ಬೆಂಗಳೂರು ಗಲಭೆ: ಸಿಎಂ ಭೇಟಿಯಾದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ; ಸಿಬಿಐ ತನಿಖೆಗೆ ಆಗ್ರಹ

ಪುಲಿಕೇಶಿ‌ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೆ.ಜಿ.ಹಳ್ಳಿ ಗಲಭೆಯ ಬಗ್ಗೆ ವಿವರ ನೀಡಿದರು.
ಸಿಎಂ ಭೇಟಿಯಾದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ
ಸಿಎಂ ಭೇಟಿಯಾದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ

ಬೆಂಗಳೂರು: ಪುಲಿಕೇಶಿ‌ನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಕೆ.ಜಿ.ಹಳ್ಳಿ ಗಲಭೆಯ ಬಗ್ಗೆ ವಿವರ ನೀಡಿದರು.

ಘಟನೆಯ ಬಳಿಕ ಮೊದಲ ಬಾರಿಗೆ ಶಾಸಕ ಅರವಿಂದ ಲಿಂಬಾವಳಿ ಜೊತೆ ಬಂದು ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಅಖಂಡ ಶ್ರೀನಿವಾಸ್, ಗಲಭೆ ಕುರಿತು ಬಿಎಸ್‍ವೈ ಜೊತೆ ಚರ್ಚೆ ನಡೆಸಿದರು. ಈ ಗಲಭೆ ಪ್ರಮುಖ ಕಾರಣ ಯಾರು, ಗಲಭೆ ನಡೆದ ದಿನದಿಂದ ಇಲ್ಲಿಯವರೆಗೂ ಆಗಿರುವ ಬೆಳವಣಿಗೆ, ಪ್ರಕರಣದ ಕುರಿತು ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಎಸ್‍ಡಿಪಿಐ ಸಂಘಟನೆಯ ಕೈವಾಡ ಹಾಗೂ ಸ್ಥಳೀಯ ನಾಯಕರ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಹಲವು ವಿಷಯಗಳ ಗಳ ಬಗ್ಗೆ ಸಿಎಂಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.

ಬಳಿಕ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ‌, ಮುಖ್ಯಮಂತ್ರಿ ಬಳಿ ತಮಗೆ ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಗಲಭೆಯ ಹಿಂದೆ ಯಾರೇ ತಪ್ಪಿತಸ್ಥರಿದ್ದರೂ ಅವರನ್ನು ಬಂಧಿಸಲು ಮನವಿ ಮಾಡಿದ್ದೇನೆ ಎಂದರು. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ಪ್ರಸ್ತುತ ನಡೆಯುತ್ತಿರುವ ತನಿಖೆ ಬಳಿಕ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ತಮಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಒದಗಿಸಿಲ್ಲ. ಆದರೆ ಈಗಾಗಲೇ ತಮ್ಮ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಆದರೆ ತಮಗೆ ಭದ್ರತೆ ನೀಡುವ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ದೂರಿದರು.

'ಭದ್ರತೆ ಹೆಚ್ಚಳಕ್ಕೆ ಮನವಿ ಮಾಡಿದ್ದೇನೆ. ಸಿಬಿಐ ತನಿಖೆ ಮಾಡಿಸುವಂತೆ ಕೇಳಿಕೊಂಡಿದ್ದೇನೆ. ತನಿಖೆ ಬಳಿಕ ಪರಿಶೀಲಿಸಿ ನೋಡೋದಾಗಿ ಸಿಎಂ ಹೇಳಿದ್ದಾರೆ. ಯಾರೇ ಇದ್ರೂ ತಪ್ಪಿತಸ್ಥರನ್ನು ಬಂಧಿಸಲು ಮನವಿ ಮಾಡಿದ್ದೇನೆ. ನನಗೆ ಸರ್ಕಾರ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ. ನನ್ನ ಮನೆಗೆ ಭದ್ರತೆ ಕೊಟ್ಟಿದ್ದಾರೆ. ಭದ್ರತೆ ವಿಚಾರದಲ್ಲಿ ಸರ್ಕಾರ ಸ್ಪಂದಿಸಿಲ್ಲ ಎಂದು ಇದೇ ವೇಳೆ ಅಖಂಡ ಆರೋಪ ಮಾಡಿದರು. ಮೊನ್ನೆ ಸಿಎಂ ಜೊತೆ ಫೋನಿನಲ್ಲಿ ಮಾತಾಡಿದ್ದೆ. ನಮ್ಮನೆ ಅಕ್ಕ-ಪಕ್ಕ ಮನೆ, ವಾಹನಗಳನ್ನು ಸುಟ್ಟಿದ್ದಾರೆ. ಇವರಿಗೆಲ್ಲ ಪರಿಹಾರ ಕೊಡಲು ಸಿಎಂಗೆ ಮನವಿ ಮಾಡಿಕೊಂಡಿದ್ದೇನೆ. ಅಪರಾಧಿಗಳು ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿದ್ರೂ ಶಿಕ್ಷೆ ಆಗಲೇಬೇಕು ಎಂದು ಕಟುವಾಗಿ ಹೇಳಿದರು.

