ದಕ್ಷಿಣ ಕನ್ನಡ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ: ಉತ್ತರ ಕರ್ನಾಟಕ ವಿದ್ಯಾರ್ಥಿಗಳ ಗುರುತರ ಸಾಧನೆ!
ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧನೆ ಮಾಡಿದ್ದಾರೆ.
Published: 11th August 2020 02:43 PM | Last Updated: 12th August 2020 07:42 AM | A+A A-

ಎಡದಿಂದ ಬಲಕ್ಕೆ (ಸಮೀದ್ ಮಹವೀರ್ ಹಂಜೆ, ಕಾವ್ಯಾ ಪಿ ಹಳ್ಳಿ, ಶ್ರಾವ್ಯಾ ಹೆಚ್, ಪ್ರಕೃತಿಪ್ರಿಯ ರವೀಂದ್ರ ಗೋಕಾವಿ)
ಮಂಗಳೂರು: ಉತ್ತರ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧನೆ ಮಾಡಿದ್ದಾರೆ.
625ಕ್ಕೆ 620 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿರುವ ನಾಲ್ವರು ವಿದ್ಯಾರ್ಥಿಗಳು ಬೆಳಗಾವಿಯವರಾಗಿದ್ದು, ಮತ್ತಿಬ್ಬರು ಹಾವೇರಿ ಮತ್ತು ಚಿಕ್ಕಮಗಳೂರಿನವರಾಗಿದ್ದಾರೆ. ಇವರೆಲ್ಲರೂ ಮೂಡಬಿದ್ರೆಯ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯವರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಅಳಗವಾಡಿಯ ಸಮ್ಮೀದ್ ಮಹಾವೀರ್ ಹಂಜೆ 622 ಅಂಕ ಗಳಿಸಿದ್ದು, ಲಾಕ್ ಡೌನ್ ಸಮಯದಲ್ಲಿ ಓದಲು ಸಹಾಯವಾಯಿತು ಎನ್ನುತ್ತಾನೆ.ಈತ ರೈತನ ಮಗನಾಗಿದ್ದು ಮುಂದೆ ಐಎಎಸ್ ಮಾಡುವ ಆಸೆ ಹೊಂದಿದ್ದಾನೆ.
ಮೂಡಬಿದ್ರಿಯ ವಸತಿ ಶಾಲೆಯ ಎಲ್ಲಾ 160 ಮಕ್ಕಳನ್ನು ಲಾಕ್ ಡೌನ್ ಸಮಯದಲ್ಲಿ ಮನೆಗೆ ಹೋಗಲು ಬಿಡಲಿಲ್ಲ. ಬದಲಿಗೆ ಶಾಲೆಯ ವಸತಿಗೃಹದಲ್ಲಿಯೇ ಕುಳಿತು ಓದಿಕೊಳ್ಳುವಂತೆ, ಮತ್ತೆ ಮತ್ತೆ ಪುನರಾವರ್ತಿಸಿಕೊಳ್ಳುವಂತೆ ಹೇಳಲಾಯಿತು ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಶಾಂತ್ ಬಿ.
ಇಲ್ಲಿನ ಶೇಕಡಾ 80ಕ್ಕೂ ಅಧಿಕ ಮಕ್ಕಳು ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಉತ್ತರ ಕರ್ನಾಟಕದ ಇತರ ಜಿಲ್ಲೆಗಳಿಗೆ ಸೇರಿದವರು. ಇಲ್ಲಿ ಪ್ರವೇಶ ಪರೀಕ್ಷೆ ಮೂಲಕ ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತದೆ. ಅಲೇಕ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಪರೀಕ್ಷೆ ಬರೆದು ಪ್ರವೇಶ ಗಿಟ್ಟಿಸಿಕೊಳ್ಳುತ್ತಾರೆ.
ಬೆಳಗಾವಿಯ ರಾಮದುರ್ಗ ತಾಲ್ಲೂಕಿನ ಸುರೆಬಾನ್ ಗ್ರಾಮದ ಪ್ರಕೃತಿಪ್ರಿಯ ರವೀಂದ್ರ ಗೊಕಾವಿ 622 ಅಂಕ ಗಳಿಸಿದ್ದು ಆಳ್ವಾಸ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಮಾಡಬೇಕೆಂದಿದ್ದಾಳೆ. ಹೈಸ್ಕೂಲ್ ಶಿಕ್ಷಕರ ಮಗಳಾಗಿರುವ ಈಕೆ ಐಎಎಸ್ ಮಾಡಬೇಕೆಂದಿದ್ದಾಳೆ.
ಚಿಕ್ಕಮಗಳೂರಿನ ಕಳಸದ ಶ್ರಾವ್ಯಾ ಹೆಚ್ ಅಂಗನವಾಡಿ ಕಾರ್ಯಕರ್ತೆಯ ಪುತ್ರಿ, 621 ಅಂಕ ಗಳಿಸಿದ್ದಾಳೆ. ವೈದ್ಯೆಯಾಗುವ ಕನಸು ಕಾಣುತ್ತಿದ್ದಾಳೆ.
ಹೀರೇಕೆರೂರಿನ ಲ್ಯಾಬ್ ಟೆಕ್ನಿಷಿಯನ್ ಪ್ರಕಾಶ್ ಮಗಳು ಕಾವ್ಯಾ ಪಿ ಹಳ್ಳಿ ಕಾಮರ್ಸ್ ಓದಿ ನಂತರ ಸಿವಿಲ್ ಸರ್ವಿಸ್ ತೆಗೆದುಕೊಳ್ಳಬೇಕೆಂದು ಇಚ್ಛೆ ವ್ಯಕ್ತಪಡಿಸಿದ್ದಾಳೆ.ಬೆಳಗಾವಿ ಜಿಲ್ಲೆಯ ಸಾಕ್ಷಿ ರಾಜು ಕುಂಬಾರ ಮತ್ತು ರಕ್ಷಿತ ಇಬ್ಬರೂ ತಲಾ 620 ಅಂಕ ಗಳಿಸಿದ್ದಾರೆ.