ಕೋವಿಡ್-19 ಹೋಂ ಐಸೊಲೇಷನ್ ನಿಯಮ ಪರಿಷ್ಕರಿಸಿದ ಸರ್ಕಾರ: ಹೊಸ ನಿಯಮದಲ್ಲಿ ಏನಿದೆ?

ಕೋವಿಡ್-19 ಮಧ್ಯೆ ಹೋಂ ಐಸೊಲೇಷನ್ ನಲ್ಲಿರುವವರಿಗೆ ಕರ್ನಾಟಕ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೋವಿಡ್-19 ಮಧ್ಯೆ ಹೋಂ ಐಸೊಲೇಷನ್ ನಲ್ಲಿರುವವರಿಗೆ ಕರ್ನಾಟಕ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಹೊಸ ಮಾರ್ಗಸೂಚಿಯಲ್ಲಿ ಏನಿದೆ: ಪರಿಷ್ಕೃತ ಮಾರ್ಗಸೂಚಿ ಪ್ರಕಾರ, ಕೊರೋನಾ ಲಕ್ಷಣಗಳಿಲ್ಲದವರು ಅಥವಾ ಕೊರೋನಾ ಸೋಂಕಿನ ಸಣ್ಣಪುಟ್ಟ ಲಕ್ಷಣಗಳನ್ನು ಮಾತ್ರ ಹೊಂದಿರುವವರು ತಮ್ಮ ಮನೆಗಳಲ್ಲಿಯೇ ಇರಬಹುದಾಗಿದೆ.

ಜಿಲ್ಲಾ ಆರೋಗ್ಯ ಅಧಿಕಾರಿಗಳು ಅಥವಾ ಖಾಸಗಿ ಸಂಸ್ಥೆಗಳು ಹೋಂ ಐಸೊಲೇಷನ್ ನಲ್ಲಿರುವವರ ಮನೆಗೆ ಭೇಟಿ ಕೊಟ್ಟು ರೋಗಿ ಮನೆಯಲ್ಲಿರಲು ಸಾಧ್ಯವೇ, ಮನೆಯಲ್ಲಿಯೇ ಪ್ರತ್ಯೇಕವಾಗಿದ್ದು ವೈದ್ಯರು ಹೇಳುವ ಆರೋಗ್ಯ ಸಲಹೆಗಳನ್ನು ಪಾಲಿಸಲು ಸಾಧ್ಯವೇ ಎಂದು ಪರಾಮರ್ಶೆ ನಡೆಸುತ್ತಾರೆ. ದೂರವಾಣಿ ಮೂಲಕ ಕೂಡ ವೈದ್ಯರ ಸಲಹೆ ಕಾಲಕಾಲಕ್ಕೆ ಪ್ರತಿನಿತ್ಯವೆಂಬಂತೆ ಪಡೆಯುತ್ತಿರಬೇಕಾಗುತ್ತದೆ. ಅಗತ್ಯಬಿದ್ದರೆ ವೈದ್ಯರ ಬಳಿಕ ಹೋಗಬೇಕಾಗುತ್ತದೆ.

ಹೋಂ ಐಸೊಲೇಷನ್ ನಲ್ಲಿ ಇರುವಷ್ಟು ದಿನ ಸ್ವ ನಿರ್ಬಂಧ ಮತ್ತು ಕುಟುಂಬದ ಇತರ ಸದಸ್ಯರಿಂದ ದೂರ ಉಳಿಯಲು ಸೌಕರ್ಯ ಮನೆಯಲ್ಲಿರಬೇಕಾಗುತ್ತದೆ. ದಿನಪೂರ್ತಿ ಅಂದರೆ 24*7  ಸಮಯ ಹೋಂ ಐಸೊಲೇಷನ್ ನಲ್ಲಿರುವವರನ್ನು ನೋಡಿಕೊಳ್ಳುವವರು ಬೇಕಾಗುತ್ತದೆ. ಕೋವಿಡ್-19 ರೋಗಿ, ಅವರನ್ನು ನೋಡಿಕೊಳ್ಳುವವರು ಮತ್ತು ಆಸ್ಪತ್ರೆಯ ವೈದ್ಯರ ಮಧ್ಯೆ ನಿರಂತರ ಸಂಪರ್ಕ ಇರಬೇಕಾಗುತ್ತದೆ.

