ಬೆಂಗಳೂರು ಗಲಭೆ: 7 ಎಫ್ಐಆರ್ ದಾಖಲು, 22 ಪ್ರಮುಖ ಮಂದಿಯ ಹೆಸರು ದಾಖಲು

ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಒಟ್ಟು 7 ಎಫ್ಐಆರ್ ಗಳನ್ನು ದಾಖಲು ಮಾಡಿಕೊಂಡಿದ್ದು, ಎಫ್ಐಆರ್ ನಲ್ಲಿ 22 ಮಂದಿ ಪ್ರಮುಖರ ಹೆಸರುಗಳನ್ನು ಸೇರ್ಪಡೆಗೊಳಿಸಿದೆ ಎಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಡಿಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ಒಟ್ಟು 7 ಎಫ್ಐಆರ್ ಗಳನ್ನು ದಾಖಲು ಮಾಡಿಕೊಂಡಿದ್ದು, ಎಫ್ಐಆರ್ ನಲ್ಲಿ 22 ಮಂದಿ ಪ್ರಮುಖರ ಹೆಸರುಗಳನ್ನು ಸೇರ್ಪಡೆಗೊಳಿಸಿದೆ ಎಂದು ತಿಳಿದುಬಂದಿದೆ. 

ಎಫ್ಐಆರ್ ನಲ್ಲಿ ದಾಖಲಾಗಿರುವ 22 ಮಂದಿಯ ಪೈಕಿ 16 ಮಂದಿ ಎಸ್'ಡಿಪಿಐ ಸದಸ್ಯರಾಗಿದ್ದು, ಇದರಲ್ಲಿ ಬಹುತೇಕರನ್ನು ಈಗಾಗಲೇ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

ಪ್ರಕರಣ ಸಂಬಂಧ ಕಾವಲ್ ಬೈರಸಂದ್ರ ನಿವಾಸಿಯಾಗಿರುವ ಎಸ್'ಡಿಪಿಐ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಮುಜಾಮ್ಮಿಲ್ ಪಾಷಾ (36) ಅವರನ್ನು ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ.
 
ಮಂಗಳವಾರ ರಾತ್ರಿ ನಡೆದ ಗಲಭೆ ಪ್ರಕರಣದಲ್ಲಿ 300ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದು, ಪ್ರಕರಣ ಸಂಬಂಧ 7 ಮಂದಿಯ ಪೈಕಿ 6 ಮಂದಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 

7ನೇ ವ್ಯಕ್ತಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಸಂಬಂಧಿ ನವೀನ್ ಪಿ ಆಗಿದ್ದು, ಸಾಮಾಜಿಕ ಕಾರ್ಯಕರ್ತ ಫಿರ್ದೋಸ್ ಪಾಷಾ ಅವರು ನೀಡಿದ ದೂರಿನ ಆಧಾರದ ಮೇಲೆ ನವೀನ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ನಲ್ಲಿ ಕೊಲೆ ಯತ್ನ, ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿರುವುದು ಹಾಗೂ ಪೊಲೀಸರು ಕರ್ತವ್ಯ ನಿರ್ವಹಿಸಲು ತಡೆಯುಂಟು ಮಾಡಿರುವ ಅಂಶಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.
 
ಗಲಭೆ ಹಿಂದೆ ಎಸ್'ಡಿಪಿಐ ಪಿತೂರಿ: ಚುರುಕುಗೊಂಡ ತನಿಖೆ
ಗಲಭೆ ಕುರಿತ ಪ್ರಾಥಮಿಕ ಹಂತದಲ್ಲಿ ಎಸ್'ಡಿಪಿಐ ಪಾತ್ರದ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಿ ಸಂಪೂರ್ಣ ಮಾಹಿತಿ ಕರೆಹಾಕಲು ಸರ್ಕಾರ ಮುಂದಾಗಿದೆ. 

