ಮದ್ದೂರು ಕೋರ್ಟ್ ಗೆ ಜಾಗ ಕೊರತೆ; 5 ಎಕರೆ ಜಾಗ ಕೋರಿ ಸಿಎಂ ಗೆ ಪತ್ರ ಬರೆದ ಎಸ್.ಎಂ.ಕೃಷ್ಣ  

ಮದ್ದೂರು ಕೋರ್ಟ್ ಗೆ ಎದುರಾಗಿರುವ ಜಾಗದ ಕೊರತೆಯನ್ನು ನೀಗಿಸಲು ತಕ್ಷಣವೇ ೫ ಎಕರೆ ಜಾಗವನ್ನು ಕೊಡಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರಿಗೆ ಮನವಿ ಮಾಡಿದ್ದಾರೆ.

Published: 16th August 2020 11:40 PM  |   Last Updated: 16th August 2020 11:40 PM   |  A+A-


CM_BSY__SM_Krishna1

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ,ಎಸ್.ಎಂ.ಕೃಷ್ಣ

Posted By : Nagaraja AB
Source : RC Network

ಮಂಡ್ಯ: ಮದ್ದೂರು ಕೋರ್ಟ್ ಗೆ ಎದುರಾಗಿರುವ ಜಾಗದ ಕೊರತೆಯನ್ನು ನೀಗಿಸಲು ತಕ್ಷಣವೇ ೫ ಎಕರೆ ಜಾಗವನ್ನು ಕೊಡಿಸಿಕೊಡುವಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರಿಗೆ ಮನವಿ ಮಾಡಿದ್ದಾರೆ.

ಈ ವಿಷಯವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಅವರಿಗೆ ಪತ್ರ ಬರೆದಿರುವ ಎಸ್.ಎಂ. ಕೃಷ್ಣ, ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ವಿಸ್ತರಣೆ ಮತ್ತು ಕಕ್ಷಿದಾರರ ಒತ್ತಡದಿಂದ ಕಿಷ್ಕಿಂಧೆಯಾಗಿರುವ ಮದ್ದೂರು ನ್ಯಾಯಾಲಯವನ್ನು ವಿಸ್ತರಣೆ ಮಾಡಲು ಸಹಕಾರಿಯಾಗುವಂತೆ ಹಾಲಿ ನ್ಯಾಯಾಲಯದ ಎದುರಿನಲ್ಲೇ ಇರುವ ರೇಷ್ಮೆ ಇಲಾಖೆಯ ಐದು ಎಕರೆ ಜಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರ ಮಾಡಿಕೊಡಬೇಂಕೆಂದು ಮನವಿ ಮಾಡಿದ್ದಾರೆ. 

ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿಯೇ ಹಾಲಿ ಇರುವ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹಗಳನ್ನು ನಿರ್ಮಿಸಿದ್ದೆ.ಆದರೆ ಸದರಿ ನ್ಯಾಯಾಲಯ ಇದೀಗ ಜನಸಾಂದ್ರತೆಯಿಂದಾಗಿ ಕಿರಿದಾಗಿದೆ,ಇದರಿಂದ ಕಕ್ಷಿದಾರರು,ವಕೀಲರು,ನ್ಯಾಯಾಧೀಶರೂ ಸಹ ಕಿಸ್ಕಿಂದೆಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 

ಪ್ರಸ್ತುತ ನಡೆಯುತ್ತಿರುವ ಮೈಸೂರು-ಬೆಂಗಳೂರು ಹೆದ್ದಾರಿ ವಿಸ್ತರಣೆಯಿಂದಾಗಿಯೂ ಸಹ ನ್ಯಾಯಾಲಯದ ಆವರಣ ಮತ್ತಷ್ಟು ಕಿರಿದಾಗಿದೆ. ಹೊಸದಾಗಿ ಮಂಜೂರಾಗಿರುವ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸ್ಥಳಾವಕಾಶದ ಕೊರತೆ ಎದುರಾಗಿದೆ. ಇದರಿಂದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರಿಗೆ ತೀವ್ರ ಅನಾನುಕೂಲ ಉಂಟಾಗಿದೆ. ಪ್ರಸ್ತುತ ಮದ್ದೂರಿನ ನ್ಯಾಯಾಲಯ
 ಸಂಕೀರ್ಣದಲ್ಲಿ ೬ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಮತ್ತೆ ೩ ನ್ಯಾಯಾಲಯಗಳು ಮಂಜೂರಾಗಿವೆ. ಸ್ಥಳಾವಕಾಶದ ಕೊರತೆಯಿಂದ ಹೊಸದಾಗಿ ಮಂಜೂರಾದ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಾಲಿ ನ್ಯಾಯಾಲಯದ ಎದುರು ಭಾಗದಲ್ಲಿ ರೇಷ್ಮೆ ಇಲಾಖೆಗೆ ಸೇರಿದ ಸುಮಾರು ೧೨ ಎಕರೆ ಜಾಗ ಅನುಪಯುಕ್ತವಾಗಿದೆ. ಈ ಜಾಗದಲ್ಲಿರುವ ೫ ಎಕರೆ ಜಾಗದಲ್ಲಿ ಹೈಕೋರ್ಟ್ ಮಾದರಿಯ ಸುಸಜ್ಜಿತ ನ್ಯಾಯಾಲಯ ನಿರ್ಮಿಸಿ ಅದರ ಪಕ್ಕದಲ್ಲಿ ನ್ಯಾಯಾಧೀಶರಿಗೆ ವಸತಿಗೃಹಗಳನ್ನು ನಿರ್ಮಿಸಿದರೆ ಮದ್ದೂರು ನ್ಯಾಯಾಲಯದ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ. ಇದನ್ನು ಸೂಕ್ಷ್ಮವಾಗಿ ಮನಗಂಡಿರುವ ಎಸ್.ಎಂ.ಕೃಷ್ಣ ಅವರು ನ್ಯಾಯಾಲಯಕ್ಕೆ ಹೊಸ ರೂಪ ನೀಡುವ ಸದುದ್ದೇಶ ಹಾಗೂ ದೂರದೃಷ್ಟಿಯಿಂದ ಸರ್ಕಾರಕ್ಕೆ ಪತ್ರ ಬರೆದು ಗಮನ ಸೆಳೆದಿದ್ದಾರೆ.

