ಕ್ವಾರಂಟೈನ್'ನಲ್ಲಿ ಸಿಎಂ ಯಡಿಯೂರಪ್ಪ: ಪ್ರಧಾನಿ ಮೋದಿ ಜೊತೆಗಿನ ವಿಡಿಯೋ ಸಂವಾದದಲ್ಲಿ ಗೈರು ಸಾಧ್ಯತೆ

ಕೊರೋನಾ ಸೋಂಕಿನಿಂದಾಗಿ ಕಳೆದ 1 ವಾರದಿಂದ ಚಿಕಿತ್ಸೆಗೊಳಗಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಸೋಮವಾರ ಸಂಜೆ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 
ಆಸ್ಪತ್ರೆಯಿಂದ ಬಿಡುಗಡೆಗೊಂಡ ಸಿಎಂ ಯಡಿಯೂರಪ್ಪ
ಆಸ್ಪತ್ರೆಯಿಂದ ಬಿಡುಗಡೆಗೊಂಡ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಸೋಂಕಿನಿಂದಾಗಿ ಕಳೆದ 1 ವಾರದಿಂದ ಚಿಕಿತ್ಸೆಗೊಳಗಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಸೋಮವಾರ ಸಂಜೆ ಮಣಿಪಾಲ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 

ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಕ ಕ್ವಾರಂಟೈನ್'ಗೊಳಗಾಗಿರುವ ಯಡಿಯೂರಪ್ಪ ಅವರು, ಮಂಗಳವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಡೆಸುವ ವಿಡಿಯೋ ಸಂವಾದದಲ್ಲಿ ಭಾಗಿಯಾಗುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ. 

ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ಸಚಿವ ಸಂಪುಟದ ಸಚಿವರು, ಉಪ ಮುಖ್ಯಮಂತ್ರಿ ಅಶ್ವತ್ಥಅ ನಾರಾಯಣ್, ಕಂದಾಯ ಸಚಿವ ಆರ್.ಅಶೋಕ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಅವರು ಭಾಗಿಯಾಗಲಿದ್ದಾರೆ. 

ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ಪ್ರವಾಹ ಪರಿಸ್ಥಿತಿ ಕುರಿತು ರಾಜ್ಯದೊಂದಿಗೆ ಮಾತುಕತೆ ನಡೆಸಿದ್ದರು. ಇಂದು ಕೊರೋನಾ ಪರಿಸ್ಥಿತಿ ಕುರಿತಂತೆ ಬೆಳಿಗ್ಗೆ 11 ಗಂಟೆಗೆ ಮಾತುಕತೆ ನಡೆಸಲಿದ್ದಾರೆ. 

ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ಮುಖ್ಯಮಂತ್ರಿಗಳು, ಮನೆಯಿಂದಲೇ ತಮ್ಮ ಕಾರ್ಯಗಳ್ನು ಮುಂದುವರೆಸಲಿದ್ದಾರೆ. ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಮಳೆಯಿಂದ ಹಾನಿಯಾದ ಪ್ರದೇಶಗಳಿಂದ ಭೇಟಿ ನೀಡಲು ಚಿಂತನೆ ನಡೆಸುತ್ತಿದ್ದು, ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸಲಿದ್ದಾರೆ ತಿಳಿದುಬಂದಿದೆ. ಅಲ್ಲದೇ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪರಾಮರ್ಶೆ ನಡೆಸಲಿದ್ದಾರೆ, ಸ್ವಾತಂತ್ರ್ಯ ದಿನಾಚರಣೆಯಲ್ಲೂ ಭಾಗಿಯಾಗಲಿದ್ದಾರೆಂದು ಮೂಲಗಳು ತಿಳಿಸಿವೆ. 

ಕಳೆದ ಭಾನುವಾರ ಆ.2ರಂದು ಕೊರೋನಾ ಸೊಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ತಜ್ಞ ವೈದ್ಯರು ಚಿಕಿತ್ಸೆ ನೀಡಿ ಪ್ರತಿದಿನ ಮುಖ್ಯಮಂತ್ರಿಗಳ ಆರೋಗ್ಯದ ಮೇಲೆ ನಿಗಾವಹಿಸಿದ್ದರು. ಚಿಕಿತ್ಸೆ ನೀಡಿದ ಬಳಿಕ ಮತ್ತೊಮ್ಮೆ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 

ಕೋವಿಡ್ ಸೋಂಕಿನ ಕೆಮ್ಮು,ಜ್ವರ,ನೆಗಡಿ ಸೇರಿದಂತೆ ಯಾವುದೇ ಲಕ್ಷಣಗಳು ಯಡಿಯೂರಪ್ಪ ಅವರಲ್ಲಿ ಕಾಣಸಿಕೊಂಡಿರಲಿಲ್ಲ. ಆದರೆ, ಕೊರೋನಾ ಪಾಸಿಟಿವ್ ಇದ್ದ ಕಾರಣ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಯಡಿಯೂರಪ್ಪ ಅವರ ಪುತ್ರಿ ಸೇರಿದಂತೆ ಮುಖ್ಯಮಂತ್ರಿಗಳ ಅಧಿಕೃತ ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 11 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com