ಅಧ್ಯಕ್ಷ ಸ್ಥಾನ ಬೇಡವೆನ್ನುತ್ತಲೇ ಅಧಿಕಾರ ಸ್ವೀಕರಿಸಿದ ಶಾಸಕ ಸಿದ್ದು ಸವದಿ!

ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನನಗೆ ಬೇಡ, ಕ್ಷೇತ್ರದ ಕಾರ್ಯಕರ್ತರಿಗೆ ಕೊಡಿ ಎನ್ನುತ್ತಿದ್ದ  ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಶಾಸಕ ಸಿದ್ದು ಸವದಿ
ಶಾಸಕ ಸಿದ್ದು ಸವದಿ

ಬಾಗಲಕೋಟೆ: ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನನಗೆ ಬೇಡ, ಕ್ಷೇತ್ರದ ಕಾರ್ಯಕರ್ತರಿಗೆ ಕೊಡಿ ಎನ್ನುತ್ತಿದ್ದ  ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಇಂದು  ಅಧಿಕಾರ ಸ್ವೀಕರಿಸಿದ್ದಾರೆ.

 ತೇರದಾಳ ವಿಧಾನಸಭೆ ಕ್ಷೇತ್ರ ನೇಕಾರರೇ ಹೆಚ್ಷಾಗಿರುವ ಕ್ಷೇತ್ರ. ನೇಕಾರರು ಯಾರ ಪಲ ಒಲವು ವ್ಯಕ್ತ ಪಡಿಸುತ್ತಾರೋ ಅವರೇ ಅಲ್ಲಿ ಶಾಸಕರಾಗುತ್ತಾರೆ ಎನ್ನುವುದು ಹಿಂದಿನ ಮೂರು ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ.ತೇರದಾಳ ಕ್ಷೇತ್ರದಿಂದ ಸಿದ್ದು  ಸವದಿ ಎರಡು ಬಾರಿ, ಮಾಜಿ ಸಚಿವೆ ಉಮಾಶ್ರೀ ಒಂದು ಬಾರಿ ಆಯ್ಕೆಗೊಂಡಿದ್ದಾರೆ.

ಈಗಾಗಲೇ ಶಾಸಕ ಸಿದ್ದು ಸವದಿ  ಹಿಂದಿನ ಅವಧಿಯಲ್ಲಿ ಪಾವರಲೂಮ್ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಕೆಎಚ್ಡಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ಇದುವರೆಗೂ ನೇಕಾರ ಮುಖಂಡರೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.ಎಂ.ಡಿ.ಲಕ್ಷ್ಮೀನಾರಾಯಣ,ಎಚ್. ನಾಗಪ್ಪ, ರವಿ ಕಲಬುರ್ಗಿ ಅಧ್ಯಕ್ಷರಾಗಿದ್ದರು.ರಾಜಕೀಯ ಪಕ್ಷಗಳ ಕಾರ್ಯಕರ್ತರ ಪಾಲಿನ ಗಂಜಿ ಕೇಂದ್ರವಾಗಿರುವ ಕೆಎಚ್ಡಿಸಿ ನಿಗಮ ಸಾಲದ ಸುಳಿಗೆ ಸಿಕ್ಕು ಒದ್ದಾಡುತ್ತಿದೆ.ನೇಕಾರರ ಅಭಿವೃದ್ಧಿಗಾಗಿ ದಿ.ದೇವರಾಜ ಅರಸು ಅವರು ನಿಗಮ ಸ್ಥಾಪನೆ  ಮಾಡಿದ್ದರು.ಆದರೆ,ಇದುವರೆಗೂ ಅವರ ಆಶಯ ಈಡೇರಿಲ್ಲ. ಕಳೆದ ಹತ್ತು-ಹದಿನೈದು ವರ್ಷಗಳಿಂದಲೂ ನೂರಾರು ಕೋಟಿ ರೂಪಾಯಿ ಸಾಲದಲ್ಲಿ ಇದೆ.ಸದ್ಯ 110 ಕೋಟಿ ರೂಪಾಯಿ ಸಾಲ ಹೊಂದಿದೆ. ಪ್ರತಿ ವರ್ಷ 9 ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತಿದೆ.

