'ಅಕ್ಕಿ ಎಟಿಎಂ'ತೆರೆಯಲು ರಾಜ್ಯ ಸರ್ಕಾರ ಚಿಂತನೆ; ಏನಿದು, ಹೇಗೆ ಕೆಲಸ ಮಾಡುತ್ತದೆ?

ಎಟಿಎಂನಿಂದ ಹಣ ಬರುವುದು ನೋಡಿದ್ದೇವೆ, ನಾವು ತಿನ್ನುವ ಅಕ್ಕಿ ಸಿಗುವ ಬಗ್ಗೆ ಕೇಳಿದ್ದೀರಾ?ಎಟಿಎಂ ಮೂಲಕ ಅಕ್ಕಿ ಸಿಗುವ ಯೋಜನೆಯನ್ನು ಮಾಡುತ್ತಿದೆ ಕರ್ನಾಟಕ ಸರ್ಕಾರ. ಕಾಯಿನ್ ಹಾಕಿದರೆ ನೀರು ಸಿಗುವಂತೆ ಈ ಯಂತ್ರದ ಮೂಲಕ ಕಾಯಿನ್ ಮೂಲಕ ಅಕ್ಕಿ ಪಡೆಯಬಹುದು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:ಎಟಿಎಂನಿಂದ ಹಣ ಬರುವುದು ನೋಡಿದ್ದೇವೆ, ನಾವು ತಿನ್ನುವ ಅಕ್ಕಿ ಸಿಗುವ ಬಗ್ಗೆ ಕೇಳಿದ್ದೀರಾ?
ಎಟಿಎಂ ಮೂಲಕ ಅಕ್ಕಿ ಸಿಗುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ ಕರ್ನಾಟಕ ಸರ್ಕಾರ. ಕಾಯಿನ್ ಹಾಕಿದರೆ ನೀರು ಸಿಗುವಂತೆ ಕಾಯಿನ್ ಮೂಲಕ ಅಕ್ಕಿ ಪಡೆಯಬಹುದು.

ಸದ್ಯ ಸಾರ್ವಜನಿಕ ಪಡಿತರ ಇಲಾಖೆ ಮೂಲಕ ಬಿಪಿಎಲ್ ಕಾರ್ಡು ಇರುವವರಿಗೆ ಉಚಿತವಾಗಿ ಮತ್ತು ಎಪಿಎಲ್ ಕಾರ್ಡು ಹೊಂದಿರುವವರಿಗೆ ಒಂದು ನಿರ್ದಿಷ್ಟ ಮೊತ್ತಕ್ಕೆ ಹಣ ನೀಡಿದರೆ ಅಕ್ಕಿ, ಬೇಳೆ ಕಾಳುಗಳು ಸಿಗುತ್ತದೆ. ಆದರೆ ನ್ಯಾಯಬೆಲೆ ಅಂಗಡಿ ತೆರೆದಿರುವ ಸಮಯದಲ್ಲಿ ಹೋಗಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ತರಬೇಕು.

ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಯಾವ ಸಮಯದಲ್ಲಿಯಾದರೂ ಹೋಗಿ ಕಾಯಿನ್ ಹಾಕಿದರೆ ಅಕ್ಕಿ ಬರುವ ವ್ಯವಸ್ಥೆಯನ್ನು ತರಲು ಕರ್ನಾಟಕ ಸರ್ಕಾರ ನೋಡುತ್ತಿದೆ. ನಮ್ಮ ದೇಶದಲ್ಲಿ ಸದ್ಯ ಇಂತಹ ವ್ಯವಸ್ಥೆಯಿಲ್ಲ, ಇಂಡೋನೇಷಿಯಾ, ವಿಯೆಟ್ನಾಂಗಳಲ್ಲಿ ಇದೆ. ಕಳೆದ ಮೇಯಲ್ಲಿ ಕೊರೋನಾ ಸೋಂಕಿನಿಂದ ಜನರು ಕಷ್ಟಪಡುತ್ತಿರುವಾಗ, ಆಹಾರಕ್ಕೆ ಪರದಾಡುತ್ತಿರುವಾಗ ಜಕಾರ್ತದಾದ್ಯಂತ ಇಂಡೋನೇಷಿಯಾ ಸರ್ಕಾರ ಈ ಎಟಿಎಂ ವ್ಯವಸ್ಥೆಯನ್ನು ತಂದಿತು. ಅದನ್ನು ಕರ್ನಾಟಕದಲ್ಲಿ ಕೂಡ ತರಲು ಸರ್ಕಾರ ಚಿಂತನೆ ನಡೆಸಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ನಾಗರಿಕ ಮತ್ತು ಆಹಾರ ಪೂರೈಕೆ ಇಲಾಖೆ ಸಚಿವ ಕೆ ಗೋಪಾಲಯ್ಯ, ಬಡವರಿಗೆ ಸಹಾಯ ಮಾಡಲು ಅಕ್ಕಿಯ ಎಟಿಎಂ ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ಬಂದಿದೆ. ಅದನ್ನು ವಿವಿಧ ಗಾತ್ರಗಳಲ್ಲಿ ಅಂದರೆ 100 ಕೆಜಿ, 200 ಕೆಜಿ ಮತ್ತು 500 ಕೆಜಿ ತೂಕದಲ್ಲಿ ತರಲು ಯೋಚಿಸುತ್ತಿದ್ದೇವೆ. ಒಂದು ಬಾರಿ ಕಾಯಿನ್ ನ್ನು ಹಾಕಿದರೆ ನಿರ್ದಿಷ್ಟ ಪ್ರಮಾಣದ ಅಕ್ಕಿ ಹೊರಬರುತ್ತದೆ. ಇದು ಹೇಗೆ ಕೆಲಸ ಮಾಡುತ್ತದೆ, ಪರಿಣಾಮಕಾರಿಯಾಗಿ ಅನುಷ್ಠಾನವಾಗಬಹುದೇ, ಅಕ್ಕಿ ಮುಗಿದಾಗ ಮರು ತುಂಬಿಸುವುದು ಹೇಗೆ ಎಂದೆಲ್ಲ ಸಾಧ್ಯತೆಗಳನ್ನು ನಾವು ನೋಡುತ್ತಿದ್ದೇವೆ ಎಂದರು.

ಆರಂಭದಲ್ಲಿ ಪ್ರಾಯೋಗಿಕವಾಗಿ ಎಟಿಎಂ ಯಂತ್ರವನ್ನು ಒಂದೆರಡು ಸ್ಥಳದಲ್ಲಿ ಸ್ಥಾಪಿಸುತ್ತೇವೆ. ನಮಗೆ ಉತ್ತಮ ಫಲಿತಾಂಶ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಹಲವೆಡೆ ಸ್ಥಾಪಿಸಲಾಗುವುದು. ರಾಜ್ಯದಲ್ಲಿ ಪಡಿತರ ಚೀಟಿಯ ಬಹುತೇಕ ಫಲಾನುಭವಿಗಳು ದಿನಗೂಲಿ ನೌಕರರು. ಅಕ್ಕಿ, ಬೇಳೆಕಾಳು ಬೇಕೆಂದರೆ ಕೆಲಸಕ್ಕೆ ರಜೆ ಹಾಕಿ ಪಡಿತರ ಅಂಗಡಿ ಮುಂದೆ ಹೋಗಿ ಸರದಿಯಲ್ಲಿ ನಿಂತು ತರಬೇಕಾಗುತ್ತದೆ. ಅಂತವರಿಗೆ ಇದು ಉಪಯೋಗವಾಗಲಿದೆ. ರೇಷನ್ ಕಾರ್ಡು ಹೊಂದಿರುವವರಿಗೆ ಬೆರಳಿನ ಬಯೊಮೆಟ್ರಿಕ್ ವ್ಯವಸ್ಥೆ ತರಲಾಗುವುದು ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com