ಅಪಘಾತದಲ್ಲಿ ಪತ್ನಿ ಸಾವು: ಪತ್ನಿಯ ಪುತ್ಥಳಿ ಸ್ಥಾಪಿಸಿ, ಗೃಹಪ್ರವೇಶಕ್ಕೆ ಬಂದ ಅತಿಥಿಗಳಿಗೆ ಅಚ್ಚರಿ ಮೂಡಿಸಿದ ಕೊಪ್ಪಳದ ಉದ್ಯಮಿ!

ಅದು ಗೃಹಪ್ರವೇಶದ ಶುಭ ಸಂದರ್ಭ. ಮನೆಗೆ ಬಂದ ಅತಿಥಿಗಳಿಗೆಲ್ಲ ಅಚ್ಚರಿ. ಮೂರು ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಆ ತಾಯಿ ಎಲ್ಲರನ್ನೂ ಸ್ವಾಗತಿಸಿದ ದೃಶ್ಯ ಕಂಡು ಮೂಕವಿಸ್ಮಿತರಾದವರೇ ಹೆಚ್ಚು

Published: 11th August 2020 09:15 AM  |   Last Updated: 11th August 2020 12:42 PM   |  A+A-


Wax Statue

ಮೃತ ಪತ್ನಿಯ ಪುತ್ಥಳಿ ಸ್ಥಾಪಿಸಿದ ಉದ್ಯಮಿ

Posted By : Manjula VN
Source : RC Network

ಕೊಪ್ಪಳ: ಅದು ಗೃಹಪ್ರವೇಶದ ಶುಭ ಸಂದರ್ಭ. ಮನೆಗೆ ಬಂದ ಅತಿಥಿಗಳಿಗೆಲ್ಲ ಅಚ್ಚರಿ. ಮೂರು ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಆ ತಾಯಿ ಎಲ್ಲರನ್ನೂ ಸ್ವಾಗತಿಸಿದ ದೃಶ್ಯ ಕಂಡು ಮೂಕವಿಸ್ಮಿತರಾದವರೇ ಹೆಚ್ಚು.

ಹೌದು. 2017ರ ಜುಲೈ ನಲ್ಲಿ ಅಪಘಾತದಲ್ಲಿ ತನ್ನವರನ್ನ ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದ ಭಾಗ್ಯನಗರದ ಖ್ಯಾತ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರ ಪತ್ನಿ ತಮ್ಮ ನೂತನ ಗೃಹ ಪ್ರವೇಶಕ್ಕೆ ಬಂದ ಅತಿಥಿಗಳನ್ನು ಸ್ವಾಗತಿಸುತ್ತಿರುವ ಅದೇ ಆಕಾರದ, ಅಷ್ಟೇ ಎತ್ತರದ ಅಷ್ಟೇ ಏಕೆ ಅವರೇ ಸಾಕ್ಷಾತ್ ಧರೆಗಿಳಿದು ಬಂದಂತೆ ಭಾಸವಾದ ದೃಶ್ಯವದು..!

100%

ಶ್ರೀನಿವಾಸ ಗುಪ್ತಾ ಅವರ ಪತ್ನಿಗೆ ಮನೆ ಕಟ್ಟಿಸಬೇಕೆಂಬ ಮಹದಾಸೆ ಇತ್ತು. ಅದು ಅವರ ಕನಸಿನ ಮನೆಯಾಗಿತ್ತು. ಮನೆಯ ವಿನ್ಯಾಸವೂ ಅವರಿಚ್ಛೆಯಂತೆಯೇ ಇತ್ತು. ಆದರೆ ಅವರೇ ಇರಲಿಲ್ಲ. ಅವರಿಲ್ಲ ಎನ್ನುವ ಕೊರಗು ಬರಬಾರದು ಎಂದು ಯೋಚಿಸಿದ ಗುಪ್ತಾ ಅವರು, ಗೃಹಪ್ರವೇಶಕ್ಕೆ ಹೆಂಡತಿಯೂ ಪಾಲ್ಗೊಳ್ಳುವಂತಾಗಬೇಕು ಎಂದು ಯೋಚಿಸಿ, ಗೂಗಲ್ ಸರ್ಚ್ ಮಾಡಿ, ಊರು-ಕೇರಿ ಅಲೆದು, ಕೊನೆಗೂ ತಮ್ಮ‌ ಉಸಿರಾಗಿದ್ದ ಪತ್ನಿಯ ಕನಸು, ಹೆಸರನ್ನು ಹಸಿರಾಗಿಸಿದರು.

