ಬೆಂಗಳೂರು: ಶಬನಮ್ ಡೆವಲಪರ್ಸ್ ಶೂಟ್‍ಔಟ್ ಪ್ರಕರಣ, 13 ವರ್ಷ ಬಳಿಕ ಪ್ರಮುಖ ಆರೋಪಿ ಸೆರೆ

ಶಬನಮ್ ಡೆವಲಪರ್ಸ್‌ ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು 13 ವರ್ಷಗಳ ಬಳಿಕ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಬನಮ್ ಡೆವಲಪರ್ಸ್‌ ಶೂಟ್‌ಔಟ್‌ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು 13 ವರ್ಷಗಳ ಬಳಿಕ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

2007ರಲ್ಲಿ ನಡೆದಿದ್ದ ಶಬನಮ್ ಡೆವಲಪರ್ಸ್ ಶೂಟ್‍ಔಟ್ ಪ್ರಕರಣದ ಆರೋಪಿ ಇಕ್ಲಾಕ್ ಖುರೇಷಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಇಕ್ಲಾಕ್ ಖುರೇಷಿ ಉತ್ತರ ಪ್ರದೇಶದ ಮುಜಾಫರ್ ನಗರ ಮೂಲದವನಾಗಿದ್ದು, ಹಾಲಿ ನಾಗಮಂಗಲದಲ್ಲಿ ತಲೆಮರೆಸಿಕೊಂಡಿದ್ದ. 2007ರಲ್ಲಿ ಈತನನ್ನು ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದಿದ್ದ ಆರೋಪಿ ತಲೆ ಮರೆಸಿಕೊಂಡಿದ್ದ. ಈಗಾಗಲೇ ಬಂಧಿತ ಮತ್ತೊಬ್ಬ ಆರೋಪಿಯ ಜೊತೆಯಲ್ಲಿ ಇಕ್ಲಾಕ್ ಖುರೇಷಿ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ಸಂಪರ್ಕ ಹೊಂದಿದ್ದ ಎಂದು ಹೇಳಲಾಗಿದೆ.

2007ರಲ್ಲಿ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗ್ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಬನಂ ಡೆವಲಪರ್ಸ್‌ ಸಂಸ್ಥೆಗೆ ದಾಳಿ ಮಾಡಿ ಇಬ್ಬರ ಕೊಲೆ ಮಾಡಿತ್ತು. ಈ ಬಗ್ಗೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರವಿಪೂಜಾರಿಯನ್ನು ಆಫ್ರಿಕಾದಿಂದ ಭಾರತಕ್ಕೆ ಕರೆತಂದ ಬಳಿಕ ಈತ ಭಾಗಿಯಾಗಿದ್ದ ಎಲ್ಲಾ ಪ್ರಕರಣಗಳ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ಕೈಗೊಂಡಾಗ, ಶಬನಂ ಡೆವಲಪರ್ಸ್ ಕೇಸಿನಲ್ಲಿ ರವಿಪೂಜಾರಿ ತಂಡಕ್ಕೆ ಪಿಸ್ತೂಲ್‌ ಗಳನ್ನು ಸರಬರಾಜು ಮಾಡಿದ್ದ ಉತ್ತರ ಪ್ರದೇಶದ ಮುಜಾಫರ್ ನಗರದ ಇಕ್ಲಾಕ್ ಖುರೇಷಿ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ.

ಭೂಗತಪಾತಕಿ ರವಿ ಪೂಜಾರಿಯ ಅಪರಾಧ ಜಗತ್ತಿನ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ವೇಳೆ ಇಕ್ಲಾಕ್ ಖುರೇಷಿ ಕೃತ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿವೆ. 

ಬಂಧಿತ ಇಕ್ಲಾಕ್ ಖುರೇಷಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ರವಿ ಪೂಜಾರಿಯ ಜೊತೆ ಸಂಪರ್ಕ ಹೊಂದಿದವರು, ಸಹಚರರು, ತಲೆ ಮರೆಸಿಕೊಂಡಿರುವವರನ್ನು ಪತ್ತೆ ಹಚ್ಚಲು ಸಿಸಿಬಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com