60 ವರ್ಷ ಮೇಲ್ಪಟ್ಟ ಹಿರಿಯರು, ಡಯಾಬಿಟಿಸ್, ಹೃದ್ರೋಗ ಸಮಸ್ಯೆ, ಶ್ವಾಸ, ಕರುಳು, ಕಿಡ್ನಿ ಸಮಸ್ಯೆ ಹೊಂದಿರುವವರು ಕೋವಿಡ್-19 ಸೋಂಕು ತಗುಲಿ ಸಣ್ಣ ಲಕ್ಷಣ ಅಥವಾ ಕೋವಿಡ್ ನ ಯಾವುದೇ ಲಕ್ಷಣ ಹೊಂದಿಲ್ಲದಿದ್ದರೆ ಸೂಕ್ತ ವೈದ್ಯಕೀಯ ತಪಾಸಣೆ ಬಳಿಕವಷ್ಟೆ ಹೋಂ ಐಸೊಲೇಷನ್ ನಲ್ಲಿರಲು ಸಾಧ್ಯ.

ಗರ್ಭಿಣಿಯರು ಇನ್ನೇನು ಹೆರಿಗೆಗೆ 2 ವಾರಗಳಿವೆ ಎಂದಾದರೆ ಅಂತವರಿಗೆ ಕೋವಿಡ್-19 ಸೋಂಕು ತಗುಲಿದರೆ ಅವರಿಗೆ ಹೋಂ ಐಸೊಲೇಷನ್ ನಲ್ಲಿರಲು ಅವಕಾಶವಿಲ್ಲ. ಹೆರಿಗೆಯಾದ ನಂತರ ಮಗುವಿಗೆ ಹಾಲುಣಿಸುವ ತಾಯಂದಿರಿಗೆ ಹೋಂ ಐಸೊಲೇಷನ್ ನಲ್ಲಿರಲು ವೈದ್ಯರ ಸಲಹೆ ಮೇರೆಗೆ ಅವಕಾಶವಿರುತ್ತದೆ.

ಹೋಂ ಐಸೊಲೇಷನ್ ನಲ್ಲಿರುವ ಕೋವಿಡ್-19 ಸೋಂಕಿತರು ಬಳಸಿದ ಫೇಸ್ ಮಾಸ್ಕ್, ಗ್ಲೌಸ್, ಟಾಯ್ಲೆಟ್ ವೇಸ್ಟ್ ಗಳು, ಸ್ವಾಬ್ಸ್, ಬಳಸಿರುವ ಸಿರಿಂಜ್ ಗಳು ಇತ್ಯಾದಿ ವಸ್ತುಗಳನ್ನು ಪ್ರತ್ಯೇಕ ಹಳದಿ ಬಣ್ಣದ ಬ್ಯಾಗ್ ನಲ್ಲಿ ಹಾಕಿ ವಿಲೇವಾರಿ ಮಾಡಬೇಕು.ಅವುಗಳನ್ನು ಮನೆಯ ಇತರ ತ್ಯಾಜ್ಯಗಳ ಜೊತೆ ಒಟ್ಟು ಸೇರಿಸಬಾರದು.

ಮನೆಯಲ್ಲಿರುವ ಇತರರು ಬಳಸಿದ ಮಾಸ್ಕ್, ಗ್ಲೌಸ್ ಇತ್ಯಾದಿ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ 72 ಗಂಟೆಗಳ ಮೊದಲು ಪೇಪರ್ ಬ್ಯಾಗ್ ನಲ್ಲಿಟ್ಟು ನಂತರ ಬೇರೆ ತ್ಯಾಜ್ಯಗಳಂತೆ ಹೊರಗೆ ಹಾಕಬಹುದು.

ಸ್ವಾಬ್ ಟೆಸ್ಟ್ ಮಾಡಿ ಕೋವಿಡ್-19 ಇದೆ ಎಂದು ದೃಢಪಟ್ಟು ವೈದ್ಯರು ಹೋಂ ಐಸೊಲೇಷನ್ ನಲ್ಲಿರಲು ಅವಕಾಶ ನೀಡಿದರೆ 10 ದಿನಗಳಲ್ಲಿ ಕೋಣೆಯಿಂದ ಹೊರಬರಬಹುದು, ಮತ್ತೆ ಏಳು ದಿನಗಳ ಕಾಲ ಜ್ವರ ಬರುತ್ತದೆಯೇ ಅಥವಾ ಬೇರಾವುದೇ ಕೊರೋನಾ ಲಕ್ಷಣ ಕಂಡುಬರುತ್ತದೆಯೇ ಎಂದು ನೋಡಬೇಕು. ಬಾರದಿದ್ದರೆ ಮತ್ತೆ ಕೊರೋನಾ ಪರೀಕ್ಷೆ ಮಾಡಬೇಕಾದ ಅವಶ್ಯಕತೆಯಿರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com