ಕಾಯ್ದೆ ತಿದ್ದುಪಡಿಗಳ ವಿರುದ್ಧ ನಾಳೆ ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ: ಎಚ್.ಡಿ. ದೇವೇಗೌಡ

ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಹಾಗೂ ಕೈಗಾರಿಕಾ ಕಾಯಿದೆ ತಿದ್ದುಪಡಿ ವಿರೋಧಿಸಿ ಜೆಡಿಎಸ್ ಬೀದಿಗಿಳಿಯಲಿದೆ. ಆ.14 ಹಾಸನದಿಂದ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಚಾಲನೆ ನೀಡಲಿದ್ದಾರೆ.
ದೇವೇಗೌಡ
ದೇವೇಗೌಡ

ಬೆಂಗಳೂರು: ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಹಾಗೂ ಕೈಗಾರಿಕಾ ಕಾಯಿದೆ ತಿದ್ದುಪಡಿ ವಿರೋಧಿಸಿ ಜೆಡಿಎಸ್ ಬೀದಿಗಿಳಿಯಲಿದೆ. ಆ.14 ಹಾಸನದಿಂದ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ಧದ ಹೋರಾಟಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಚಾಲನೆ ನೀಡಲಿದ್ದಾರೆ.

ನಾಳೆ ಹಾಸನದಿಂದ ಹೋರಾಟಕ್ಕೆ ಚಾಲನೆ ಸಿಗಲಿದ್ದು, ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ಶಾಸಕರು, ಮಾಜಿ ಶಾಸಕರು, ಮೇಲ್ಮನೆ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಲಿದ್ದಾರೆ.

ಪಕ್ಷದ ಪ್ರಧಾನ ಕಚೇರಿ ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ದೇವೇಗೌಡ, ಹಾಸನದಲ್ಲಿ ನಾಳೆ 200 ಜನ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಒಂದು ಕಡೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದು, ಐದಾರು ಜನ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಲಿದ್ದೇವೆ. ಕೊರೊನಾ ಮಾರ್ಗಸೂಚಿಯ ಪ್ರಕಾರವೇ ಹೋರಾಟ ನಡೆಯಲಿದೆ ಎಂದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತರಿಗೆ ಮಾರಕ. ಸಣ್ಣ, ಮಧ್ಯಮ ವರ್ಗದ ರೈತರಿಗೆ ಅನ್ಯಾಯವಾಗುತ್ತಿದೆ. ಕೈಗಾರಿಕೆ ಕಾಯ್ದೆಯೂ ಅತ್ಯಂತ ಅಪಾಯಕಾರಿ. ಜಮೀನು ಪಡೆದು ಮುಂದೆ ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಅನಾನುಕೂಲವೇ ಹೆಚ್ಚು ಎಂದರು.

ಸರ್ಕಾರ ತಂದಿರುವ ಮೂರು ಕಾಯ್ದೆಗಳಿಗೆ ನಮ್ಮ ಸಮ್ಮತಿ ಇಲ್ಲ.‌ ಈ ಕಾಯಿದೆಗಳನ್ನು ಸುಗ್ರಿವಾಜ್ಞೆ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ. ಇದನ್ನನು ನಾವು ವಿರೋಧಿಸುತ್ತೇವೆ. ಈ ವಿಚಾರವಾಗಿ ರಾಜ್ಯಾದ್ಯಂತ ಹೋರಾಟ ಮಾಡಲು ನಾವು ಸಿದ್ಧವಾಗಿದ್ದೇವೆ ಎಂದು ದೇವೇಗೌಡ ಹೇಳಿದರು.

ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳು ರೈತರಿಗೆ ಮಾರಕವಾಗಿದೆ , ಸಣ್ಣ , ಮಧ್ಯಮ ವರ್ಗದ ರೈತರಿಗೆ ಇದರಿಂದ ಅನ್ಯಾಯವಾಗುತ್ತದೆ. ಕೈಗಾರಿಕೆ ಕಾಯ್ದೆಯೂ ಅತ್ಯಂತ ಅಪಾಯಕಾರಿ. ಜಮೀನು ಪಡೆದು ಮುಂದೆ ಮಾರಾಟ ಮಾಡಬಹುದು. ಈ ಕಾಯ್ದೆಯಿಂದ ಜನತೆಗೆ ಅನಾನುಕೂಲವೇ ಹೆಚ್ಚು ಎಂದು ಮಾಜಿ ಪ್ರಧಾನಿ ಹೇಳಿದರು.

