ಕೊರೋನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಸಿದ್ಧತೆ ಸಾಲದು: ಹೆಚ್.ಡಿ.ದೇವೇಗೌಡ

ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದ್ದು, ಇಷ್ಟು ದಿನ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆಂದು ಹೇಳುತ್ತಿದ್ದ ರಾಜಕೀಯ ಪಕ್ಷಗಳು ಇದೀಗ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ. 
ದೇವೇಗೌಡ
ದೇವೇಗೌಡ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಲೇ ಇದ್ದು, ಇಷ್ಟು ದಿನ ಸರ್ಕಾರಕ್ಕೆ ಬೆಂಬಲ ನೀಡುತ್ತಿದ್ದೇವೆಂದು ಹೇಳುತ್ತಿದ್ದ ರಾಜಕೀಯ ಪಕ್ಷಗಳು ಇದೀಗ ಸರ್ಕಾರದ ವಿರುದ್ಧ ತಿರುಗಿಬಿದ್ದಿವೆ. 

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದರು. ಇದೀಗ ಇವರೊಂದಿಗೆ ಹೆಚ್.ಡಿ.ದೇವೇಗೌಡ ಅವರೂ ಕೂಡ ದನಿಗೂಡಿಸಿದ್ದಾರೆ. 

ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ಪರಿಸ್ಥಿತಿ ಕುರಿತು ಅವಲೋಕನ ನಡೆಸಲು ಪ್ರವಾಸ ಕೈಗೊಳ್ಳುತ್ತೇನೆಂದು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಹೇಳಿರುವ ದೇವೇಗೌಡ ಅವರು, ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಅಸ್ಸಾಂ ಪ್ರವಾಹ, ಪಕ್ಷವನ್ನು ಬಲಪಡಿಸುವ ವಿಚಾರಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 

ಮತದಾರರಿಂದಾಗಿ ಜೆಡಿಎಸ್ ನಾಯಕರು ಮತ್ತೆ ಒಂದಾಗುತ್ತಾರೆಂದು ನೀವು ಹೇಳಿದ್ದೀರಿ...ಜೆಡಿಎಸ್ ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆಯೇ? 
ಇಲ್ಲ, ಯಡಿಯೂರಪ್ಪ ಸರ್ಕಾರವೇ ಈ ಬಾರಿ ಇರಲಿದೆ. ಮುಂದಿನ ವರ್ಷ ನಡೆಯಲಿರುವ ನಗರಸಭೆ, ಗ್ರಾಮಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗಳಿಗಷ್ಟೇ ಸಿದ್ಧತೆ ನಡೆಸುತ್ತಿದ್ದೇವೆ. ಪಕ್ಷವನ್ನು ಬಲಪಡಿಸುವ ಕುರಿತು ನಾನು ಕಚೇರಿಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದೇನೆ. ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಸುಧಾರಿಸುತ್ತಿದ್ದಂತೆಯೇ ಪ್ರವಾಸ ಕೈಗೊಳ್ಳುತ್ತೇನೆ. ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದೇನೆ. ಆಗಸ್ಟ್ 4 ರಂದು ಪಕ್ಷದ ನಾಯಕರೊಂದಿಗೆ ಸಭೆ ನಡೆಸಲಿದ್ದೇನೆ. ಭೂ ಸುಧಾರಣೆ ಕಾಯ್ದೆ ಹಾಗೂ ರೈತರ ವಿರೋಧಿ ನಿರ್ಧಾರಗಳ ವಿರುದ್ಧ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಕುರಿತು ಚರ್ಚೆ ನಡೆಸಲಿದ್ದೇನೆ.

ಡಿಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷ ಅತ್ಯಂತ ಆಕ್ರಮಣಶೀಲರಂತೆ ವರ್ತಿಸುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಅವರು ಅವರ ಕಾರ್ಯವನ್ನಷ್ಟೇ ಮಾಡುತ್ತಿದ್ದಾರೆ. ನನ್ನ ಕೆಲಸವನ್ನು ನಾನು ಮಾಡುತ್ತೇನೆ. ಅವರೇನು ಮಾಡುತ್ತಿದ್ದಾರೆಂಬುದರ ಬಗ್ಗೆ ನಾನೇಕೆ ಚಿಂತೆ ಮಾಡಲಿ?

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ಅವರ ಸರ್ಕಾರದ ಕಾರ್ಯಕ್ಷಮತೆಗೆ ನೀವಷ್ಟು ಅಂಕಗಳನ್ನು ನೀಡುತ್ತೀರಿ? 
ಸರ್ಕಾರ ಏನನ್ನೂ ಮಾಡುತ್ತಿಲ್ಲ. ಈ ಎಲ್ಲದರ ನಡುವೆಯು ತಮ್ಮ ಸರ್ಕಾದ ಸಾಧನೆಗಳ ಪುಸ್ತಕವನ್ನು ಬೇರೆ ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ಸರ್ಕಾರದ ಬಳಿ ಹಣವಿಲ್ಲ. 

