ಕೊರೋನಾ: ಮೃತನಿಗೆ ಕೊರೋನಾ ಎಂದು ಶಂಕಿಸಿ ಹತ್ತಿರಕ್ಕೆ ಬಾರದ ಜನ, ಸೈಕಲ್ಲಲ್ಲಿ ಶವ ಸಾಗಿಸಿ ಅಂತ್ಯಕ್ರಿಯೆ!

ಕೊರೋನಾ ಭೀತಿಯಿಂದಾಗಿ ಅಂತ್ಯಸಂಸ್ಕಾರಕ್ಕೆ ವಾಹನ ದೊರೆಯದ ಹಿನ್ನೆಲೆಯಲ್ಲಿ ಶವವನ್ನು ತಳ್ಳುವ ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾಯ್ತು, ಇದೀಗ ಮಳೆಯ ನಡುವೆಯೇ ಸೈಕಲ್ ಮೇಲೆ ಶವ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ 2ನೇ ವಾರ್ಡ್ ನಲ್ಲಿ ಭಾನುವಾರ ನಡೆದಿದೆ. 
ಸೈಕಲ್ ನಲ್ಲಿ ಮೃತದೇಹ ಸಾಗಿಸುತ್ತಿರುವ ಕುಟುಂಬಸ್ಥರು
ಸೈಕಲ್ ನಲ್ಲಿ ಮೃತದೇಹ ಸಾಗಿಸುತ್ತಿರುವ ಕುಟುಂಬಸ್ಥರು

ಬೆಳಗಾವಿ: ಕೊರೋನಾ ಭೀತಿಯಿಂದಾಗಿ ಅಂತ್ಯಸಂಸ್ಕಾರಕ್ಕೆ ವಾಹನ ದೊರೆಯದ ಹಿನ್ನೆಲೆಯಲ್ಲಿ ಶವವನ್ನು ತಳ್ಳುವ ಗಾಡಿಯಲ್ಲಿ ತೆಗೆದುಕೊಂಡು ಹೋಗಿದ್ದಾಯ್ತು, ಇದೀಗ ಮಳೆಯ ನಡುವೆಯೇ ಸೈಕಲ್ ಮೇಲೆ ಶವ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆಯೊಂದು ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ 2ನೇ ವಾರ್ಡ್ ನಲ್ಲಿ ಭಾನುವಾರ ನಡೆದಿದೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಚನ್ನಮ್ಮನ ಕಿತ್ತೂರು ಪಟ್ಟಣದ ಗಾಂಧಿ ನಗರದ ನಿವಾಸಿಗೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ನಂತರ ಕೊರೋನಾ ಸೋಂಕಿನ ಗುಣಲಕ್ಷಣಗಳಿದ್ದು, ತಪಾಸಣೆ ಮಾಡುವಂತೆ ವೈದ್ಯರು ವೃದ್ಧನಿಗೆ ಸೂಚಿಸಿದ್ದರು. ಆದರೆ ಆತ ಭಾನುವಾರ ಬೆಳಗಿನ ಜಾವವೇ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಮನೆಯಲ್ಲಿ ಮೃತಪಟ್ಟಿದ್ದಾರೆ. 

ಇದರಿಂದ ಗಾಬರಿಗೊಂಡ ವೃದ್ಧನ ಪತ್ನಿ ಮತ್ತು ಕುಟುಂಬಸ್ಥರು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಶವ ಸಾಗಿಸಲು ಆ್ಯಂಬುಲೆನ್ಸ್ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ, ಇದಕ್ಕೆ ಆರೋಗ್ಯಾಧಿಕಾರಿಗಳು ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ಮೃತರಿಗೆ ಕೋವಿಡ್ ಟೆಸ್ಟ್ ಮಾಡಿಲ್ಲವಾಗಿದ್ದರಿಂದ ಕೊರೋನಾ ತಗುಲಿದೆಯೋ ಅತವಾ ಇಲ್ಲವೋ ಎಂಬುದೂ ಖಚಿತವಾಗಿಲ್ಲ. ಈ ಎಲ್ಲದರ ನಡುವೆ ಕೋವಿಡ್ ನಿಯಮದಂತೆ ಆಸ್ಪತ್ರೆ ಸಿಬ್ಬಂದಿಯೇ ಶವ ಸಂಸ್ಕಾರ ಮಾಡಲು ಮುಂದಾಗದಿರುವುದು ಕೂಡ ಆಕ್ರೋಶಕ್ಕೆ ಕಾರಮವಾಗಿದೆ. 

ಕೊರೋನಾ ಶಂಕಿತನೆಂಬ ಕಾರಣಕ್ಕೆ ಶವ ಸಾಗಿಸಲು ಯಾವ ವಾಹನ ಮಾಲೀಕರು ಒಪ್ಪದ್ದರಿಂದ ಮೃತನ ಪುತ್ರ ಹಾಗೂ ಸ್ನೇಹಿತ ಶವವನ್ನು ಪ್ಲಾಸ್ಟಿಕ್ ಕವರ್ ಗಳಿಂದ ಸುತ್ತಿಕೊಂಡು, ಪಂಚಾಯ್ತಿ ನೀಡಿದ ಪಿಪಿಇ ಕಿಟ್ ಧರಿಸಿ ಸೈಕಲ್ ನಲ್ಲಿಟ್ಟುಕೊಂಡು, ಆತ ಬಳಸುತ್ತಿದ್ದ ಬಟ್ಟೆಗಳೊಂದಿಗೆ ಸ್ಮಶಾನದತ್ತ ಹೊರಟು, ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಘಟನೆ ಬಳಿಕ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com