ಕೋವಿಡ್ ಮತ್ತು ಕೋವಿಡ್ ಯೇತರ ರೋಗಿಗಳ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಿ:ಸರ್ಕಾರಕ್ಕೆ ವೈದ್ಯರ ಒತ್ತಾಯ

ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಬೆಡ್ ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು ಎಂಬ ಸರ್ಕಾರದ ನಿಯಮವನ್ನು ಬದಲಾಯಿಸಬೇಕು ಎಂಬ ಅಭಿಪ್ರಾಯ ವೈದ್ಯಕೀಯ ತಜ್ಞರಿಂದ ಕೇಳಿಬರುತ್ತಿದೆ.
ಕೊರೋನಾ ವೈರಸ್ ತಪಾಸಣೆ ಕಿಟ್ ನ್ನು ಸಾಗಿಸುತ್ತಿರುವ ಆರೋಗ್ಯ ಕಾರ್ಯಕರ್ತೆ
ಕೊರೋನಾ ವೈರಸ್ ತಪಾಸಣೆ ಕಿಟ್ ನ್ನು ಸಾಗಿಸುತ್ತಿರುವ ಆರೋಗ್ಯ ಕಾರ್ಯಕರ್ತೆ

ಬೆಂಗಳೂರು: ನಗರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 50ರಷ್ಟು ಬೆಡ್ ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಬೇಕು ಎಂಬ ಸರ್ಕಾರದ ನಿಯಮವನ್ನು ಬದಲಾಯಿಸಬೇಕು ಎಂಬ ಅಭಿಪ್ರಾಯ ವೈದ್ಯಕೀಯ ತಜ್ಞರಿಂದ ಕೇಳಿಬರುತ್ತಿದೆ. ಇದರ ಬದಲಿಗೆ ಇಡೀ ಆಸ್ಪತ್ರೆಯನ್ನು ಕೋವಿಡ್-19 ಮತ್ತು ಬೇರೆ ರೋಗಗಳ ಆಸ್ಪತ್ರೆಯೆಂದು ಪ್ರತ್ಯೇಕಿಸಬೇಕು ಎಂಬ ಮಾತುಗಳು, ಒತ್ತಾಯಗಳು ಕೇಳಿಬರುತ್ತಿವೆ.

ಈಗಿರುವ ವ್ಯವಸ್ಥೆಯನ್ನು ಬದಲಿಸಬೇಕೆಂದು ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕರ್ನಾಟಕ ವಿಭಾಗ ಒತ್ತಾಯಿಸುತ್ತಿದ್ದು ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಉದ್ದೇಶ ಹೊಂದಿದೆ.

ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಸಂಸ್ಥೆಯ(ಕಿಮ್ಸ್) ಎ ಮತ್ತು ಬಿ ಬ್ಲಾಕ್ ನಲ್ಲಿ ಸುಮಾರು ತಲಾ 500 ಬೆಡ್ ಗಳಿವೆ. ಎ ಬ್ಲಾಕ್ ನಾನ್ ಕೋವಿಡ್ ರೋಗಿಗಳಿಗೆ ಸೀಮಿತವಾಗಿದ್ದರೂ ಕೂಡ ಕೇವಲ 15ರಿಂದ 20 ಬೆಡ್ ಗಳು ಮಾತ್ರ ಭರ್ತಿಯಾಗಿವೆ. ಎಲ್ಲಿ ತಮಗೆ ಕೊರೋನಾ ಬರಬಹುದೋ ಎಂಬ ಆತಂಕದಲ್ಲಿ ಜನರಿದ್ದಾರೆ. ಚಿಕಿತ್ಸೆಯಲ್ಲಿ ವಿಳಂಬ ಮತ್ತು ಜನರು ತೀವ್ರ ಮಟ್ಟದಲ್ಲಿ ಅಸೌಖ್ಯಕ್ಕೀಡಾದರೆ ಮಾತ್ರ ಆಸ್ಪತ್ರೆಗೆ ಬರುತ್ತಿದ್ದಾರೆ. ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಕೇವಲ 4ರಿಂದ 5 ಬೆಡ್ ಗಳು ಮಾತ್ರ ತುಂಬಿವೆ.

ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಬೆಡ್ ಗಳನ್ನು ಮೀಸಲಿಡಬೇಕು ಎಂಬ ರಾಜ್ಯ ಸರ್ಕಾರದ ನಿರ್ಧಾರ ತಪ್ಪಾಗಿದೆ ಎಂದು ಕಿಮ್ಸ್ ನಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥರಾಗಿರುವ ಮತ್ತು ಐಎಂಎಯ ರಾಜ್ಯ ಕಾರ್ಯದರ್ಶಿ ಡಾ ಶ್ರೀನಿವಾಸ್ ಹೇಳುತ್ತಾರೆ. ದೊಡ್ಡ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಅಲ್ಲಿನ ಕಟ್ಟಡದ ಒಂದು ಭಾಗವನ್ನು ಕೋವಿಡ್ ರೋಗಿಗಳಿಗೆ ಮೀಸಲಿಟ್ಟಿದ್ದಾರೆ, ಆದರೆ ಸಣ್ಣ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳಿರುವುದಿಲ್ಲ, ಮೂಲಭೂತ ಸೌಕರ್ಯಕ್ಕೆ ಕಷ್ಟವಾಗುತ್ತದೆ ಎನ್ನುತ್ತಾರೆ.

ಆಸ್ಪತ್ರೆಗಳಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ರೋಗಿಗಳಿಗೆಂದು ಬೆಡ್ ಗಳನ್ನು ಮೀಸಲಿಡಬೇಕೆಂಬ ಸರ್ಕಾರದ ನಿಯಮ ಸಣ್ಣ ಆಸ್ಪತ್ರೆಗಳಿಗೆ ನಿರ್ವಹಿಸಲು ಕಷ್ಟವಾಗುತ್ತಿದೆ. ದಕ್ಷಿಣ ಬೆಂಗಳೂರಿನ ವಿನಾಯಕ ಆಸ್ಪತ್ರೆಯ ಮಾಲೀಕ ಡಾ ಅಶೋಕ್ ರಾವ್ ಹೇಳುವುದು ಹೀಗೆ: ಸಣ್ಣ ಆಸ್ಪತ್ರೆಗಳಲ್ಲಿ ಆಗಮನ ಮತ್ತು ನಿರ್ಗಮನಕ್ಕೆ ಒಂದೇ ಬಾಗಿಲು ಇರುತ್ತದೆ. ಆಸ್ಪತ್ರೆಗಳ ರಿಸೆಪ್ಷನ್ ಡೆಸ್ಕ್, ಕುರ್ಚಿಗಳ ಮೂಲಕವೂ ಕೋವಿಡ್-19 ರೋಗಿಗಳಿಂದ ನಾನ್ ಕೋವಿಡ್ ರೋಗಿಗಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿದೆ. ಇನ್ನು ವಾರ್ಡ್ ಬಾಯ್, ಆಯಾಗಳು, ನರ್ಸ್ ಗಳು ಯಾವ ರೀತಿ ಕಿಟ್ ಧರಿಸುತ್ತಾರೆ, ಅದನ್ನು ತೆಗೆದು ಹೇಗೆ ವಿಲೇವಾರಿ ಮಾಡುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ ಎನ್ನುತ್ತಾರೆ.

ಐಎಂಎಯ ಮತ್ತೊಬ್ಬ ವೈದ್ಯ ಡಾ ಗಣೇಶ್ ಪ್ರಸಾದ್ ಹೇಳುವುದು ಹೀಗೆ: ಆಸ್ಪತ್ರೆಗಳಲ್ಲಿ ಆಗಮನ, ನಿರ್ಗಮನ, ಫಾರ್ಮಸಿ ಮೊದಲಾದ ಸಾಮಾನ್ಯ ಪ್ರದೇಶಗಳಿರುತ್ತವೆ. ಇಲ್ಲಿ ಕೋವಿಡ್-19ನಿಂದ ಬಳಲುತ್ತಿರುವ ರೋಗಿಗಳ ಮನೆಯವರು ಬಂದು ಕುಳಿತುಕೊಳ್ಳಬಹುದು, ಔಷಧ ತೆಗೆದುಕೊಳ್ಳಬಹುದು, ಕೆಲವೊಮ್ಮೆ ರೋಗಿಗಳೇ ಬರುತ್ತಾರೆ, ಇಂತವರಿಂದ ಕೊರೋನಾ ರಹಿತ ರೋಗಿಗಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನು ಕೋವಿಡ್ ಮತ್ತು ಕೋವಿಡ್ ಯೇತರ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು, ನರ್ಸ್ ಗಳು ಒಬ್ಬರಾಗಿರುತ್ತಾರೆ. ಇಂತವರಿಂದ ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಕೊರೋನಾ ರಹಿತ ರೋಗಿಗಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಹೀಗಾಗಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಬೇಕು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com