ಇಂತಹ ನಿಗಮದ ಅಧ್ಯಕ್ಷತೆ ತಮಗೆ ಬೇಡವೆಂದಿದ್ದ ಶಾಸಕ ಸಿದ್ದು ಸವದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನೂ ಭೇಟಿ ನಿಗಮದ ಅಧ್ಯಕ್ಷತೆಯನ್ನು ನೇಕಾರ ಮುಖಂಡರಿಗೆ ಕೊಡಿ ಎಂದು ಕೇಳಿಕೊಂಡಿದ್ದರು.ಇದರಿಂದ ತೇರದಾಳ ಕ್ಷೇತ್ರದ ಬಿಜೆಪಿ ಮುಖಂಡರೂ ಖುಷಿಯಾಗಿದ್ದರು.ಆದರೆ ಇದೀಗ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಇದು ನೇಕಾರ ಮುಖಂಡರಲ್ಲಿ ಸಹಜವಾಗಿಯೇ ಅಸಮಾಧಾನಕ್ಕೂ ಕಾರಣವಾಗಿದೆ. 

ನೂರಾರು ಕೋಟಿ ರೂಪಾಯಿಗಳ ಸಾಲದ ಸುಳಿಯಲ್ಲಿರುವ ಈ ರೋಗಗ್ರಸ್ತ ನಿಗಮಕ್ಕೆ ಶಾಸಕ ಸವದಿ ಮೇಜರ್ ಸರ್ಜಿ ಮಾಡಬೇಕಿದೆ.ರೈತ ಮತ್ತು ನೇಕಾರರು ನನ್ನ ಎರಡು ಕಣ್ಣುಗಳು ಎಂದು ಆಗಾಗ್ಗೆ ಹೇಳುತ್ತಲೇ ಇರುವ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಿ.ನಿಗಮಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿಸಿಕೊಂಡು ನಿಗಮವನ್ನು ಸಾಲದ ಸುಳಿಯಿಂದ ಪಾರು ಮಾಡುವ ಗುರುತರ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ಆ ಮೂಲಕ ನಿಗಮದಲ್ಲಿ ಕೆಲಸ ಮಾಡುತ್ತಿರುವ 5600 ಜನ ನೇಕಾರರ ನೆರವಿಗೆ ಧಾವಿಸಬೇಕಿದೆ. 

ಕೆಎಚ್ಡಿಸಿ ನಿಗಮಕ್ಕೆ ಶಿಕ್ಷಣ ಇಲಾಖೆಯಿಂದ ವಿದ್ಯಾ ವಿಕಾಸ ಯೋಜನೆಯಡಿ 20 ಕೋಟಿ ರೂ. ಬಾಕಿ ಬರಬೇಕಿದೆ. ಅದರ ವಸೂಲಾತಿಗೆ ಕ್ರಮ ಕೈಗೊಳ್ಳುವ ಜತೆಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಯೋಜನೆಯಡಿ ಬಟ್ಟೆ ಪೂರೈಸುವ ಗುತ್ತಿಗೆಯನ್ನು ಪಡೆಯುವ ಮೂಲಕ ಕೆಎಚ್ಡಿಸಿ ನೇಕಾರರಿಗೆ ನಿರಂತರ ಉದ್ಯೋಗ ಕಲ್ಪಿಸುವ ಕೆಲಸಕ್ಕೆ ಆದ್ಯ ಗಮನ ಹರಿಸಬೇಕಿದೆ.

ಆ ಮೂಲಕ ನೇಕಾರರೇ ಹೆಚ್ಚಾಗಿರುವ ಕ್ಷೇತ್ರದಿಂದ ಆಯ್ಕೆಗೊಂಡದ್ದೂ ಸಾರ್ಥಕವಾಗಲಿದೆ.ಶಾಸಕ ಸವದಿ ಎಷ್ಟರ ಮಟ್ಟಿಗೆ ಕೆಎಚ್ಡಿಸಿಯನ್ನು ಸಾಲದ ಸುಳಿಯಿಂದ ಪಾರು ಮಾಡಿ ನೇಕಾರರ ಕಲ್ಯಾಣಕ್ಕೆ ಅಣಿಯಾಗುತ್ತಾರೋ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ !.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com