ರಕ್ಷಣೆ ಮಾಡಬೇಕಿದ್ದ ಪೊಲೀಸನಿಂದಲೇ ಅಪಹರಣ, ಸುಲಿಗೆ: ಎಸ್ಐ, ಪತ್ರಕರ್ತ ಬಂಧನ

ರಕ್ಷಣೆ ಮಾಡಬೇಕಿದ್ದ ಪೊಲೀಸನಿಂದಲೇ ವ್ಯಕ್ತಿಯೊಬ್ಬನ ಅಪಹರಣ ಹಾಗೂ ಸುಲಿಗೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಇದೀಗ ಪೊಲೀಸ್ ಸಬ್ ಇನ್ಸ್'ಪೆಕ್ಟರ್ ಹಾಗೂ ಪತ್ರಕರ್ತನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಕ್ಷಣೆ ಮಾಡಬೇಕಿದ್ದ ಪೊಲೀಸನಿಂದಲೇ ವ್ಯಕ್ತಿಯೊಬ್ಬನ ಅಪಹರಣ ಹಾಗೂ ಸುಲಿಗೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಇದೀಗ ಪೊಲೀಸ್ ಸಬ್ ಇನ್ಸ್'ಪೆಕ್ಟರ್ ಹಾಗೂ ಪತ್ರಕರ್ತನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಕನ್ನಡ ಪತ್ರಿಕೆಯೊಂದರ ವರದಿಗಾರ ಜ್ಞಾನಪ್ರಕಾಶ್ ಆಂಥೋನಪ್ಪ (44) ಹಾಗೂ ಎಸ್ಐ ಜೀವನ್ ಕುಮಾರ್ (31) ಥಾಮಸ್ ಬಂಧಿತ ಆಱೋಪಿಗಳಾಗಿದ್ದಾರೆ. 

ಜೀವನ್ ಕುಮಾರ್ ಪತ್ರಕರ್ತ ಜ್ಞಾನಪ್ರಕಾಶ್ ಅವರ ಸಂಬಂಧಿಯನ್ನು ವಿವಾಹವಾಗಿದ್ದಾರೆ. ತುಮಕೂರಿನ ಗುಬ್ಬಿ ನಿವಾಸಿ ಮೋಹನ್ ಅಡಕೆ, ತೆಂಗು ಬೆಳೆಗಾರರಾಗಿದ್ದು, ಬೆಂಗಳೂರಿನ ಚಿಕ್ಕಪೇಟೆಯ ಕಂಬಾರಪೇಟೆಯಲ್ಲಿ ವ್ಯಾಪಾರಿ ಭರತ್'ಗೆ ಅಡಕೆ, ತೆಂಗು ಮಾರಾಟ ಮಾಡಿದ್ದರು. ಭರತ್ ನಿಂದ ರೂ.26.50ಲಕ್ಷವನ್ನು ಕಾರಿನಲ್ಲಿ ತರುವಂತೆ ಆ.19ರಂದು ಬೆಳಿಗ್ಗೆ 10.30ರಲ್ಲಿ ಕೆಲಸಗಾರ ಶಿವಕುಮಾರಸ್ವಾಮಿಗೆ ಮೋಹನ್ ಸೂಚಿಸಿದ್ದರು.

ಮತ್ತೊಬ್ಬ ಕೆಲಸಗಾರ ದರ್ಶನನ್ನು ಶಿವಸ್ವಾಮಿ ಜೊತೆ ಮಾಡಿ ಬೆಂಗಳೂರಿಗೆ ಕಳುಹಿಸಿದ್ದರು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ಬಂದು ಶಿವಕುಮಾರಸ್ವಾಮಿ, ಭರತ್'ಗೆ ಕರೆ ಮಾಡಿದ್ದರು. ಬಳಿಕ ಚಿಕ್ಕಪೇಟೆಯಲ್ಲಿರುವ ಮರುಧರ್ ಟ್ರೇಡರ್ಸ್ಸ್ ಅಂಗಡಿ ಬಳಿ ಬಂದು ಭರತ್ ನಿಂದ ಶಿವಕುಮಾರಸ್ವಾಮಿ ಅವರು ಹಣ ಪಡೆದಿದ್ದರು. ಹಣ ಪಡೆದ ಬಳಿಕ ಶಿವಕುಮಾರಸ್ವಾಮಿ ಮಾಲೀಕ ಮೋಹನ್'ಗೆ ಹಣ ಪಡೆದಿರುವ ವಿಚಾರ ತಿಳಿಸಿದ್ದರು. ಈ ವೇಳೆ ಮೋಹನ್ ಅವರು ಇನ್ನೂ ರೂ.2 ಲಕ್ಷ ಬಾಕಿ ಬರಬೇಕಿದ್ದು, ಆ ಹಣವನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಹೀಗಾಗಿ ಶಿವಕುಮಾರಸ್ವಾಮಿ ಹಾಗೂ ಮತ್ತೊಬ್ಬ ಕೆಲಸಗಾರ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಬಳಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದರು. 

ಈ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದ ಆರೋಪಿಗಳಾದ ಜ್ಞಾನಪ್ರಕಾಶ್ ಹಾಗೂ ಜೀವನ್ ಕುಮಾರ್ ಏಕಾಏಕಿ ಶಿವಕುಮಾರಸ್ವಾಮಿ ಹಾಗೂ ದರ್ಶನ್ ಕುತ್ತಿಗೆ, ಪ್ಯಾಂಟಿನ ಸೊಂಟದ ಕಾಲರ್ ಹಿಡಿದು ಹಲ್ಲೆ ನಡೆಸಿ, ಮೊಬೈಲ್ ಕಸಿದುಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಸಿದ್ದರು. ನಾವು ಪೊಲೀಸರಾಗಿದ್ದು, ನಾವು ಹೇಳುವ ಜಾಗಕ್ಕೆ ಕಾರು ಚಲಾಯಿಸಿಕೊಂಡು ಹೋಗುವಂತೆ ಸೂಚಿಸಿದ್ದರು. ಬಲವಂತವಾಗಿ ಇಬ್ಬರನ್ಮನೂ ಇವರ ಕಾರಿನೊಳಗೆ ಕೂರಿಸಿದ ಆರೋಪಿಗಳು, ಯುನಿಟಿ ಬಿಲ್ಡಿಂಗ್ ಬಳಿ ಕರೆದೊಯ್ದಿದ್ದಾರೆ. ಇವರಿಂದ ರೂ.26.50 ಲಕ್ಷ ಇದ್ದ ಬ್ಯಾಗನ್ನು ಕಸಿದುಕೊಂಡು ಸ್ವಿಫ್ಟ್ ಕಾರಿನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ ಆರೋಪಿಗಳ ಸಹಚರರಿಗೆ ಹಸ್ತಾಂತರಿಸಿದ್ದರು. ನಂತರ ಇಬ್ಬರನ್ನೂ ಲಾಲ್'ಬಾಗ್ ರಸ್ತೆಯ ಹೋಟೆಲ್ ವೊಂದರ ಬಳಿ ಕರೆದುಕೊಂಡು ಹೋಗಿ ಮೊಬೈಲ್ ನೀಡಿ ಹೋಗುವಂತೆ ಎಚ್ಚರಿಸಿದ್ದರು, ಶಿವಕುಮಾರಸ್ವಾಮಿ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. 

ಕೂಡಲೇ ಎಚ್ಚೆತ್ತ ಡಿಸಿಪಿ ಸಂಜೀವ್ ಕುಮಾರ್ ಪಾಟೀಲ್ ಅವರು ಆರೋಪಿಗಳ ಬಂಧನಕ್ಕೆ ತಂಡ ರಚನೆ ಮಾಡಿದ್ದರು. ಪೊಲೀಸ್ ತಂಡ, ಆರೋಪಿಗಳು ಶಿವಕುಮಾರಸ್ವಾಮಿಯನ್ನು ಕಾರಿನಲ್ಲಿ ಕರೆದೊಯ್ದು ರಸ್ತೆ ಬಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿತ್ತು. ಈ ವೇಳೆ ಆರೋಪಿಗಳ ಮುಖಚಹರೆ, ಕಾರಿನ ನಂಬರ್ ಹಾಗೂ ಕರ್ತವ್ಯನಿರತ ಸಬ್ ಇನ್ಸ್ ಪೆಕ್ಟರ್ ಮುಂಬೆ ಬೈಕ್ ನಲ್ಲಿ ಹೋಗುತ್ತಿದ್ದ ದೃಶ್ಯ ಸೆರೆ ಸಿಕ್ಕಿದೆ. ಈ ಆಧಾರದ ಮೇಲೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾರೆಂದು ಪೊಲೀಸರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com