ಕೋವಿಡ್‌ ಆರೈಕೆ ಕೇಂದ್ರದ ಉಸ್ತುವಾರಿ ಅಧಿಕಾರಿಗಳಿಗೆ ಮೇಲಾಧಿಕಾರಿಯ ಕಿರುಕುಳ; ಆಯುಕ್ತರಿಗೆ ಪತ್ರ ಬರೆದು ದೂರು

ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ  ಮಾರಣಾಂತಿಕ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆರಂಭಿಸಲಾಗಿರುವ ಕೋವಿಡ್‌ ಆರೈಕೆ ಕೇಂದ್ರಗಳ (ಸಿಸಿಸಿ) ಉಸ್ತುವಾರಿ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.
ಕೋವಿಡ್‌ ಆರೈಕೆ ಕೇಂದ್ರದ ಉಸ್ತುವಾರಿ ಅಧಿಕಾರಿಗಳಿಗೆ ಮೇಲಾಧಿಕಾರಿಯ ಕಿರುಕುಳ; ಆಯುಕ್ತರಿಗೆ ಪತ್ರ ಬರೆದು ದೂರು

ಬೆಂಗಳೂರು:  ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ  ಮಾರಣಾಂತಿಕ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆರಂಭಿಸಲಾಗಿರುವ ಕೋವಿಡ್‌ ಆರೈಕೆ ಕೇಂದ್ರಗಳ (ಸಿಸಿಸಿ) ಉಸ್ತುವಾರಿ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ.

ಈ ಕುರಿತು ಕೋವಿಡ್‌ ಆರೈಕೆ ಕೇಂದ್ರಗಳ ನೋಡಲ್‌ ಅಧಿಕಾರಿಗಳಾಗಿರುವ ತಾತ್ಕಾಲಿಕ ತಹಶೀಲ್ದಾರ್‌ಗಳ ತಂಡ  ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಒಟ್ಟು 8 ಅಧಿಕಾರಿಗಳು ಸಹಿ ಹಾಕಿದ್ದಾರೆ.

ತಮಗೆ ಕೋವಿಡ್‌ ಆರೈಕೆ ಕೇಂದ್ರಗಳ ಕಾರ್ಯಾಧಿಕಾರಿಗಳು ಪ್ರತಿನಿತ್ಯ ಶೋಷಣೆ ಮಾಡುತ್ತಿದ್ದು, ಅವರಿಗೆ ಮುಕ್ತಿ ಪಡೆಯುವ ಸಲುವಾಗಿ ರಾತ್ರಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. 

ದೂರಿನಲ್ಲೇನಿದೆ?

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳಿಗೆ ಕಾರ್ಯಪಡೆಯ ಅಧಿಕಾರಿ ಕರೆ ಮಾಡಿ ಅವರ ಆದೇಶ ಪಾಲಿಸದಿದ್ದಲ್ಲಿ ಎಫ್‌ಐಆರ್‌ ಹಾಕುವ, ಅಮಾನತುಗೊಳಿಸುವ ಬೆದರಿಕೆ ಹಾಕುತ್ತಾರೆ ಮತ್ತು ಕೆಟ್ಟ ಭಾಷೆಗಳನ್ನು ಬಳಸುತ್ತಾರೆ. ಇದಕ್ಕಿಂತ ಗಂಭೀರ ವಿಷಯವೆಂದರೆ, ಸಿಸಿಸಿಗೆ ನಿಯೋಜನೆಗೊಂಡಿರುವ ಮಹಿಳಾ ಅಧಿಕಾರಿಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕರ್ತವ್ಯ ನಿರತ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ಮಧ್ಯರಾತ್ರಿಯಲ್ಲಿ ವಾಟ್ಸ್‌ಆ್ಯಪ್‌ ಕರೆ ಮಾಡಿ, ಇಲ್ಲವೇ ಸಂದೇಶ ಕಳುಹಿಸಿ, ವರದಿಗಳನ್ನು ಕಳುಹಿಸುವಂತೆ ಒತ್ತಡ ಹೇರುತ್ತಿದ್ದಾರೆ. ನಿಯಮದಂತೆ ಬಿಬಿಎಂಪಿ ಜಂಟಿ ಆಯುಕ್ತರು ಸೇರಿದಂತೆ ಇತರ ಅಧಿಕಾರಿಗಳನ್ನು ಹೊರತುಪಡಿಸಿ ಅವರಿಗೆ ನೇರವಾಗಿ ರಿಪೋರ್ಟ್ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಬಿಬಿಎಂಪಿ ಮಾಡುವ ಕೆಲಸಗಳ ಬಗ್ಗೆ ಯಾವಾಗಲೂ ಕೆಟ್ಟದಾಗಿ ಮಾತನಾಡಲಾಗುತ್ತದೆ. 