ಎಪಿಎಂಸಿ ಕಾಯ್ದೆಯಿಂದ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ಸಂಸತ್ ನಲ್ಲಿ ಈ ಬಗ್ಗೆ ಹೋರಾಟ ಮಾಡುತ್ತೇನೆ. ಉಳಿದ ಕಾಯ್ದೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ಇಲ್ಲಿಯೇ ಪ್ರತಿಭಟನೆ ಮಾಡುತ್ತೇವೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. 30 ಜಿಲ್ಲೆಗೆ ತಮಗೆ ಭೇಟಿ ನೀಡಿ ಹೋರಾಟ ಮಾಡಲು ಆಗುವುದಿಲ್ಲ. ರಾಜ್ಯಾಧ್ಯಕ್ಷರು, ಆಯಾ ಭಾಗದ ಶಾಸಕರು, ಮಾಜಿ ಶಾಸಕರು, ಪರಿಷತ್ ಸದ್ಯಸರು ಜಿಲ್ಲೆಗಳಲ್ಲಿ ಹೋರಾಟ ಮಾಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಾವು, ರಾಜ್ಯಾಧ್ಯಕ್ಷರು ಹೋರಾಟದ ನೇತೃತ್ವ ವಹಿಸುತ್ತೇವೆ ಎಂದರು.

ಶಾಸಕ ಅಖಂಡ ಶ್ರೀನಿವಾಸ್ ಅವರ ಮನೆ ಮೇಲಿನ ದಾಳಿ ಪ್ರಕರಣ ದುರದೃಷ್ಟಕರ. ದೇಶದ ಯಾವ ಭಾಗದಲ್ಲೂ ಇಂಥ ಪ್ರಕರಣ ನಡೆಯಬಾರದು, ದೊಂಬಿ ಗಲಾಟೆ ಘಟನೆ ಸಂಬಂಧ 150 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಲ್ಲಿ ನಿಜವಾದ ಅಪರಾಧಿಗಳು ಎಷ್ಟು?. ಇವರಲ್ಲಿ ಎಲ್ಲರೂ ಅಪರಾಧಿಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ತಪ್ಪಿತಸ್ಥರನ್ನು ಮಾತ್ರ ಘಟನೆಗೆ ಹೊಣೆಗಾರರನ್ನಾಗಿ ಮಾಡಿ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗುವುದು ಬೇಡ ಎಂದು ಪೊಲೀಸರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.

ಈ ಕೇಸ್ ಸಿಬಿಐಗೆ ವಹಿಸಿ ಎಂದು ಶಾಸಕ ಅಖಂಡ ಶ್ರೀನಿವಾಸ್ ಹೇಳಿದ್ದಾರೆ , ಈಗಿರುವ ಆಯುಕ್ತರು ಸಿಬಿಐನಲ್ಲಿ ಕೆಲಸ ಮಾಡಿದ್ದಾರೆ, ಹೀಗಾಗಿ ಅವರು ತಾರತಮ್ಯ ಮಾಡುವುದಿಲ್ಲ ಅನ್ನುವುದು ತಮ್ಮ ಭಾವನೆ. ಅಂತಿಮ ನಿರ್ಧಾರ ಸರ್ಕಾರವೇ ತೆಗೆದುಕೊಳ್ಳಲಿ. ನಿಜವಾದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ದೇವೇಗೌಡ ಸರ್ಕಾರವನ್ನು ಆಗ್ರಹಿಸಿದರು.

