ಚಿಕಿತ್ಸೆಗೆ ಆಸ್ಪತ್ರೆಗಳ ನಕಾರ: 7 ದಿನದ ಬಾಣಂತಿ ಕೊರೋನಾಗೆ ಬಲಿ

7 ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟಿರುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 7 ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗದೆ ಮೃತಪಟ್ಟಿರುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. 

ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಮತ್ತು ಖಾಸಗಿ ಆಸ್ಪತ್ರೆಗಳ ಬೇಜವಾಬ್ದಾರಿತನದಿಂದ 26 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಈಗಷ್ಟೇ ಕಣ್ಣು ಬಿಟ್ಟಿರುವ ಮಗು ಅನಾಥವಾಗಿದೆ. 

ನಗರದ ಇಎಸ್ಐ ಆಸ್ಪತ್ರೆಗಳಲ್ಲಿ 7 ದಿನಗಳ ಹಿಂದಷ್ಟೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. ಅಲ್ಲಗೆ, ಮಗುವಿನೊಂದಿಗೆ ಮನೆಗೆ ತೆರಳಿದ್ದರು. ಈ ನಡುವೆ ಗುರುವಾರ ರಾತ್ರಿ1ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ಇಎಸ್ಐ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಹಾಸಿಗೆ ಲಭ್ಯವಾಗಿರಲಿಲ್ಲ. 

ಅಲ್ಲಿಂದ ನಾಗರಬಾವಿಯ ಎಂಜಿ ಆಸ್ಪತ್ರೆಗೆ ತೆರಳಿ ರ್ಯಾಪಿಡ್ ಟೆಸ್ಟ್ ಮೂಲಕ ಕೊರೋನಾ ಪರೀಕ್ಷೆ ಮಾಡಿಸಿದ್ದು, ಈ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲಿಂದ ರಾಜೀವ್ ಗಾಂಧಿ, ಜಯನಗರದ ಜನರಲ್ ಆಸ್ಪತ್ರೆ ಸೇರಿದಂತೆ ಹಲವು ಖಾಸಗಿ ಆಸ್ಪತ್ರೆಗಳಿಗೆ ಹೋಗಲಾಗಿದೆ. ಆದರೆ, ಹಾಸಿಗೆ ಹಾಗೂ ವೆಂಟಿಲೇಟರ್ ದೊರಕಿಲ್ಲ ಎಂದು ಚಿಕಿತ್ಸೆ ನೀಡಲು ನಿರಾಕರಿಸುವುದಾಗಿ ರೋಗಿಯ ಸಂಬಂಧಿಕರು ಮಾಹಿತಿ ನೀಡಿದ್ದಾರೆ. 

ರಾತ್ರಿ 2.20ರ ಸುಮಾರಿಗೆ ಸ್ಥಳೀಯ ಶಾಸಕರಿಗೆ ರೋಗಿ ಸಂಬಂಧಿಕರು ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಶಾಸಕರು ಆಸ್ಪತ್ರೆ ಕೊಡಿಸಲು ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಬಳಿಕ ನಾಗರಬಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದ್ದು, ಚಿಕಿತ್ಸೆ ಫಲಿಸದೇ ಸೋಂಕಿತ ಮಹಿಳೆ ಶುಕ್ರವಾರ ಸಾವನ್ನಪ್ಪಿದ್ದಾರೆ. 

ಮಗು ಹುಟ್ಟಿದ ಆಸ್ಪತ್ರೆಗೆ ದಾಖಲು ಮಾಡಲು ತೆರಳಿದಾಗ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ದಾಖಲು ಮಾಡುವಂತೆ ತಿಳಿಸಿದರು. ಬಳಿಕ ನಾವು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ ಶ್ರೀ ವೆಂಕಟೇಶ್ವರ ಆಸ್ಪತ್ರೆಗೆ ಕರೆದೊಯ್ದಿದ್ದೆವು. ಅಲ್ಲಿಯೂ ಚಿಕಿತ್ಸೆ ದೊರಕಿರಲಿಲ್ಲ. ಎಲ್ಲಾ ಆಸ್ಪತ್ರೆಗಳೂ ತಮ್ಮ ಬಳಿ ವೆಂಟಿಲೇಟರ್ ವ್ಯವಸ್ಥೆ ಇಲ್ಲ ಎಂದೇ ಹೇಳುತ್ತಿದ್ದರು ಎಂದು ಮಹಿಳೆಯ ಪತಿ ಹೇಳಿದ್ದಾರೆ. 

ಶಾಸಕಿ ಸೌಮ್ಯಾ ರೆಡ್ಡಿಯವರು ಮಾತನಾಡಿ, ಸಾಕಷ್ಟು ಆಸ್ಪತ್ರೆಗಳಿಗೆ ಕರೆ ಮಾಡಿದ್ದೆ. ಎಲ್ಲಿಯೂ ಹಾಸಿಗೆಗಳು ಲಭ್ಯವಿರಲಿಲ್ಲ. ಬಳಿಕ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಬೆಳಿಗ್ಗೆ 5 ಗಂಟೆಗೆ ಹಾಸಿಗೆ ದೊರಕಿತ್ತು. ಅಷ್ಟರಲ್ಲಾಗಲೇ ಮಹಿಳೆ ಸಾವನ್ನಪ್ಪಿದ್ದಾರೆಂಬುದು ತಿಳಿಯಿತು. ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿದಿದ್ದರೆ, ಬದುಕುಳಿಯುತ್ತಿದ್ದರು ಎಂದು ಹೇಳಿದ್ದಾರೆ. 

ಪ್ರತೀವಾರ ಇಂತಹದ್ದೇ ಪ್ರಕರಣಗಳು ಬರುತ್ತಲೇ ಇರುತ್ತವೆ. ಈ ಬಗ್ಗೆ ಸರ್ಕಾರ ಗಮನಹರಿಸಿ, ಸೋಂಕಿತರಿಗೆ ಹಾಸಿಗೆ ಸಿಗುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ. 

ಇನ್ನು ಪತ್ನಿಯನ್ನು ಕಳೆದುಕೊಂಡ ವ್ಯಕ್ತಿಗ ಆಕ್ರಂದನ ಮುಗಿಲು ಮುಟ್ಟಿದ್ದು, ಇದೀಗ ತಾಯಿಯಿಲ್ಲದೆ ಈ ಪುಟ್ಟ ಕಂದಮ್ಮನನ್ನು ಹೇಗೆ ಪೋಷಿಸಲಿ ಎಂದು ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com