ಕೊರೋನಾ ಎಫೆಕ್ಟ್: ಮೈಸೂರಿನಲ್ಲಿ ಹೆಚ್ಐವಿ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ
ಮೈಸೂರು ನಗರದಲ್ಲಿ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಹೆಚ್ಐವಿ ಪೀಡಿತರ ಸಂಖ್ಯೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Published: 02nd December 2020 01:14 PM | Last Updated: 02nd December 2020 01:28 PM | A+A A-

ಸಂಗ್ರಹ ಚಿತ್ರ
ಮೈಸೂರು: ಮೈಸೂರು ನಗರದಲ್ಲಿ ಕಳೆದ ಸಾಲಿಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನಲ್ಲಿ ಹೆಚ್ಐವಿ ಪೀಡಿತರ ಸಂಖ್ಯೆ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 2019 ರಿಂದ ಮೈಸೂರು ಜಿಲ್ಲೆಯಲ್ಲಿ ಹೊಸ ಎಚ್‌ಐವಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕೇವಲ 286 ರಷ್ಟಿದೆ, ಏಪ್ರಿಲ್ 2019 ಮತ್ತು ಮಾರ್ಚ್ 2020 ರ ನಡುವೆ 936ಕ್ಕೆ ಹೋಲಿಸಿದರೆ, ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಂಡು ಬಂದಿದೆ.
ಈ ನಡುವೆ ಪರೀಕ್ಷೆಯ ಸಂಖ್ಯೆ ಕಡಿಮೆಯಾಗಿರುವುದರಿಂದ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿರಬಹುದು ಎಂದು ಹೇಳಲಾಗುತ್ತಿದೆ. ಕೊರೋನಾ ಸಾಂಕ್ರಾಮಿಕ ರೋಗದ ಪರಿಣಾಮ ಸಾಕಷ್ಟು ಜನರು ಪರೀಕ್ಷೆಗೊಳಗಾಗಲು ಹಿಂಜರಿಯುತ್ತಿದ್ದಾರೆಂದು ಹೇಳಲಾಗುತ್ತಿದೆ.
ಡಿ.1ರ ವಿಶ್ವ ಏಡ್ಸ್ ದಿನಾಚರಣೆಯೆಂದು ಆಚರಿಸಲಾಗುತ್ತಿದ್ದು, ಇದರಂತೆ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹೆಚ್ಐವಿ ಸೋಂಕು ಪೀಡಿತರ ಕುರಿತು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ.
ಅಂಕಿ ಅಂಶಗಳಲ್ಲಿ 2020 ರ ಏಪ್ರಿಲ್‌ನಿಂದ ಜಿಲ್ಲೆಯಲ್ಲಿ 286 ಮಂದಿ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆಂದು ತಿಳಿಸಿದೆ. 2019 ರ ಏಪ್ರಿಲ್ ಮತ್ತು ನವೆಂಬರ್ ನಡುವೆ 916 ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತದ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದನ್ನು ಸೂಚಿಸುತ್ತಿದೆ.
ಆರೋಗ್ಯ ಇಲಾಖೆ ಈ ವರ್ಷ 13.23 ಲಕ್ಷ ಪರೀಕ್ಷೆಗಳನ್ನು ನಡೆಸಿದ್ದು, ಇದು 2019-20ರಲ್ಲಿ ಮಾಡಿದ 40.28 ಲಕ್ಷ ಪರೀಕ್ಷೆಗಳಲ್ಲಿ ಅರ್ಧಕ್ಕಿಂತ ಕಡಿಮೆಯಾಗಿದೆ. 2018-19ರಲ್ಲಿ ಮೈಸೂರು ಜಿಲ್ಲೆಯಲ್ಲಿ 1,022 ಹೊಸ ಎಚ್‌ಐವಿ ಪ್ರಕರಣಗಳು ಕಂಡುಬಂದಿದ್ದವು. ಕೋವಿಡ್ -19 ರ ಕಾರಣದಿಂದಾಗಿ ಜನರು ಆಸ್ಪತ್ರೆಗಳಿಗೆ ಭೇಟಿ ನೀಡಲು ಹಿಂಜರಿಯುತ್ತಿರುವುದರಿಂದ ಪರೀಕ್ಷೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ ವೈದ್ಯಕೀಯ ಸಿಬ್ಬಂದಿಗಳನ್ನೂ ಕೂಡ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ಹೆಚ್ಐವಿ ಪರೀಕ್ಷೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಡ್ಸ್ ತಡೆಗಟ್ಟುವಿಕೆ ಕುರಿತು ಎನ್'ಜಿಒ ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಸಮಾಜ ಸೇವಕಿ ರಿಷಿಕಾ ಬಾಲನ್ ಅವರು ಮಾತನಾಡಿ, ಪರೀಕ್ಷೆಯಲ್ಲಿನ ಕುಸಿತವು ಆತಂಕಕಾರಿಯಾಗಿದೆ, ಅದರಲ್ಲೂ ಪ್ರಮುಖವಾಗಿ ಜನರು ತಮ್ಮ ಸಾಮಾನ್ಯ ಜೀವನದತ್ತ ಮರಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಬೆಳವಣಿಗೆ ಕಳವಳವನ್ನುಂಟು ಮಾಡುತ್ತಿದೆ. ಅನೇಕ ಪ್ರಕರಣಗಳು ಪತ್ತೆಯಾಗದ ಕಾರಣ, ರೋಗ ಹರಡುವ ಮತ್ತು ಇತರರಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಸೋಂಕು ಹರಡುವುದನ್ನು ತಡೆಗಟ್ಟಲು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.