ನೆರೆ: ರಾಜ್ಯದ ಜೊತೆಗೆ ಇಂದು ಪ್ರಧಾನಿ ಸಭೆ, ಸಿಎಂ ಗೈರು ಹಿನ್ನೆಲೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಬೊಮ್ಮಾಯಿ, ಅಶೋಕ್ ಭಾಗಿ

ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಭೀತಿ ತಲೆದೋರಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ರಾಜ್ಯ ಸರ್ಕಾರದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ...
ಕಂದಾಯ ಸಚಿವ ಆರ್.ಅಶೋಕ್ ಮತ್ತು ಸಚಿವ ಸೋಮಣ್ಣ
ಕಂದಾಯ ಸಚಿವ ಆರ್.ಅಶೋಕ್ ಮತ್ತು ಸಚಿವ ಸೋಮಣ್ಣ

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅತಿವೃಷ್ಠಿ ಹಾಗೂ ಪ್ರವಾಹ ಭೀತಿ ತಲೆದೋರಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ರಾಜ್ಯ ಸರ್ಕಾರದೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಸಭೆಯಲ್ಲಿ ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ. 

ರಾಜ್ಯದಲ್ಲಿ ಮಳೆಯಿಂದಾಗಿರುವ ಅನಾಹುತಗಳ ಬಗ್ಗೆ ವಿವರ ನೀಡಿ ಕೇಂದ್ರದಿಂದ ಸೂಕ್ತ ನೆರವಿಗೆ ಮನವಿ ಸಲ್ಲಿಸುವ ಬಗ್ಗೆ ನಿರೀಕ್ಷೆಗಳಿವೆ.
 
ಕಳೆದ ವರ್ಷ ರಾಜ್ಯದಲ್ಲಿ ಭಾರೀ ಪ್ರವಾಹ ಉಂಟಾಗಿದದ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಪ್ರವಾಹಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಆದರೆ, ಈ ಬಾರಿ ಅಮಿತ್ ಶಾ ಅವರೇ ಕೊರೋನಾದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಖುದ್ದು ಪ್ರಧಾನಮಂತ್ರಿಗಳೇ ರಾಜ್ಯದ ಮಳೆ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರದಿಂದ ನೇರವಾಗಿ ಮಾಹಿತಿ ಪಡೆಯಲು ಮುಂದಾಗಿದ್ದಾರೆ. 

ಪ್ರವಾಹಪೀಡಿತ ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಿರುವ ಬೊಮ್ಮಾಯಿ ಮತ್ತು ಅಶೋಕ್, ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡು ರಾಜ್ಯದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಪ್ರಧಾನಮಂದ್ರಿಗಳಿಗೆ ರಾಜ್ಯದ ಸ್ಥಿತಿಗತಿಗಳ ಸಮಗ್ರ ಆದರೆ ಸಂಕ್ಷಿಪ್ತ ವರದಿಯನ್ನು ಒಪ್ಪಿಸಲಿದ್ದಾರೆ. 

ಪ್ರವಾಹ ಮತ್ತು ಮಳೆಯಿಂದ ಆಗಿರುವ ಜೀವ ಹಾನಿ, ಆಸ್ತಿಪಾಸ್ತಿ ನಷ್ಟಗಳ ವಿವರ ವರದಿಯಲ್ಲಿ ಇರಲಿದ್ದು, ರಾಜ್ಯವು ಕೇಂದ್ರದಿಂದ ತುರ್ತಾಗಿ ನಿರೀಕ್ಷಿಸುತ್ತಿರುವ ಆರ್ಥಿಕ ಸೇರಿದಂತೆ ಮತ್ತಿತರ ಸಹಾಯಗಳ ಬಗ್ಗೆಯೂ ಪ್ರಧಾನಿಯವರ ಗಮನ ಸೆಳೆಯಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com