ನನ್ನ ಗೆಳೆಯ ಪಡೆದುಕೊಳ್ಳುತ್ತಿರುವ ಶಿಕ್ಷಣ ನನಗೆ ಪಡೆಯಲಾಗುತ್ತಿಲ್ಲ, ನಾನೇನು ತಪ್ಪು ಮಾಡಿದೆ?: ಪ್ರಧಾನಿ ಮೋದಿಗೆ ಪತ್ರ ಬರೆದ ಬಾಲಕ

ನನ್ನೊಂದಿಗೆ ಆಟವಾಡುವ ನನ್ನ ಸ್ನೇಹಿತ ಪಡೆದುಕೊಳ್ಳುತ್ತಿರುವ ಶಿಕ್ಷಣವನ್ನು ನಾನು ಪಡೆಯಲು ಸಾಧ್ಯವಾಗುತ್ತಿಲ್ಲ. ನಾನೇನು ತಪ್ಪು ಮಾಡಿದೆ? ಇದು 6ನೇ ತರಗತಿ ಓದುತ್ತಿರುವ ಪುಟ್ಟ ಬಾಲಕನೊಬ್ಬ ಆನ್'ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದೆ ನೊಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಳಿರುವ ಪ್ರಶ್ನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನನ್ನೊಂದಿಗೆ ಆಟವಾಡುವ ನನ್ನ ಸ್ನೇಹಿತ ಪಡೆದುಕೊಳ್ಳುತ್ತಿರುವ ಶಿಕ್ಷಣವನ್ನು ನಾನು ಪಡೆಯಲು ಸಾಧ್ಯವಾಗುತ್ತಿಲ್ಲ. ನಾನೇನು ತಪ್ಪು ಮಾಡಿದೆ? ಇದು 6ನೇ ತರಗತಿ ಓದುತ್ತಿರುವ ಪುಟ್ಟ ಬಾಲಕನೊಬ್ಬ ಆನ್'ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದೆ ನೊಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಕೇಳಿರುವ ಪ್ರಶ್ನೆ...

ನಗರದ ಖಾಸಗಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಜೇಮ್ಸ್ (ಹೆಸರು ಬದಲಿಸಲಾಗಿದೆ) ಎಂಬ ಬಾಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ನನ್ನ ಸ್ನೇಹಿತನಿಗೆ ಶಿಕ್ಷಣ ಪಡೆಯಲಾಗುತ್ತಿದೆ. ನನಗೆ ಸಾಧ್ಯವಾಗುತ್ತಿಲ್ಲ. ನಾನೇನು ತಪ್ಪು ಮಾಡಿದೆ ಎಂದು ಪ್ರಶ್ನಿಸಿದ್ದಾನೆ. 

ಶುಲ್ಕ ಪಾವತಿ ಮಾಡದ ಕಾರಣ ಬಾಲಕ ವಿದ್ಯಾಭ್ಯಾಸ ಮಾಡುತ್ತಿದ್ದ ಶಾಲೆಯು ವರ್ಗಾವಣೆ ಪತ್ರವನ್ನು ನೀಡಿದ್ದು, ಅಂಕಪತ್ರಗಳನ್ನು ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಆನ್'ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದೆ ನೊಂದಿರುವ ಬಾಲಕ ಪ್ರಧಾನಿ ಮೋದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾನೆ. 

ಬಾಲಕನ ನೋವನ್ನು ಕಂಡ ತಂದೆ ಸೆಬಾಸ್ಟಿಯನ್ ಅವರು ಸರ್ಕಾರದ ಮಾರ್ಗಸೂಚಿ ಅನುಸರಿಸಬೇಕು, ಶುಲ್ಕ ಕಟ್ಟುವಂತೆ ಪೋಷಕರಿಗೆ ಬಲವಂತ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬಳಿಕ ಶಾಲಾ ಆಡಳಿತ ಮಂಡಳಿಯು ಇದೀಗ ಬಾಲಕನಿಗೆ ನೀಡಲಾಗಿದ್ದ ಆನ್'ಲೈನ್ ಟೂಲ್'ನ್ನು ಕಡಿತಗೊಳಿಸಿದೆ. 

ಇತರೆ ಪೋಷಕರಿಗೆ ನೀಡಲಾಗಿದ್ದ ಆನ್'ಲೈನ್ ಟೂಲ್ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸಿದೆ. ಅವರಲ್ಲಿ ಕೆಲಸ ಮಾಡುತ್ತಿದೆ. ಆದರೆ, ನಮಗೆ ಮಾತ್ರ ಕಡಿತಗೊಳಿಸಿದ್ದರು. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸದರೆ, ಯಾರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಇದೀಗ ಶಾಲೆಯು ವರ್ಗಾವಣೆ ಪತ್ರ ನೀಡಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ. 

ಈ ನಡುವೆ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಿರುವ ಪೋಷಕರೂ ಕೂಡ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶಾಲಾ ಆಡಳಿತ ಮಂಡಳಿಯು ಒಮ್ಮೆಲೆಗೆ ಶುಲ್ಕ ಕಟ್ಟುವಂತೆ ಒತ್ತಡ ಹೇರುತ್ತಿದೆ. ಶುಲ್ಕ ಪಾವತಿಸದ ಮಕ್ಕಳಿಗೆ ಕಿರುಕುಳ ನೀಡುತ್ತಿದೆ ಎಂದು ಹೇಳಿದ್ದಾರೆ. 

ಈ ನಡುವೆ ಬಾಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಶಾಲಾ ಚಟುವಟಿಕೆಯಲ್ಲಿ ನಾನು ಅತ್ಯುತ್ತಮವಾಗಿದ್ದೆ. ಎಲ್ಲಾ ಪರೀಕ್ಷೆಯಲ್ಲಿಯೂ A, A+ ಶ್ರೇಣಿಯನ್ನು ಪಡೆದಿದ್ದೇನೆ. ಶುಲ್ಕ ಪಾವತಿಸದ ಕಾರಣ ಶಾಲಾ ಆಡಳಿತ ಮಂಡಳಿಯು ಇದೀಗ ನನಗೆ ವರ್ಗಾವಣೆ ಪತ್ರ ನೀಡಿ, ಶಾಲೆಯಿಂದ ಹೊರಹಾಕಿದೆ. ಶಾಲೆಯಲ್ಲಿ ನಾನು 6ನೇ ತರಗತಿ ಓದುತ್ತಿದ್ದು, ಎಂದಿಗೂ ಗೈರು ಹಾಜರಾಗಿಲ್ಲ. ಇದೇ ಮೊದಲ ಬಾರಿಗೆ ಗೈರು ಹಾಜರಾಗಿದ್ದೇನೆ. ವಿದ್ಯಾಭ್ಯಾಸ ಮುಂದುವರೆಸಲು ನನಗೆ ಸಹಾಯ ಮಾಡಿ ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com