ಈ ನಡುವೆ ಆಡಳಿತಾರೂಢ ಬಿಜೆಪಿಯ ಹಲವು ಮುಖಂಡರು, ಸಂಸದರು ಹಾಗೂ ಶಾಸಕರು ರಾಜ್ಯದಲ್ಲಿ ಎಸ್'ಡಿಪಿಐ ನಿಷೇಧಿಸಬೇಕೆಂದು ಬಹಿರಂಗವಾಗಿಯೇ ಒತ್ತಾಯಿಸುತ್ತಿದ್ದಾರೆ. 

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆ ಪ್ರಕರಣ ನಡೆದಿದ್ದವು. ಆ ಪ್ರಕರಣಗಳಲ್ಲೂ ಎಸ್'ಡಿಪಿಐ ಮುಖಂಡರ ಪಾತ್ರ ಇರುವ ಬಗ್ಗೆ ಆಗ ನಡೆಸಿದ್ದ ತನಿಖೆಯಿಂದ ಹೊರಬಿದ್ದಿತ್ತು. ಆ ಸಂದರ್ಭದಲ್ಲೂ ಬಿಜೆಪಿ ಮುಖಂಡರು ಎಸ್ಡಿಪಿಐ ನಿಷೇಧಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಿದ್ದರು. ಆದರೆ, ಆಗ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ ಸರ್ಕಾರ ಇದಕ್ಕೆ ಮಣಿದಿರಲಿಲ್ಲ. 

ಇದೀಗ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಹೀಗಾಗಿ ಈ ಅವಕಾಶವನ್ನು ಬಳಸಿಕೊಂಡು ಎಸ್'ಡಿಪಿಐ ರಾಜ್ಯದಲ್ಲಿ ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡವನ್ನು ಪಕ್ಷದ ಮುಖಂಡರು ಸರ್ಕಾರದ ಮೇಲೆ ಹಾಕಿದ್ದಾರೆಂದು ಹೇಳಲಾಗುತ್ತಿದೆ. 

ಶೃಂಗೇರಿ ಶಂಕರ ಪ್ರತಿಮೆ ಮೇಲೆ ಹಾರಾಡಿದ ಎಸ್'ಡಿಪಿಐ ಧ್ವಜ
ಬೆಂಗಳೂರು ಗಲಭೆ ಮಾಸುವ ಮುನ್ನವೇ ಶೃಂಗೇರಿಯ ಶಂಕರಾಚಾರ್ಯ ವೃತ್ತದಲ್ಲಿ ಜಗದ್ಗುರು ಅಚಾರ್ಯ ಶಂಕರರ ಪ್ರತಿಮೆ ಮಂಟಪದ ಮೇಲೆ ಬುಧವಾರ ರಾತ್ರಿ ಕಿಡಿಗೇಡಿಗಳು ಎಸ್'ಡಿಪಿಐ ಸಂಘಟನೆ ಬಾವುಟ ಹಾರಿಸಿರುವ ಘಟನೆ ನಡೆದಿದ್ದು, ಇದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. 

ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಶ್ರೀಮಠದಿಂದ ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಆರೋಪಿಗಳಾದ ರಫೀಕ್ ಅಹ್ಮದ್, ಇರ್ಫಾನ್, ಸಾಹಿಲ್, ಸುಹೇಲ್ ಸೇರಿ 25 ಜನರ ವಿರುದ್ಧ ಐಪಿಸಿ ಸೆಕ್ಷನ್ 295, ಎ.153 ಎ. 141, 149ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 

ಘಟನೆ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸಚಿವ ಸಿ.ಟಿ.ರವಿಯವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. 

ಚಿಕ್ಕಮಗಳೂರು ಎಸ್'ಪಿ ಹಕಾಯ್ ಅಕ್ಷಯ್ ಮಚಿಂದ್ರ  ಪ್ರತಿಕ್ರಿಯೆ ನೀಡಿ, ಪ್ರಕರಣ ಸಂಬಂಧ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com