ಬಿಜೆಪಿ ಶಾಸಕರ ಜೊತೆ ಸಿಎಂ ಭೇಟಿಗೆ ಬಂದ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಅವರು, ನಮ್ಮ ಭೋವಿ ಸಮಾಜದ ಮುಖಂಡರ ಜೊತೆ ನಾನು ಸಿಎಂ ಭೇಟಿಗೆ ಆಗಮಿಸಿದೆ. ನಮ್ಮ ಸಮಾಜದ ಮುಖಂಡರು ಇದ್ದರು. ಅರವಿಂದ ಲಿಂಬಾವಳಿ ಭೋವಿ ಜನಾಂಗದ ಶಾಸಕರು. ನಮ್ಮ ಜನಾಂಗದ ಶಾಸಕರ ಜೊತೆ ನಾನು ಬಂದಿದ್ದೇನೆ. ಭೋವಿ ಜನಾಂಗದ ಅಧ್ಯಕ್ಷ ಮಾಕಳಿ ರವಿಯವರು ಬಂದಿದ್ದಾರೆ. ಅವರ ಜೊತೆಯಲ್ಲಿ ನಾನು ಬಂದು ಸಿಎಂ ಭೇಟಿ ಮಾಡಿದ್ದೇನೆ ಅಷ್ಟೇ ಎಂದರು.

ಕಾಂಗ್ರೆಸ್ ನನ್ನ ರಕ್ತದಲ್ಲೇ ಇದೆ. ನಾನೂ ಕೂಡ ಕಾಂಗ್ರೆಸಿಗನೇ..!
ಇದೇ ವೇಳೆ ಮಾಜಿ ಶಾಸಕ ಪ್ರಸನ್ನಕುಮಾರ್ ಮತ್ತೆ ಕಾಂಗ್ರೆಸ್ ಸೇರೋ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ನನಗೆ ಗೊತ್ತಿಲ್ಲ. ಪ್ರಸನ್ನಕುಮಾರ್ ಸೇರ್ಪಡೆಯಿಂದ ನನಗೆ ತೊಂದರೆ ಇಲ್ಲ. ಕಾಂಗ್ರೆಸ್ಸಿಗೆ ಯಾರು ಬೇಕಾದರೂ ಬರಬಹುದು. ಪ್ರಸನ್ನಕುಮಾರ್ ಕಾಂಗ್ರೆಸ್ ಸೇರೋ ವಿಷಯ ಅಧ್ಯಕ್ಷರಿಗೆ ಬಿಟ್ಟಿದು. ನಾನು ಕಾಂಗ್ರೆಸ್ ಬಿಡಲ್ಲ. ನಮ್ಮ ತಂದೆಯೂ ಕಾಂಗ್ರೆಸ್ಸಿನಲ್ಲೇ ಇದ್ದಿದ್ದು. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡೋ ಮಾತೇ ಇಲ್ಲ. ನನ್ನ ರಕ್ತದಲ್ಲಿ ಇರೋದು ಕಾಂಗ್ರೆಸ್. ನನ್ನ ರಕ್ಷಣೆಗೆ ಸರ್ಕಾರ ಸೇರಿದಂತೆ ನಮ್ಮ ಪಕ್ಷದ ನಾಯಕರು ಬರಬೇಕು. ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಸೇರಿದಂತೆ ಡಿಕೆ ಶಿವಕುಮಾರ್ ನನ್ನ ರಕ್ಷಣೆಗೆ ಬರಬೇಕು. ನನ್ನ ಮೇಲೆ ಯಾರಿಂದಲೂ ಒತ್ತಡ ಇಲ್ಲ, ಯಾವ ಒತ್ತಡವೂ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com