ಸೆಪ್ಟೆಂಬರ್ 23 ರೊಳಗೆ ರಾಜ್ಯ ವಿಧಾನಸಭಾ ಅಧಿವೇಶನ: ಸಭಾಧ್ಯಕ್ಷರಿಂದ ಸದನದಲ್ಲಿನ ವ್ಯವಸ್ಥೆಗಳ ಪರಿಶೀಲನೆ
ಕೋವಿಡ್-19 ರ ಉಪಟಳ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವನ್ನು ನಡೆಸುವುದು ಹೇಗೆ ? ಎಂಬ ಬಗ್ಗೆ ವಿವಿಧ ಸ್ತರಗಳಲ್ಲಿ ವಿಸ್ತೃತ ಚರ್ಚೆಗಳು ನಡೆಯುತ್ತಿವೆ.
Published: 06th August 2020 03:27 PM | Last Updated: 06th August 2020 04:15 PM | A+A A-

ವಿಶ್ವೇಶ್ವರ ಹೆಗಡೆ ಕಾಗೇರಿ
ಬೆಂಗಳೂರು: ಕೋವಿಡ್-19 ರ ಉಪಟಳ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವನ್ನು ನಡೆಸುವುದು ಹೇಗೆ ? ಎಂಬ ಬಗ್ಗೆ ವಿವಿಧ ಸ್ತರಗಳಲ್ಲಿ ವಿಸ್ತೃತ ಚರ್ಚೆಗಳು ನಡೆಯುತ್ತಿವೆ.ರಾಜ್ಯದ ರಾಜಧಾನಿಯ ವಿಧಾನ ಸೌಧ ಹೊರತುಪಡಿಸಿ ಬೇರೆಲ್ಲಾದರೂ ಅಧಿವೇಶನ ನಡೆಸಲು ಸೂಕ್ತ ಸ್ಥಳ ಇದೆಯೇ ? ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಕಳೆದ ಮಾರ್ಚ್‍ನಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವು ನಡೆದಿದ್ದು,ಸಂವಿಧಾನಬದ್ದವಾಗಿ ಆರು ತಿಂಗಳ ಒಳಗೆ ಅಂದರೆ ಸೆಪ್ಟೆಂಬರ್ 23 ರೊಳಗೆ,ಮತ್ತೊಮ್ಮೆ ಸಮಾವೇಶ ಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸದನದಲ್ಲಿ ರಾಜ್ಯ ಸಚಿವ ಸಂಪುಟದ ಸದಸ್ಯರು ಮತ್ತು ಸದನದ ಸದಸ್ಯರು, ಸದನದಲ್ಲಿ ಹಾಜರಿರುವ ಅಧಿಕಾರಿಗಳು ಹಾಗೂ ಮಾಧ್ಯಮದವರ ಆರೋಗ್ಯಕ್ಕೆ ಕೋವಿಡ್-19 ರ ಸೋಂಕು ತಗುಲದಂತೆ ಕ್ರಮ ವಹಿಸುವುದು ಹೇಗೆ ? ಎಂಬುದರ ಕುರಿತು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಸದನದಲ್ಲಿನ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ವಿಧಾನ ಸೌಧದ ಮೊದಲನೇಯ ಮಹಡಿಯಲ್ಲಿರುವ ವಿಧಾನ ಸಭಾ ಸಭಾಂಗಣದಲ್ಲಿ ಪ್ರಸ್ತುತ ಇರುವ ಆಸನ ವ್ಯವಸ್ಥೆಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಮುಖ್ಯಮಂತ್ರಿಗಳೂ ಒಳಗೊಂಡಂತೆ ಅವರ ಸಂಪುಟದ ಎಲ್ಲಾ ಸದಸ್ಯರು, ಪ್ರತಿಪಕ್ಷ ನಾಯಕರು, ಸದಸ್ಯರೂ ಅಧಿವೇಶನವು ನಡೆಯುವ ದಿನಗಳಂದು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಕುರಿತು ಅಧಿಕಾರಿಗಳು ಸಲಹೆ ನೀಡಿದ್ದಾಗಿ ಸ್ಪೀಕರ್ ಕಾಗೇರಿ ಹೇಳಿದ್ದಾರೆ.
ಇನ್ನು ಲೋಕಸಭೆ, ರಾಜ್ಯಸಭೆ, ಇತರೆ ರಾಜ್ಯದ ವಿಧಾನಸಭೆ ಅಧಿವೇಶನಗಳಿಗೆ ಹೇಗೆ ಸಿದ್ದತೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ರವಾನಿಸಲಾಗಿದೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರೆ ಉನ್ನತ ಅಧಿಕಾರಿಗಳ ಜತೆ ಮುಂದಿನ ವಾರ ಚರ್ಚಿಸಿ ಸ್ಥಳ ಗೊತ್ತುಪಡಿಸುವುದಾಗಿ ಅವರು ನುಡಿದರು.