ಜಾಲಹಳ್ಳಿ ಟ್ರಾಫಿಕ್ ಠಾಣೆಯ ಆರು ಸಿಬ್ಬಂದಿ ಅಮಾನತು

ಕರ್ತವ್ಯ ಮರೆತು ಪಾರ್ಕ್‌ನಲ್ಲಿ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಜಾಲಹಳ್ಳಿ ಟ್ರಾಫಿಕ್ ಠಾಣೆಯ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಸೌಮ್ಯಲತಾ ಆದೇಶ ಹೊರಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ತವ್ಯ ಮರೆತು ಪಾರ್ಕ್‌ನಲ್ಲಿ ಗುಂಪು ಸೇರಿದ್ದ ಹಿನ್ನೆಲೆಯಲ್ಲಿ ಜಾಲಹಳ್ಳಿ ಟ್ರಾಫಿಕ್ ಠಾಣೆಯ ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಸೌಮ್ಯಲತಾ ಆದೇಶ ಹೊರಡಿಸಿದ್ದಾರೆ.

ಜಾಲಹಳ್ಳಿ ಸಂಚಾರ ಠಾಣೆಯ ಎಎಸ್‌ಐ ಮಂಜುನಾಥಯ್ಯ, ಹೆಡ್ ಕಾನ್ಸ್​ಟೇಬಲ್​ ನಾಗರಾಜು, ಕಾನ್ಸ್​ಟೇಬಲ್​ಗಳಾದ ಪದ್ಮನಾಭ್, ಮಧುಸೂದನ್, ವಿಶ್ವನಾಥ್, ಮಹಿಳಾ ಕಾನ್ಸ್​ಟೇಬಲ್ ಸುಜನಾ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ, ಅಮಾನತು ಅವಧಿಯಲ್ಲಿ ಖಾಸಗಿ ನೌಕರಿ ಹಾಗೂ ವ್ಯವಹಾರ  ಕೈಗೊಂಡರೇ ಜೀವನ ಭತ್ಯೆ ಮುಟ್ಟುಗೋಲು ಹಾಕಿಕೊಳ್ಳುವುದರೊಂದಿಗೆ ಶಿಸ್ತು ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಜಾಲಹಳ್ಳಿ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ ಆ.11ರಂದು ಠಾಣೆಯ ಆರು ಸಿಬ್ಬಂದಿಯನ್ನು ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಕೋಬ್ರಾ ಡ್ಯೂಟಿಗೆ, ಜಾಲಹಳ್ಳಿ ಜಂಕ್ಷನ್‌, ಗಂಗಮ್ಮನ ವೃತ್ತ, ಸಾಹಿತ್ಯ ಕೂಟ ಜಂಕ್ಷನ್‌ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ಸಂಚಾರ ನಿರ್ವಹಣೆಯ ಕರ್ತವ್ಯಕ್ಕೆ ನಿಯೋಜಿಸಿದ್ದರು. ಕರ್ತವ್ಯ  ನಿಯೋಜಿಸುವ ಮುನ್ನ ಕೊರೋನಾ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್‌ ಧರಿಸುವುದು ಸೇರಿದಂತೆ ಮುಂಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ.

ನಿಯಮ ಪಾಲಿಸದೆ, ಕರ್ತವ್ಯದ ಸಮಯದಲ್ಲಿ 6 ಮಂದಿ ಸಿಬ್ಬಂದಿ ಸಾಹಿತ್ಯ ಕೂಟ ವೃತ್ತದಲ್ಲಿರುವ ಜಂಕ್ಷನ್‌ ಬಳಿ ಇರುವ  ಪಾರ್ಕ್‌ನಲ್ಲಿ ಅಕ್ಕ-ಪಕ್ಕ ಕುಳಿತು ಹರಟೆ ಹೊಡೆಯುತ್ತಿದ್ದರು. ಸಿಬ್ಬಂದಿ ಹರಟೆ ಹೊಡೆಯುತ್ತಿರುವುದನ್ನು ನೋಡಿದ ಹಿರಿಯ ಅಧಿಕಾರಿಯೊಬ್ಬರು ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಠಾಣಾ ಇನ್ಸ್‌ಪೆಕ್ಟರ್‌ ಡಿಸಿಪಿ ಅವರಿಗೆ ನೀಡಿದ ವರದಿ ಮೇಲೆ ಆರು ಮಂದಿ ಸಿಬ್ಬಂದಿಯನ್ನು ಅಮಾನತುಗೊಳಿಸಿ ಡಿಸಿಪಿ ಆದೇಶ  ಹೊರಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com