ಐದನೇ ಬಾರಿಗೆ ಕೆಆರ್ ಎಸ್ ಗೆ ಸಿಎಂ ಬಾಗಿನ ಅರ್ಪಣೆ: ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಪ್ರತಿಭಟನಾಕರರ ಬಂಧನ

ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ನಡುವೆಯೇ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್​ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.
ಕಾವೇರಿಗೆ ಸಿಎಂ ಬಾಗಿನ ಅರ್ಪಣೆ
ಕಾವೇರಿಗೆ ಸಿಎಂ ಬಾಗಿನ ಅರ್ಪಣೆ

ಮಂಡ್ಯ:  ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ನಡುವೆಯೇ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್​ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.

ಸತತ 5 ಬಾರಿ ಸಿಎಂ ಬಿಎಸ್​ವೈ ಕಾವೇರಿ ನದಿಗೆ ಬಾಗಿನ ಅರ್ಪಿಸಿದ್ದಾರೆ. ಇದರೊಂದಿಗೆ ಕಾವೇರಿ ನದಿಗೆ ಅತೀ
ಹೆಚ್ಚು ಸಲ ಬಾಗಿನ ಅರ್ಪಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ವಿಶೇಷ ಹೆಲಿಕ್ಯಾಪ್ಟರ್​ ಮೂಲಕ ಕೃಷ್ಣರಾಜಸಾಗರ ಅಣೆಕಟ್ಟೆಗೆ ಆಗಮಿಸಿದ ಯಡಿಯೂರಪ್ಪ, ಕಾವೇರಿ ನದಿಗೆ ಬಾಗಿನ ಅರ್ಪಣೆ ಮಾಡಿದರು. ಅರ್ಚಕ ಡಾ.ಭಾನು ಪ್ರಕಾಶ್ ಶರ್ಮಾ ಅವರ ನೇತೃತ್ವದಲ್ಲಿ ಬಾಗೀನಕ್ಕೆ ಪೂಜೆ ಮಾಡಲಾಯಿತು. ಕಳೆದ ವರ್ಷವೂ ಆಗಸ್ಟ್​ 21ರಂದು ಕೆಆರ್​​ಎಸ್​ ಜಲಾಶಯ ಭರ್ತಿಯಾಗಿತ್ತು. ಆಗ ಸಿಎಂ ಬಿಎಸ್​ ಯಡಿಯೂರಪ್ಪ ಕಾವೇರಿ ತಾಯಿಗೆ ಬಾಗಿನ ಅರ್ಪಣೆ ಮಾಡಿದ್ದರು. 

ಬಾಗಿನ ಸಮರ್ಪಣೆ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಿತು. ಜಲಸಂಪನ್ಮೂಲ ಇಲಾಖೆಯ ಒಂದು ವರ್ಷದ ಸಾಧನೆ ಪುಸ್ತಕವನ್ನು ಸಿಎಂ ಬಿಎಸ್​ವೈ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ 5ನೇ ಬಾರಿ ಕಾವೇರಿಗೆ ಬಾಗಿನ ಸಲ್ಲಿಸುವ ಸೌಭಾಗ್ಯ ನನ್ನದು ಎಂದು ಹೇಳಿದರು.

ಜಗತ್ ಪ್ರಸಿದ್ದ ಬೃಂದಾವನವನ್ನು ವಿಶ್ವದರ್ಜೆಗೇರಿಸಲು ಸರ್ಕಾರದ ಚಿಂತನೆ ನಡೆಸುತ್ತಿದೆ ಎಂದ ಅವರು, ಕೇಂದ್ರದ ಅನುಮತಿ ಪಡೆದು ಮೇಕೆಧಾಟು ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದರು.

ನೀರಾವರಿಗೆ ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದ್ದು,  ಇದುವರೆಗೂ ನೀರಾವರಿ ಯೋಜನೆಗಳಿಗೆ 74ಸಾವಿರ ಮಂಜೂರು ಮಾಡಲಾಗಿದೆ, ರೈತರ ಜಮೀನಿಗೆ ನೀರೊದಗಿಸುವ ಯೋಜನೆ ಆರಂಭವಾಗಿದೆ ಎಂದು ವಿವರಿಸಿದರು. ರಾಜ್ಯದ ಎಲ್ಲಾ ಜಲಾಶಯಗಳು, ಕೆರೆ-ಕಟ್ಟೆಗಳು ತುಂಬಿರುವುದು ಸಂತಸದ ವಿಚಾರವಾಗಿದೆ,  8.48ಕೋಟಿ ವೆಚ್ಚದಲ್ಲಿ ಹೊಸದಾಗಿ
ಕೆಆರ್ ಎಸ್ ಗೆ 16 ಗೇಟ್ ಗಳ ಅಳವಡಿಕೆ ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.

ಬಾಗಿನ ಅರ್ಪಣೆ ಮಾಡುವ ವೇಳೆ ಸಂಸದೆ ಸುಮಲತಾ, ಸಚಿವ ರಮೇಶ್ ಜಾರಕಿ ಹೋಳಿ, ಶಾಸಕ ರವೀಂದ್ರ ಶ್ರೀಕಂಠಯ್ಯ, ಎಂಎಲ್ಸಿ ಶ್ರೀಕಂಠೇಗೌಡ, ಸಚಿವರಾದ ಸೋಮಶೇಖರ್, ನಾರಾಯಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕ ಪುಟ್ಟರಾಜು, ಶ್ರೀನಿವಾಸ್ ಹಾಗೂ ಎಂಎಲ್ಸಿ ಅಪ್ಪಾಜಿಗೌಡ ಭಾಗಿಯಾಗಿದ್ದರು. 

ಇನ್ನು, ಸಿಎಂ ಆಗಮನದ ಹಿನ್ನಲೆ ಕೆಆರ್​​ಎಸ್​ ಡ್ಯಾಂ ಬಳಿ ಬಿಗಿಭದ್ರತೆ ಒದಗಿಸಲಾಗಿತ್ತು. ರೈತ ಸಂಘದವರು ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಸಿಎಂಗೆ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಮುಜಾಗ್ರತಾ ಕ್ರಮವಾಗಿ ಪೊಲೀಸರು ಪ್ರತಿಭಟನಾಕರರ ಬಂಧಿಸಿದ್ದಾರೆ.

ಮಂಡ್ಯ ಹಾಗೂ ಪಾಂಡವಪುರ ಭಾಗದಿಂದ ಕೆಆರ್ ಎಸ್ ಗೆ ಬರುತ್ತಿದ್ದವರನ್ನು ಕಟ್ಟೇರಿಯಲ್ಲಿ ತಡೆದ ಪೊಲೀಸರು .ಶ್ರೀರಂಗಪಟ್ಟಣ ಭಾಗದಿಂದ ಬರುತ್ತಿದ್ದವರನ್ನು ಬೆಳಗೋಳದಲ್ಲಿ ತಡೆದು ಬಂಧಿಸಿದ್ದಾರೆ.


ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com