ಕೊರೋನಾ ವಿರುದ್ಧ ಹೋರಾಡಲು ಸರ್ಕಾರ ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದೆನಿಸುತ್ತಿದೆಯೇ? 
ವಿವಿಧ ಸಂದರ್ಭದಲ್ಲಿ ವಿಭಿನ್ನ ರೀತಿಯ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಸೂಕ್ತ ಸಮಯಕ್ಕೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿಲ್ಲ. ವಲಸೆ ಕಾರ್ಮಿಕರ ಸಂಕಷ್ಟವನ್ನು ನಾವು ನೋಡಿದ್ದೇವೆ. ಅವರನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲಾಗಿಲ್ಲ. ಜನರಿಗೆ ಸರ್ಕಾರದಿಂದ ಆರ್ಥಿಕ ನೆರವು ಸಿಕ್ಕಿದೆಯೋ, ಇಲ್ಲವೋ ನನಗೆ ಗೊತ್ತಿಲ್ಲ. ಕೊರೋನಾ ಸೋಂಕು ತಡೆಯಲು ನಾವು ಸೂಕ್ತ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ದೇಶ ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದನ್ನು ಇದೀಗ ನಾವು ನೋಡುತ್ತಿದ್ದೇವೆ.

ಅಸ್ಸಾಂ ಪ್ರವಾಹದ ಬಗ್ಗೆ ಮಾತನಾಡಲು ಮತ್ತು ಕೇಂದ್ರದ ಗಮನವನ್ನು ಸೆಳೆಯಲು ನಿಮ್ಮನ್ನು ಪ್ರೇರೇಪಿಸಿದ್ದಾದರೂ ಏನು? 
ಈಶಾನ್ಯ ರಾಜ್ಯಗಳ ಪರಿಸ್ಥಿತಿ ನನಗೆ ತಿಳಿದಿದೆ. ನಾನು ಆ ಪ್ರದೇಶಗಳನ್ನು ಪರಿಶೀಲಿಸಿದ್ದೇನೆ ಮತ್ತು ಸೇತುವೆಗೆ ಅನುದಾನ ಮಂಜೂರು ಮಾಡಿದ್ದೆ, ಪ್ರವಾಹ ತಡೆಯುವ ಗೋಡೆಗಳನ್ನು ನಿರ್ಮಿಸಲು ನಿರ್ಧರಿಸಿದ್ದೆ. ಅಸ್ಸಾಂ ಮತ್ತು ಬಿಹಾರದ ಪ್ರವಾಹಕ್ಕೆ ಶಾಶ್ವತ ಪರಿಹಾರಗಳ ಬಗ್ಗೆಯೂ ಚರ್ಚಿಸಿದ್ದೆ. ಶಾಶ್ವತ ಪರಿಹಾರಗಳ ಬಗ್ಗೆ ಯಾರೂ ಚಿಂತನೆ ನಡೆಸದೇ ಇರುವುದು ನಮ್ಮ ದುರದೃಷ್ಟಕರ. 

ಚುನಾಯಿತ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ರಾಜಸ್ಥಾನ ಬೆಳವಣಿಗೆಗಳು ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?
ಎರಡೂ ರಾಷ್ಟ್ರೀಯ ಪಕ್ಷಗಳು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿದ ಅನೇಕ ನಿದರ್ಶನಗಳನ್ನು ನಾನು ಹೇಳಬಲ್ಲೆ. 20 ಶಾಸಕರು ಎರಡು ತಿಂಗಳು ಮುಂಬೈನಲ್ಲಿದ್ದಾಗ ಕರ್ನಾಟಕದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಅದರ ನಂತರ ಸರ್ಕಾರ (ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ) ಕುಸಿಯಿತು. ರಾಜಸ್ಥಾನದಲ್ಲಿ ರಾಜ್ಯಪಾಲರ ವರ್ತನೆ ಸೂಕ್ತವಲ್ಲ. ಶಾಸಕರು ರಾಜಭವನದಲ್ಲಿ ಕುಳಿತಿದ್ದಾಗ ಅವರು ಅಧಿವೇಶನವನ್ನು ಕರೆದು ಬಹುಮತವನ್ನು ಸಾಬೀತುಪಡಿಸುವಂತೆ ಸಿಎಂ ಅವರನ್ನು ಕೇಳಬೇಕಾಗಿತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com