ಚುರುಕುಗೊಂಡ ಪಿಯುಸಿ ಪ್ರವೇಶ ಪ್ರಕ್ರಿಯೆ: ಮಕ್ಕಳಿಗೆ ಸೀಟು ಕೊಡಿಸಲು ಪೋಷಕರ ಪರದಾಟ

ಎಸ್ಎಸ್ಎಲ್'ಸಿ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪಿಯುಸಿ ಪ್ರವೇಶ ಪ್ರಕ್ರಿಯೆ ಚುರುಕುಗೊಂಡಿದ್ದು, ಮಕ್ಕಳಿಗೆ ಸೀಟುಕೊಡಿಸಲು ಪೋಷಕರು ಪರದಾಟುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಎಸ್ಎಸ್ಎಲ್'ಸಿ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪಿಯುಸಿ ಪ್ರವೇಶ ಪ್ರಕ್ರಿಯೆ ಚುರುಕುಗೊಂಡಿದ್ದು, ಮಕ್ಕಳಿಗೆ ಸೀಟುಕೊಡಿಸಲು ಪೋಷಕರು ಪರದಾಟುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. 

ನಗರದ ಬಹುತೇಕ ಪ್ರತಿಷ್ಟಿತ ಖಾಸಗಿ ಕಾಲೇಜುಗಳು ಈಗಾಗಲೇ ಪ್ರಥಮ ಪಿಯುಸಿ ಸೀಟುಗಳನ್ನು ಅನಧಿಕೃತವಾಗಿ ಆನ್'ಲೈನ್ ಮೂಲಕ ಭರ್ತಿ ಮಾಡಿಕೊಂಡಿರುವುದರಿಂದ ಎಸ್ಎಸ್ಎಲ್'ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದರೂ ಪ್ರತಿಷ್ಟಿತ ಕಾಲೇಜುಗಳಲ್ಲಿ ಸೀಟು ಸಿಗದೆ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ. 

ಬೆಂಗಳೂರು ಉತ್ತರ ಭಾಗದಲ್ಲಿರುವ ಪಿಯುಸಿ ಕಾಲೇಜಿನಿಂದ ದೂರವಾಣಿ ಕರೆ ಬಂದಿತ್ತು. ಶೀಘ್ರದಲ್ಲಿಯೇ ಆನ್'ಲೈನ್ ಕ್ಲಾಸ್ ಗಳನ್ನು ಪ್ರಾರಂಭಿಸುತ್ತಿದ್ದು, ನಿಮ್ಮ ಮಗ ಉತ್ತಮ ಅಂಕ ಗಳಿಸಿರುವುದರಿಂದ ಸೀಟುದೊರಕಿದೆ ಎಂದು ಹೇಳಿದ್ದರು. ಮಗ ಸೈನ್ಸ್ ಅಥವಾ ಕಾಮರ್ಸ್ ಯಾವ ವಿಭಾಗದಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಾನೆಂಬ ಸ್ಪಷ್ಟತೆಗಳು ಇರಲಿಲ್ಲ. ಹೀಗಾಗಿ ನಾವು ಕೂಡಲೇ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿರಲಿಲ್ಲ. ದೂರವಾಣಿ ಕರೆ ಬಂದ ಮೂರು ಗಂಟೆಗಳಲ್ಲಿ ಪ್ರವೇಶ ಪೂರ್ಣಗೊಂಡಿದೆ ಎಂದು ಕಾಲೇಜು ಸಂಸ್ಥೆ ಹೇಳಿದೆ ಎಂದು ಬೆಂಗಳೂರು ನಿವಾರಿ ಜಿ ಮೂರ್ತಿಯವರು ಹೇಳಿದ್ದಾರೆ. 

ಇದೇ ರೀತಿ ದೂರವಾಣಿ ಕರೆ ನಗರ ನಿವಾಸಿ ಟಿ ಕುಮಾರ್ ಅವರಿಗೂ ಬಂದಿದೆ. ಶುಲ್ಕ ಕಟ್ಟಲು ಎರಡು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ಪ್ರವೇಶಾತಿ ಪಡೆಯಲು ಅರ್ಜಿ ಸಲ್ಲಿಸುವಂತೆ ತಿಳಿಸಿದ್ದರು. ಇದೇ ಹೀತಿ ಹಲವು ವಿದ್ಯಾರ್ಥಿಗಳಿಗೂ ದೂರವಾಣಿ ಕರೆ ಬಂದಿದೆ. ಆದರೆ, ಕೆಲವೇ ಗಂಟೆಗಳಲ್ಲಿ ಕಾಲೇಜಿನ ಪ್ರವೇಶ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಿಸಲಾಗಿದೆ. 

ಮೂರು ದಿನಗಳ ಹಿಂದಷ್ಟೇ ಎಸ್ಎಸ್ಎಲ್'ಸಿ ಪರೀಕ್ಷೆ ಫಲಿತಾಂಶ ಹೊರಬಿದ್ದಿದ್ದು, ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಲು ಕಾಲೇಜುಗಳಿಂದ ಕಾಲೇಜಿಗೆ ತಿರುಗಾಡುತ್ತಿದ್ದಾರೆ. 

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯುಸಿ ಪ್ರವೇಶಕ್ಕೆ ದಾಖಲಾತಿ ಪ್ರಕ್ರಿಯೆ ಆರಂಭಿಸುವ ಸಂಬಂಧ ಪದವಿ ಪೂರ್ವಶಿಕ್ಷಣ ಇಲಾಖೆಯು ಮಾರ್ಗಸೂಚಿಯನ್ನು ಪ್ರಕಟಿಸಿದೆ. 

ಕೊರೋನಾ ಭೀತಿಯಿಂದಾಗಿ ಕಾಲೇಜುಗಳು ಆನ್'ಲೈನ್ ಮೂಲಕ ಅರ್ಜಿ ವಿತರಿಸುವ ಮತ್ತು ಸ್ವೀಕರಿಸಬಹುದು. ಇಲ್ಲದಿದ್ದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಅರ್ಜಿ ನೀಡಬೇಕು. ಆ.13ರಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಬಹುದು. ಕಾಲೇಜುಗಳು ಸೂಚನಾ ಫಲಕಗಳಲ್ಲಿ ಇಲಾಖೆಯಿಂದ ಅನುಮತಿ ಪಡೆದ ಸಂಯೋಜನೆವಾರು ಪ್ರವೇಶಗಳ ಮಾಹಿತಿ, ದಾಖಲಾತಿ ಶುಲ್ಕಗಳ ವಿವರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪೂರ್ಣ ವಿವರಗಳನ್ನು ಪ್ರಕಟಿಸಬೇಕು. ಆ.13ರಿಂದ 4 ದಿನ ಮಾತ್ರ ಅರ್ಜಿ ವಿತರಿಸಬೇಕು ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com