ಮದ್ದೂರಿನಲ್ಲಿ ಹಾಲಿ ನ್ಯಾಯಾಲಯ ಸಂಕೀರ್ಣದಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ೩ ನ್ಯಾಯಾಲಯಗಳು ಕಾರ್ಯನಿರ್ವಹಿಸುವ ಜಾಗದಲ್ಲಿ ೬ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿವೆ.೨ ಜೆಎಂಎಫ್ ಸಿ,  ೨ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ ಹಾಗೂ ೨ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯಗಳು ಸೇರಿವೆ. ಇವೆಲ್ಲವೂ ಕಿರಿದಾದ, ಇಕ್ಕಟ್ಟಾದ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರ. ದಿನನಿತ್ಯದ ಕಾರ್ಯಚಟುವಟಿಕೆಗಳಿಗೆ ತೀವ್ರ ಅನಾನುಕೂಲ ಉಂಟಾಗಿದೆ.

ಕೋರ್ಟ್ ಹಾಲ್ ಗಳ ಕೊರತೆಯಿಂದ ಮಂಜೂರಾಗಿರುವ ಎಲ್ಲಾ ನ್ಯಾಯಾಲಯಗಳು ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ರಾಜ್ಯ ಉಚ್ಚ ನ್ಯಾಯಾಲಯದ ಮಾದರಿಯಲ್ಲಿ ನ್ಯಾಯಾಲಯದ ನೂತನ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿಗೃಹಗಳನ್ನು ಒಂದೇ ಆವರಣದಲ್ಲಿ ನಿರ್ಮಿಸಿದರೆ ಸಾರ್ವಜನಿಕರಿಗೆ ನ್ಯಾಯದಾನದ ಕಾರ್ಯಕ್ಕೆ ಅನುಕೂಲವಾಗಲಿದೆ.ಮೈಸೂರು-ಬೆಂಗಳೂರು ಹೆದ್ದಾರಿಗೆ ಹೊಂದಿಕೊಂಡಂತೆ  ಸದರಿ ಜಾಗದಲ್ಲಿ ನ್ಯಾಯಾಲಯ 
ಕಾರ್ಯನಿರ್ವಹಿಸುವುದರಿಂದ  ಎಲ್ಲರಿಗೂ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಎಸ್.ಎಂ.ಕೃಷ್ಣ ಅವರು ಬರೆದಿರುವ ಪತ್ರದ ಆಧಾರದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾ ಯಣಗೌಡ ಅವರು ಈ ಕುರಿತು ತಕ್ಷಣವೇ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿಗಳು  ರೇಷ್ಮೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ಹೊಸದಾಗಿ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿರುವ ವಸ್ತ್ರದ್ಮಠ್ ಅವರು ಶೀಘ್ರಗತಿಯಲ್ಲಿ ಮದ್ದೂರು ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್ ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ  ಮಾದರಿ ನ್ಯಾಯಾಲಯವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದು, ಸರ್ಕಾರ ಶೀಘ್ರವಾಗಿ ಜಮೀನು ಹಸ್ತಾಂತರಿಸಿದರೆ ಕೆಲವೇ ವರ್ಷಗಳಲ್ಲಿ ಮದ್ದೂರಿನಲ್ಲಿ ಅತ್ಯಾಧುನಿಕ ನ್ಯಾಯಾಲಯ ನಿರ್ಮಾಣವಾಗಲಿದೆ. ಮದ್ದೂರು ಜನರ ಬವಣೆ,ವಕೀಲರು,ಇತರೆ ವೃತ್ತಿಪರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೂರದೃಷ್ಠಿಯಿಂದ ಎಸ್.ಎಂ.ಕೃಷ್ಣ ಅವರು ಮಾಡಿರುವ ಪ್ರಯತ್ನ ಶ್ಲಾಘನೀಯ ಎಂದು ವಕೀಲ ಟಿ.ಎಸ್.ಸತ್ಯಾನಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ನಾಗಯ್ಯ
 

Stay up to date on all the latest ರಾಜ್ಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp