ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!

ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ಕನಿಷ್ಠ 100 ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ.
ಕರ್ನಾಟಕ ಪ್ರವಾಹ
ಕರ್ನಾಟಕ ಪ್ರವಾಹ

ಬೆಂಗಳೂರು: ರಾಜ್ಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯದ ಕನಿಷ್ಠ 100 ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಕನಿಷ್ಠ 100 ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿವ ಎಂದು ಹೇಳಿದೆ, ಕಳೆದ ವರ್ಷ ಸಂಭವಿಸಿದ್ದ ಪ್ರವಾಹ ಮತ್ತು ಮಳೆಯಿಂದಾಗಿ  ಹಾನಿಗೀಡಾಗಿದ್ದ ರಸ್ತೆ ಮತ್ತು ಸೇತುವೆಗಳ ದುರಸ್ತಿ ಕಾರ್ಯವೇ ಇನ್ನೂ ಮುಕ್ತಾಯವಾಗಿಲ್ಲ. ಅದಾಗಲೇ ಮತ್ತೆ ಈ ವರ್ಷ ಮಳೆ ಮತ್ತು ಪ್ರವಾಹದಿಂದಾಗಿ ಮತ್ತಷ್ಟು ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾಗಿವೆ. ನಿಜಕ್ಕೂ ಇದು ಇಲಾಖೆಗೆ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷದ ಪ್ರವಾಹದಿಂದಾಗಿ ರಸ್ತೆಗಳು ಮತ್ತು ಸೇತುವೆಗಳು ಹಾನಿಗೀಡಾದ ಪರಿಣಾಮ ಹಲವು ಪ್ರದೇಶಗಳ ಸಂಪರ್ಕ ಕಡಿತವಾಗಿತ್ತು. ಈ ಸಮಸ್ಯೆಗಳನ್ನು ಸರಿ ಪಡಿಸಲು ಇಲಾಖೆ 7,900 ಕೋಟಿ ವ್ಯಯಿಸಬೇಕಾಯಿತು. ಕಳೆದ ಬಾರಿ ಹಾನಿಗೀಡಾದ ಒಟ್ಟಾರೆ ರಸ್ತೆಗಳು, ಸೇತುವೆಗಳು ಒಳಚರಂಡಿ ಪೈಪ್ ಗಳ  ಪೈಕಿ ಶೇ.70ರಷ್ಟು ಮಾತ್ರ ಈವರೆಗೂ ದುರಸ್ತಿ ಮಾಡಲಾಗಿದೆ. ಬಾಕಿ ಕಾಮಗಾರಿಗೆ ಸಿಬ್ಬಂದಿ ಮತ್ತು ಕಾರ್ಮಿಕರ ತೊಂದರೆ ಎದುರಾಗಿತ್ತು. ಕೊರೋನಾ ಲಾಕ್ ಡೌನ್ ಕೂಡ ನಮಗೆ ದೊಡ್ಡ ಸಮಸ್ಯೆಯಾಗಿತ್ತು. ನಮಗೆ ಮುಂದಿನ ದಿನಗಳು ಅತ್ಯಂತ ಪ್ರಮುಖವಾಗಿದ್ದು, ಮಳೆ ಮತ್ತು ಪ್ರವಾಹದಿಂದಾಗಿ ಮತ್ತಷ್ಟು  ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ. ಕಳೆದ ವರ್ಷದ ಸಮಸ್ಯೆಯಿಂದಾಗಿ ನಾವು ಈ ಬಾರಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಮುರಿದ ರಸ್ತೆಗಳು ಮತ್ತು ಸೇತುವೆಗಳಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದೇವೆ ಎಂದು ಇಲಾಖೆ ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿದ ಇಲಾಖೆಯ ಕಾರ್ಯದರ್ಶಿ ಗುರುಪ್ರಸಾದ್ ಅವರು, ಈಗಾಗಲೇ ರಾಜ್ಯಾದ್ಯಂತ ನೂರಾರು ತಂಡಗಳನ್ನು ರಚನೆ ಮಾಡಿದ್ದೇವೆ. ಪ್ರಮುಖವಾಗಿ ಘಾಟ್ ಪ್ರದೇಶಗಳಾದ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಪ್ರತೀ 15 ರಿಂದ 20 ಕಿ.ಮೀ ಗಳ ಅಂತರದಲ್ಲಿ ಜೆಸಿಬಿಗಳ ನಿಯೋಜನೆ ಮಾಡಿದ್ದೇವೆ.  ಒಂದು ವೇಳೆ ಮಳೆ ಮತ್ತು ಭೂಕುಸಿತದಿಂದಾಗಿ ಮರಗಳು ಧರೆಗುರುಳಿದರೆ, ಭೂಕುಸಿತ ಉಂಟಾದರೆ ತತ್ ಕ್ಷಣವೇ ಅವುಗಳನ್ನು ತೆರವು ಮಾಡಲಾಗುತ್ತದೆ. ಈಗಾಗಲೇ ಈ ಕಾರ್ಯ ನಡೆಯುತ್ತಿದೆ. ನಮಗೆ ಕರೆ ಬರುತ್ತಿದ್ದಂತೆಯೇ ಸಮೀಪದ ಜೆಸಿಬಿ ಚಾಲಕರಿಗೆ ಅಧಿಕಾರಿಗಳು ಮಾಹಿತಿ ನೀಡಿ ಘಟನಾ ಸ್ಥಳಕ್ಕೆ  ಕರೆಸಿಕೊಂಡು ಕಾರ್ಯಾಚರಣೆ ನಡೆಸುತ್ತಾರೆ.

ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಕೊಡಗು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿರುವ ಮಾಹಿತಿ ಲಭ್ಯವಾಗಿದೆ, ಇಲ್ಲಿ ಪ್ರವಾಹವಿದ್ದು ನೀರಿನ ಪ್ರಮಾಣ ತಗ್ಗಿದ ಬಳಿಕ ಇಲ್ಲಿ ಆದ ನಷ್ಟದ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com