ಮಾದಕ ವಸ್ತು ಮಾರಾಟ: ಇಬ್ಬರು ನೈಜೀರಿಯಾ ಪ್ರಜೆಗಳ ಬಂಧನ; 3 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕ್ರಿಶ್ಚಿಯನ್ ಓಜೋಮೆನಾ ಚಿಮೆರಿ (20), ಒಕೊಂಕ್ವೊ ಬೆಂಜಮಿನ್ ಚುಕ್ವುಡಿ (30) ಬಂಧಿತ ಆರೋಪಿಗಳು.

ಬಂಧಿತರಿಂದ 14.5 ಗ್ರಾಂ ತೂಕದ ಕೊಕೇನ್, ಎರಡು ದ್ವಿ ಚಕ್ರ ವಾಹನ, ಮೂರು ಮೊಬೈಲ್ ಫೋನ್‌ ಹಾಗೂ ಒಂದು ತೂಕದ ಯಂತ್ರ ವಶಪಡಿಸಿಕೊಳ್ಳಲಾಗಿದ್ದು, ವಸ್ತುಗಳ ಮೌಲ್ಯ ಅಂದಾಜು‌ 3‌ಲಕ್ಷ ರೂ. ಗಳಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆ.10ರಂದು ನಗರದ ಅಗ್ರಹಾರ ಲೇಔಟ್ ನ ಎಂ ಎನ್ ಗೋಕುಲಂ ಅಪಾರ್ಟ್ ಮೆಂಟ್ ಎದುರಿನ ರಸ್ತೆಯಲ್ಲಿರುವ ರಮೇಶ್ ಕೆ ಎಂಬುವವರ ಮನೆಯಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳು ಕೊಕೇನ್ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

ನೈಜೀರಿಯಾದಿಂದ ಬಿಸಿನೆಸ್ ವೀಸಾದಡಿ ಭಾರತಕ್ಕೆ ಬಂದಿರುವ ಆರೋಪಿಗಳು ಸಂಪಿಗೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಮ್ಮ ಪರಿಚಿತ ಗಿರಾಕಿಗಳಿಗೆ ಮಾದಕ ವಸ್ತು ಮಾರಾಟ ಮಾಡಿ, ಹಣ ಸಂಪಾದನೆ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಟೀಲ್, ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಸಹಾಯಕ ಪೊಲೀಸ್ ಆಯುಕ್ತ ಕೆಸಿ ಗೌತಮ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಪೊಲೀಸ್ ಇನ್ಸ್ ಪೆಕ್ಟರ್‌ಗಳಾದ ಲಕ್ಷ್ಮೀಕಾಂತಯ್ಯ, ಹಜರೇಶ್‌ ಕಿಲ್ಲೇದಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com