ಬೆಂಗಳೂರಿನ ಬೊಂಬೆ ಮನೆ ಕಲಾವಿದರನ್ನು ಸಂಪರ್ಕಿಸಿ ಮನದಿಂಗಿತವನ್ನು ಹೇಳಿಕೊಂಡಾಗ ರಬ್ಬರ್ ಮತ್ತು ಸಿಲಿಕಾನ್ ಮಟಿರಿಯಲ್ ಮೂಲಕ ಹೆಂಡತಿಯ ನೈಜರೂಪದ ಪ್ರತಿಮೆ ರೂಪಿಸಿದ್ದಾರೆ. ಅದು ಯಾವುದೇ ಕೋನದಲ್ಲೂ ಬೊಂಬೆ ಅನಿಸಲ್ಲ. ಅವರೊಬ್ಬ ವ್ಯಕ್ತಿ ಎನ್ನುವಷ್ಟರಮಟ್ಟಿಗೆ ಹಾಸು ಹೊಕ್ಕಾಗಿದೆ. ಗುಪ್ತಾ ಅವರ ಮಕ್ಕಳ ಸಂತೋಷಕ್ಕೆ ಪಾರವೇ ಇಲ್ಲ. ಅಮ್ಮ ಜೊತೆಯಲ್ಲೇ ಇದ್ದಾಳೆ ಎನ್ನುವ ಭಾವದಲ್ಲಿ ಗೃಹಪ್ರವೇಶ ಕಾರ್ಯ ಮುಗಿಸಿದ್ದಾರೆ. 

100%

ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಮೊದಲು ದಿಗ್ಭ್ರಮೆಗೊಂಡು ಆನಂತರ ಸಿಲಿಕಾನ್ ಬೊಂಬೆಯ ಪ್ರತಿರೂಪದ ಜೊತೆ ಫೋಟೊ ತೆಗೆಸಿಕೊಂಡದ್ದೇ ದೊಡ್ಡ ಸಂಭ್ರಮವಾಗಿತ್ತು.

ನಾನು ಜೀವನದಲ್ಲಿ ಹೆಚ್ಚು ಪ್ರೀತಿಸುವ ಜೀವ ಅದು. ದೇವರು ನನಗೆ ಇಷ್ಟು ಮಾತ್ರ ಶಕ್ತಿ ಕೊಟ್ಟಿದ್ದಾನೆ. ಜೀವ ತುಂಬುವ ಶಕ್ತಿ ನನಗೆ‌ ಇದ್ದಿದ್ದರೆ ತಡ ಮಾಡುತ್ತಲೇ ಇರಲಿಲ್ಲ. ಇದಕ್ಕೆ ಬೆಲೆ ಕೇಳಬೇಡಿ. ನನ್ನವಳ ನೆನಪುಗಳಿಗೆ ಬೆಲೆಯನ್ನೇ ಕಟ್ಟಲಾಗಲ್ಲ.
- ಶ್ರೀನಿವಾಸ ಗುಪ್ತಾ, ವಾಣಿಜ್ಯೋದ್ಯಮಿ, ಭಾಗ್ಯನಗರ.

ವರದಿ: ಬಸವರಾಜ ಕರುಗಲ್

Stay up to date on all the latest ರಾಜ್ಯ news
Poll
Parliament

ಸಂಸತ್ತಿನ ಈ ಮುಂಗಾರು ಅಧಿವೇಶನವು ಪ್ರಜಾಪ್ರಭುತ್ವದ ಕಗ್ಗೊಲೆಗೆ ಸಾಕ್ಷಿಯಾಯಿತೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp