ರಷ್ಯಾ ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ದೇಶವಲ್ಲ; ಕೊರೋನಾ ಲಸಿಕೆ ಬಿಡುಗಡೆಗೆ ತಜ್ಞರ ವಿರೋಧ!

ಸ್ಪುಟ್ನಿಕ್ ಎಂಬ ಕೊರೋನಾ ಲಸಿಕೆ ಬಿಡುಗಡೆ ಮಾಡಿರುವ ರಷ್ಯಾ ನಡೆ ವೈದ್ಯಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರವಾಗಿದ್ದು, ಮೂರನೇ ಹಂತದ ಪರೀಕ್ಷಾ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಲಸಿಕೆಯನ್ನು ಬಿಡುಗಡೆ ಮಾಡಿರುವ ರಷ್ಯಾ ನಡೆಗೆ ವೈದ್ಯಕೀಯ ಲೋಕದ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸ್ಪುಟ್ನಿಕ್ ಎಂಬ ಕೊರೋನಾ ಲಸಿಕೆ ಬಿಡುಗಡೆ ಮಾಡಿರುವ ರಷ್ಯಾ ನಡೆ ವೈದ್ಯಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರವಾಗಿದ್ದು, ಮೂರನೇ ಹಂತದ ಪರೀಕ್ಷಾ ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಲಸಿಕೆಯನ್ನು ಬಿಡುಗಡೆ ಮಾಡಿರುವ ರಷ್ಯಾ ನಡೆಗೆ ವೈದ್ಯಕೀಯ ಲೋಕದ ತಜ್ಞರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾ ಲಸಿಕೆ ಬಿಡುಗಡೆ ಮಾಡುವ ಮೂಲಕ ರಷ್ಯಾ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದ್ದು, ವೈದ್ಯಕೀಯ ತಜ್ಞರು ರಷ್ಯಾ ಲಸಿಕೆ ಕುರಿತಂತೆ ಕಳವಳ ವ್ಯಕ್ತಪಡಿಸುತ್ತಾರೆ. ಸ್ಪುಟ್ನಿಕ್-ವಿ (ವ್ಯಾಕ್ಸಿನ್) ಎಂಬ ಹೆಸರಿನಲ್ಲಿ ರಷ್ಯಾ ಕೊರೋನಾ ಲಸಿಕೆ ಬಿಡುಗಡೆ ಮಾಡಿದೆ. ಆದರೆ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುತ್ನಿಕ್–ವಿ ಲಸಿಕೆಗೆ ಸಂಬಂಧಿಸಿದ ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳು ಲಭ್ಯವಿಲ್ಲ. ಅಲ್ಲದೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿರುವಾಗಲೇ ಲಸಿಕೆಯನ್ನು ಬಿಡುಗಡೆ ಮಾಡಲಾಗಿದೆ. ಇದು ರಷ್ಯಾದಲ್ಲಿ ಒಪ್ಪಿತವಾಗಿರಬಹುದು. ಆದರೆ ಇದನ್ನು ವಿಶ್ವದ ಮೊದಲ ಕೋವಿಡ್‌ ಲಸಿಕೆ ಎನ್ನಲಾಗದು. ಇನ್ನೂ ಹಲವು ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನಲ್ಲಿ ಸ್ಪುತ್ನಿಕ್–ವಿಗಿಂತಲೂ ಬಹಳ ಮುಂದೆ ಇವೆ ಎಂದು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿರುವ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಡಾ.ವಿಶಾಲ್ ರಾವ್ ಅವರು, ರಷ್ಯಾ ಕೋವಿಡ್ ಲಸಿಕೆ ಕೇವಲ 76 ರೋಗಿಗಳ ಮೇಲೆ ಮೊದಲ ಮತ್ತು 2ನೇ ಹಂತದ ಮಾನವ ಪ್ರಯೋಗ ಮಾತ್ರ ಮಾಡಿದೆ. ಆದರೆ ಈ ಲಸಿಕೆಯ ಮೂರು ಮತ್ತು ನಾಲ್ಕನೇ ಹಂತದ ಪ್ರಯೋಗ ಬಾಕಿ ಇದ್ದು, ಹತ್ತಾರು ಸಾವಿರ ರೋಗಿಗಳ ಮೇಲೆ ಪ್ರಯೋಗ ಮಾಡಬೇಕಿದೆ. ಈ ಪ್ರಯೋಗದ ಫಲಿತಾಂಶವನ್ನು ನೋಡಿಕೊಂಡು ಲಸಿಕೆಯನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ರಷ್ಯಾ ಈ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಅಲ್ಲದೆ ಈ ಲಸಿಕೆ ತೆಗೆದುಕೊಂಡ ರೋಗಿಯ ದೇಹದಲ್ಲಿ ಉಂಟಾಗುವ ಆ್ಯಂಟಿಬಾಡಿ ಒಂದು ವರ್ಷದೊಳಗೆ ಅಂತ್ಯವಾಗಬೇಕು. ಈ ಬಗ್ಗೆ ರಷ್ಯಾ ವಿಜ್ಞಾನಿಗಳು ಸಂಶೋಧನೆ ನಡೆಸಿಲ್ಲ. ಹೀಗಾಗಿ ರಷ್ಯಾ ಲಸಿಕೆಯ ಸಾಮಾರ್ಥ್ಯ ಹಾಗೂ ಸುರಕ್ಷತೆಯ ಕುರಿತು ಅನುಮಾನ ವ್ಯಕ್ತವಾಗುತ್ತಿದೆ. ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡದೇ ಜನರ ಜೀವ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಡಾ.ರಾವ್ ಹೇಳಿದ್ದಾರೆ.

ಕೋವಿಡ್ -19 ಲಸಿಕೆಗೆ ನಿಯಂತ್ರಕ ಅನುಮೋದನೆ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಮಂಗಳವಾರ ಪ್ರಕಟಿಸಿದೆ. ರಷ್ಯಾದ ಆರೋಗ್ಯ ರಕ್ಷಣಾ ಸಚಿವಾಲಯದ ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಲಸಿಕೆ-ಸ್ಪುಟ್ನಿಕ್-ವಿ ಯ ಮೊದಲ ಪ್ರಮಾಣವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಗಳಿಗೆ ನೀಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com