ಮನೆ ಸುಡುವುದು, ಕಾರು ಸುಡುವುದು, ಮನೆ ದೋಚುವುದು ಎಂದೂ ಈ ರಾಜ್ಯದಲ್ಲಿ ನಡೆದದ್ದು ನಾನು ನೋಡಿಲ್ಲ. ಶಾಸಕರೊಬ್ಬರ ಮನೆಯನ್ನು ಹೀಗೆ ಸುಟ್ಟಿರುವುದು ಇದೇ ಮೊದಲು. ಅಖಂಡ ಶ್ರೀನಿವಾಸ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು. ಆಗಿರುವ ಆಸ್ತಿ ಪಾಸ್ತಿ ನಷ್ಟವನ್ನು ಸರಕಾರ ತನಿಖೆ ನಡೆಸಬೇಕು. ಅಖಂಡ ಶ್ರೀನಿವಾಸ್ ಅವರಿಗೆ ಧೈರ್ಯ ತುಂಬುವ ಕೆಲಸಕ್ಕೆ ಸರಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಶಾಸಕರು ಕಣ್ಣೀರು ಹಾಕಿರುವುದನ್ನು ಟಿವಿಯಲ್ಲಿ ನೋಡಿದ್ದೇನೆ. ಹೆಂಡತಿ‌ ಮಕ್ಕಳ ನೋವನ್ನೂ ನೋಡಿದ್ದೇನೆ. ಅವರಿಗೆ ಆಗಿರುವ ಅನ್ಯಾಯ ಸರಿ ಪಡಿಸಲು, ಪರಿಹಾರ ಕೊಡಲು ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳಬೇಕು. ಅಖಂಡ ಅವರು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದರು ಎನ್ನುವುದು ಬೇರೆ ವಿಷಯ. ಗಲಾಟೆ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಕೆಸರೆರಚಾಟ,. ರಾಜಕೀಯ ಚೆಲ್ಲಾಟ ಬೇಡ. ಯಾರೂ ಮನಸ್ಸಿಗೆ ಬಂದ ಹಾಗೆ ಮಾತನಾಡುವುದು ಸರಿಯಲ್ಲ ಎಂದು ಸಲಹೆ ನೀಡಿದರು.

ಬಿಜೆಪಿ ಸಚಿವರ ಮಾತುಗಳನ್ನೂ ಕೇಳಿದ್ದೇನೆ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಸಿ ಎಲ್ ಪಿ ನಾಯಕರ ಮಾತುಗಳನ್ನು ಗಮನಿಸಿದ್ದೇನೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಮಾಡುವಾಗ ರಾಜಕೀಯ ಪಕ್ಷಗಳು ಮಧ್ಯ ಪ್ರವೇಶ ಮಾಡಬಾರದು. ಬಿಜೆಪಿ ಸರಕಾರವೇ ಅಧಿಕಾರದಲ್ಲಿ ಇದೆ. ಘಟನೆ ಕುರಿತು ಈಗಾಗಲೇ ಮುಖ್ಯಮಂತ್ರಿ ಮಾತನಾಡಿದ್ದಾರೆ.
ಇದಾದ ಮೇಲೂ ಕೆಲವು ಸಚಿವರು ಮಾತನಾಡುತ್ತಿದ್ದಾರೆ, ಹೀಗಾದರೆ ಮುಖ್ಯಮಂತ್ರಿಯವರ ಮಾತಿಗೆ ಅರ್ಥವೇ ಇರುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ಅವರು ಪ್ರವಾಹದ ಕುರಿತು ನಮ್ಮ ರಾಜ್ಯದ ಮಂತ್ರಿಗಳ ಜೊತೆ ಸಭೆ ಮಾಡಿದ್ದಾರೆ. ಅದರಿಂದ ತಮಗೆ ತೃಪ್ತಿ ಆಗಿಲ್ಲ. ಪ್ರತಿ ಜಿಲ್ಲೆ, ತಾಲೂಕಿಗೆ ಹೋಗಿ ನಮ್ಮ ಅಧಿಕಾರಿಗಳ ನಷ್ಟದ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಅದಾದ ನಂತರ ಕೇಂದ್ರ ಸರ್ಕಾರ ಶೀಘ್ರವೇ ರಾಜ್ಯಕ್ಕೆ ತಂಡ ಕಳಿಸಿ ಅಧ್ಯಯನ ಮಾಡಿಸಬೇಕು. ಕೇಂದ್ರದ ತಂಡ ಪರಿಶೀಲನೆ ಮಾಡಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಕಳೆದ ಬಾರಿ ಪ್ರವಾಹ ಪರಿಹಾರದಲ್ಲಿ ನಮಗೆ ಅನ್ಯಾಯ ಆಗಿದೆ. ಈ ಬಾರಿ ಹಾಗೆ ಆಗಬಾರದು. ನಾನು ಈ ಬಗ್ಗೆ ಸಂಸತ್ ನಲ್ಲಿ ಮಾತಾನಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಭರವಸೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com