ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ: ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ರಾಜ್ಯಪಾಲ ವಜುಭಾಯ್ ವಾಲಾ ಸಭೆ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 72,000ಕ್ಕೆ ಏರಿಕೆಯಾಗಿದ್ದು, ಈ ನಡುವಲ್ಲೇ ರಾಜ್ಯದ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಸಭೆ ಮಾತುಕತೆ ನಡೆಸಿದ್ದಾರೆ. 
ರಾಜ್ಯಪಾಲರ ಭೇಟಿಯಾದ ಸಿಎಂ ಯಡಿಯೂರಪ್ಪ
ರಾಜ್ಯಪಾಲರ ಭೇಟಿಯಾದ ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 72,000ಕ್ಕೆ ಏರಿಕೆಯಾಗಿದ್ದು, ಈ ನಡುವಲ್ಲೇ ರಾಜ್ಯದ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಸಭೆ ಮಾತುಕತೆ ನಡೆಸಿದ್ದಾರೆ. 

ರಾಜ್ಯಪಾಲ ವಾಲಾ ಅವರೇ ಯಡಿಯೂರಪ್ಪ ಅವರಿಗೆ ಬುಲಾವ್ ಕಳುಹಿಸಿದ್ದು, ಇದರಂತೆ ಯಡಿಯೂರಪ್ಪ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ರಾಜಭವನಕ್ಕೆ ಭೇಟಿ ನೀಡಿದರು. ಈ ಹಿಂದೆ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಇದೀಗ ಯಡಿಯೂರಪ್ಪ ಅವರೂ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. 

ಯಡಿಯೂರಪ್ಪ ಅವರು ರಾಜ್ಯಪಾಲರ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿಯವರು, ರಾಜ್ಯಪಾಲರೊಂದಿಗೆ ಸಂಪುಟ ವಿಸ್ತರಣೆ ಕುರಿತು ಯಾವುದೇ ರೀತಿಯ ಮಾತುಕತೆಗಳು ನಡೆಸಿಲ್ಲ. ಕೊರೋನಾ ಪರಿಸ್ಥಿತಿ ಕುರಿತಂತೆ ಮಾತ್ರ ಮಾತುಕತೆ ನಡೆಸಲಾಗಿತ್ತು ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಪ್ರಸ್ತುತ ಅಶಾಂತಿಕರವಾದ ವದಂತಿಗಳು ಹರಡಿರುವ ಹಿನ್ನೆಲೆಯಲ್ಲಿ ಈ ವದಂತಿಗಳನ್ನು ದೂರಾಗಿಸಲು ಹಾಗೂ ಬಿಜೆಪಿ ಕೇಂದ್ರ ನಾಯಕತ್ವದೊಂದಿಗೆ ಸಂಪೂರ್ಣ ಸಮನ್ವಯ ಸಾಧಿಸಲು ಈ ಸಭೆ ಮೂಲಕ ಮೊದಲ ಹೆಜ್ಜೆ ಇಡಲು ಯಡಿಯೂರಪ್ಪ ಅವರ ನಿರ್ಧರಿಸಿದ್ದರೆಂದು ಮೂಲಗಳು ಮಾಹಿತಿ ನೀಡಿವೆ. 

ಮಾತುಕತೆ ವೇಳೆ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿರುವ ರಾಜ್ಯಪಾಲರು, ಮುಂದಿನ 15 ದಿನಗಳಲ್ಲಿ ರಾಜ್ಯದಲ್ಲಿ ಸೋಂಕು ಹೆಚ್ಚಾಗಬಹುದು. ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ. 

ಕೊರೋನಾ ಪರಿಸ್ಥಿತಿ ನಿರ್ವಹಿಸಲು ಸರ್ಕಾರ ಆಯುರ್ವೇದ ಹಾಗೂ ಹೊಮಿಯೋಪತಿ ಔಷಧಗಳನ್ನು ಬಳಕೆ ಮಾಡುವಂತೆಯೂ ತಿಳಿಸಿದ್ದಾರೆಂದು ಹೇಳಲಾಗುತ್ತಿದೆ. 

ಇದಲ್ಲದೆ, ಗುಟ್ಕಾ, ಪಾನ್ ಮಸಾಲ ಪ್ಯಾಕೆಟ್ ಗಳಲ್ಲಿ ಮಾದಕ ದ್ರವ್ಯ ಮಾರಾಟ ಮಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ಪದಾರ್ಥಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸುವಂತೆಯೂ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ. 

ಈ ನಡುವೆ ರಾಜ್ಯದಲ್ಲಿ ಕೊರೋನಾ ನಿಗ್ರಹಿಸುವ ಕುರಿತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಯಡಿಯೂರಪ್ಪ ಅವರು ವಿವರಿಸಿದ ಬಳಿಕ, ಕ್ರಮಗಳಿಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com