ಐಎಂಎ ಹಗರಣ: ಮಾಜಿ ಸಚಿವ ರೋಷನ್ ಬೇಗ್ ಆಸ್ಪತ್ರೆಯಿಂದ ಮತ್ತೆ ಜೈಲಿಗೆ!
ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಜೈಲಿಗೆ ಹೋಗುತ್ತಿದ್ದಂತೆ ಎದೆನೋವು ಮುಂತಾದ ಆರೋಗ್ಯ ಸಮಸ್ಯೆಗಳ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿನ್ನೆ ಡಿಸ್ಚಾರ್ಜ್ ಆಗಿ, ಮತ್ತೆ ಜೈಲು ಸೇರಿದ್ದಾರೆ.
Published: 01st December 2020 08:22 AM | Last Updated: 01st December 2020 12:48 PM | A+A A-

ರೋಷನ್ ಬೇಗ್
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು. ಜೈಲಿಗೆ ಹೋಗುತ್ತಿದ್ದಂತೆ ಎದೆನೋವು ಮುಂತಾದ ಆರೋಗ್ಯ ಸಮಸ್ಯೆಗಳ ನೆಪ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ನಿನ್ನೆ ಡಿಸ್ಚಾರ್ಜ್ ಆಗಿ, ಮತ್ತೆ ಜೈಲು ಸೇರಿದ್ದಾರೆ.
ಎದೆನೋವಿನ ಹಿನ್ನೆಲೆಯಲ್ಲಿ ನವೆಂಬರ್ 25 ರಂದು ರೋಷನ್ ಬೇಗ್ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೇಗ್ ಅಧಿಕ ರಕ್ತದೊತ್ತಡ ಮತ್ತು ಡಯಾಬಿಟೀಸ್ ನಿಂದ ಬಳಲುತ್ತಿದ್ದರು.
ಐಎಂಎ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ರೋಷನ್ ಬೇಗ್ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದರು. ಅವರ ಆರೋಗ್ಯ ಸುಧಾರಿಸುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನ. 22ರಂದು ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು.
ರೋಷನ್ ಬೇಗ್ ಅವರನ್ನು ಕಸ್ಟಡಿಗೆ ಕೊಡುವಂತೆ ಸಿಬಿಐ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದರು. ಈ ಹಿಂದೆ ವಿಚಾರಣೆಗಾಗಿ ರೋಷನ್ ಬೇಗ್ ಅವರನ್ನು ಮೂರು ದಿನ ಸಿಬಿಐ ಕಸ್ಟಡಿಗೆ ನೀಡಿದ ವೇಳೆ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದರಿಂದ ಅವರ ವಿಚಾರಣೆ ಸಾಧ್ಯವಾಗಲಿಲ್ಲ. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆರೋಗ್ಯದ ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ, ವಿಚಾರಣೆ ನಡೆಸಲು ಕಸ್ಟಡಿಗೆ ಕೊಡುವಂತೆ ಸಿಬಿಐ ಪರ ವಕೀಲರು ಮನವಿ ಮಾಡಿದ್ದಾರೆ.
ಹೆಚ್ಚು ಬಡ್ಡಿ ಹಣ ನೀಡುವುದಾಗಿ ಗ್ರಾಹಕರನ್ನು ನಂಬಿಸಿ, ವಂಚನೆ ಮಾಡಿದ ಐಎಂಎ ಕಂಪನಿಯ ಎಂಡಿ ಮೊಹಮ್ಮದ್ ಮನ್ಸೂರ್ ಖಾನ್ ಅವರಿಂದ ಮಾಜಿ ಸಚಿವ ರೋಷನ್ ಬೇಗ್ ಕೋಟ್ಯಂತರ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಈ ಹಿಂದೆ ಮನ್ಸೂರ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋವನ್ನು ರಿಲೀಸ್ ಮಾಡಿದ್ದರು.
ಅದರಲ್ಲಿ ರೋಷನ್ ಬೇಗ್ ತನ್ನಿಂದ 400 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಹೇಳಿದ್ದರು. ಹಣ ವಾಪಾಸ್ ಕೇಳಿದರೆ ರೋಷನ್ ಬೇಗ್ ಜೀವ ಬೆದರಿಕೆಯೊಡ್ಡುತ್ತಿದ್ದಾರೆ ಎಂದುಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿದ್ದ ರೋಷನ್ ಬೇಗ್ ಅವರನ್ನು ಸಿಬಿಐ ಬಂಧಿಸಿತ್ತು.