ ಕಸ ವಿಲೇವಾರಿ ನಿಯಮಗಳನ್ನ ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ.

ಅದರಂತೆ ಹಸಿ ಕಸ ಅಥವಾ ಒಣ ಕಸಗಳ ಜೊತೆ ಮಾಸ್ಕ್ ​ಗಳನ್ನ ಇಟ್ಟು ಕೊಡಬಾರದು. ಹಾಗೆ ಮಾಡಿದರೆ 2 ಸಾವಿರ ರೂ ವರೆಗೂ ದಂಡ ವಿಧಿಸಲಾಗುವುದು. ಹಾಗೂ ಆ ಮನೆಯ ಕಸವನ್ನೇ ಸ್ವೀಕರಿಸಲಾಗುವುದಿಲ್ಲ ಎಂದು ಬಿಬಿಎಂಪಿ ಹೇಳಿದೆ. ಮಾಸ್ಕ್​ಗಳನ್ನು ಸ್ಯಾನಿಟರಿ  ತ್ಯಾಜ್ಯಗಳೆಂದು ಪರಿಗಣಿಸಿ ಪ್ರತ್ಯೇಕಗೊಳಿಸಬೇಕು ಎಂದು ಸೂಚಿಸಿದೆ. 

ಕೆಲ ತಜ್ಞರು ಕಸದೊಂದಿಗೆ ಮಾಸ್ಕ್ ಬೆರೆಸಿದಾಗ, ಅದನ್ನು ವಿಂಗಡಣೆ ಮಾಡುವ ಪೌರ ಕಾರ್ಮಿಕರಿಗೆ ಕೊರೋನಾ ಸೋಂಕುವ ಅಂಟು ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಆಡಳಿತ ಈ ಕ್ರಮ ಕೈಗೊಂಡಿದೆ.

ಸಾರ್ವಜನಿಕರು ಕಸದ ಜೊತೆ ಮಾಸ್ಕ್ ಮಿಶ್ರಣಗೊಳಿಸಿ ಕೊಟ್ಟರೆ ಮೊದಲ ಬಾರಿ ಅವರಿಗೆ 1 ಸಾವಿರ ರೂ ದಂಡ ವಸೂಲಿ ಮಾಡಬೇಕು. ಆ ದಿನ ಅವರ ಮನೆಯ ಕಸವನ್ನು ಹಿಂದಿರುಗಿಸಬೇಕು. ಎರಡನೇ ಬಾರಿ ಆ ತಪ್ಪು ಪುನಾವರ್ತನೆ ಆದರೆ 2 ಸಾವಿರ ರೂ ದಂಡ ಹಾಕಬೇಕು. ಹಾಗೂ  ಆ ಮನೆಯಿಂದ ಮತ್ತೆ ಕಸ ಪಡೆಯಬಾರದು ಎಂದು ಪೌರ ಕಾರ್ಮಿಕರಿಗೆ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com