ದಿನದ 24 ಗಂಟೆಗಳ ಕಾಲ ಕೆಲಸ ಮಾಡಿದರೂ, ಅಧಿಕಾರಿಗಳ ಆತ್ಮವಿಶ್ವಾಸ ಕಡಿಮೆಯಾಗುವಂತೆ ನಡೆಸಿಕೊಳ್ಳಲಾಗುತ್ತದೆ ಎಂದು ಮೇಲಾಧಿಕಾರಿಯ ನಡುವಳಿಕೆ ಕುರಿತು ಆಕ್ಷೇಪಿಸಿಸಿದ್ದಾರೆ. 

ಮನವಿಗಳೇನು?

ಮೇಲಾಧಿಕಾರಿಗಳ ಕಿರುಕುಳದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಿಸಿಸಿ  ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ರಾತ್ರಿ ವೇಳೆ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. 

ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸೊಂಕು ಹರಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲಿ ಕೆಲಸ ನಿರ್ವಹಿಸುವ ವೈದ್ಯರು ಮತ್ತು ನರ್ಸ್‌ಗಳಿಗೆ ರಕ್ಷಣಾ ಕಿಟ್‌ಗಳನ್ನು ಒದಗಿಸಲಾಗಿದೆ. ಆದರೆ, ಸರ್ಕಾರಿ ಅಧಿಕಾರಿಗಳಿಗೆ ಯಾವುದೇ ರಕ್ಷಣಾತ್ಮಕ ಸೌಲಭ್ಯಗಳನ್ನು ಕಲ್ಪಿಸಲಿಲ್ಲ. ರೋಗಿಗಳೊಮದಿಗೆ ನೇರವಾಗಿ ಸಂಪರ್ಕ ಬೆಳೆಸುವುದರಿಂದ ಅವರಿಗೆ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿವೆ. 

ಅಧಿಕಾರಿಗಳಿಗೆ ಕೂಡ ಕುಟುಂಬವಿದ್ದು, ಮಕ್ಕಳು ಮತ್ತು ವಯಸ್ಕರಿದ್ದಾರೆ. ಅವರಿಗೆ ಸೋಂಕಿಗೆ ಗುರಿಯಾಗುವ ಅಪಾಯ ಹೆಚ್ಚಿದೆ. ಅಲ್ಲದೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್‌ ಮತ್ತು ಸಿಬ್ಬಂದಿಗೆ ಕ್ವಾರಂಟೈನ್‌ ಒದಗಿಸಲಾಗುತ್ತದೆ. ಆದರೆ, ಅಧಿಕಾರಿಗಳಿಗೆ ಈ ಅವಕಾಶವಿಲ್ಲ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.

ತಹಶೀಲ್ದಾರ್‌ ಅವರ ದೂರಿನ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಈ ಕುರಿತು ಏನೂ ಪ್ರತಿಕ್ರಿಯೆ ನೀಡಲಾರೆ ಎಂದು ರಾಜೇಂದ್ರ ಕುಮಾರ್‌ ಕಟಾರಿಯಾ, ಐಎಎಸ್, ಸಿಸಿಸಿ ಉಸ್ತುವಾರಿ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com